ಶನಿವಾರ, ಅಕ್ಟೋಬರ್ 23, 2021
23 °C
ಶಾಂತರಾಜಣ್ಣ ಮರು ವರ್ಗಾವಣೆಗೆ ಸುಪ್ರೀಂ ಕೋರ್ಟ್‌ ಸೂಚಿಸಿದ ಬೆನ್ನಲ್ಲೇ ಹೊಸ ಹುದ್ದೆ ಸೃಷ್ಟಿಸಿದ ಸರ್ಕಾರ

ಬಿಡಿಎ: ಮತ್ತೊಂದು ಮುಖ್ಯ ಎಂಜಿನಿಯರ್‌ ಹುದ್ದೆ ಸೃಷ್ಟಿ

ಪ್ರವೀಣ್‌ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸರ್ಕಾರ ಹೆಚ್ಚುವರಿಯಾಗಿ ಮತ್ತೊಂದು ಮುಖ್ಯ ಎಂಜಿನಿಯರಿಂಗ್‌ ಹುದ್ದೆ ಸೃಷ್ಟಿಸಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಡಾ.ಕೆ.ಶಿವರಾಮ ಕಾರಂತ ಬಡಾವಣೆ ರಚನೆ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಬಡಾವಣೆಯ ಕಾರ್ಯವನ್ನು ತ್ವರಿತ ಗತಿಯಲ್ಲಿ ಸಂಪೂರ್ಣಗೊಳಿಸಬೇಕಿರುವುದರಿಂದ ಮುಖ್ಯ ಎಂಜಿನಿಯರ್‌ ವೃಂದದ ಹುದ್ದೆಯನ್ನು ಸೃಜಿಸುವ ಅಗತ್ಯವಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ವರ್ಗಾವಣೆಗೊಂಡ ಬಿಡಿಎ ಎಂಜಿನಿಯರಿಂಗ್‌ ಸದಸ್ಯರನ್ನು ಮತ್ತೆ ಅದೇ ಹುದ್ದೆಗೆ ಮರುವರ್ಗ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಈ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರ ಅದಕ್ಕೆ ಬದಲಾಗಿ ಬಿಡಿಎಯಲ್ಲಿ ಮುಖ್ಯ ಎಂಜಿನಿಯರ್‌ ವೃಂದದ ಮತ್ತೊಂದು ಆಯಕಟ್ಟಿನ ಹುದ್ದೆ ಸೃಷ್ಟಿಸಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.   

ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಡಾ.ಎಚ್.ಆರ್‌.ಶಾಂತರಾಜಣ್ಣ ಅವರು ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರು. ಇತರ ಹೊಣೆಗಾರಿಕೆಗಳ ಜೊತೆ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಉಸ್ತುವಾರಿಯೂ ಅವರದಾಗಿತ್ತು. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದ ಕಾರ್ಯ ಯೋಜನೆ ಬಗ್ಗೆ ಅವರು ಸುಪ್ರೀಂ ಕೋರ್ಟ್‌ನಲ್ಲಿ 2021ರ ಫೆ. 6ರಂದು ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ಈ ಬಡಾವಣೆಯ ಕೆಲಸ ಕಾರ್ಯ ಪೂರ್ಣಗೊಳ್ಳುವವರೆಗೆ ಅವರನ್ನು ವರ್ಗ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿದ್ದ ಪೀಠ ಆ.19ರಂದು ಆದೇಶ ಮಾಡಿತ್ತು.

ಸುಪ್ರೀಂ ಕೋರ್ಟ್‌ ಆದೇಶವನ್ನು ಧಿಕ್ಕರಿಸಿ ರಾಜ್ಯ ಸರ್ಕಾರವು 2021ರ ಆ 31ರಂದು ಅವರನ್ನು ಗೋರೂರಿನ ಹೇಮಾವತಿ ಯೋಜನಾ ವಲಯಕ್ಕೆ ವರ್ಗ ಮಾಡಿತ್ತು. ಸರ್ಕಾರದ ಈ ನಡೆಗೆ ಸುಪ್ರೀಂ ಕೋರ್ಟ್‌ನ ಪೀಠವು ಅಸಮಾಧಾನ ವ್ಯಕ್ತಪಡಿಸಿತ್ತು.

‘ನಮ್ಮ ಆದೇಶವನ್ನು ಧಿಕ್ಕರಿಸಿ ರಾಜ್ಯ ಸರ್ಕಾರವು ಶಾಂತರಾಜಣ್ಣ ಅವರನ್ನು ಬೇರೆ ಇಲಾಖೆಗೆ ವರ್ಗ ಮಾಡಿದೆ. ಶಾಂತರಾಜಣ್ಣ ಅವರನ್ನು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಹುದ್ದೆಗೆ ಮರು ವರ್ಗ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ಪೀಠವು 2021ರ ಸೆ. 7ರಂದು ನಿರ್ದೇಶನ ನೀಡಿತ್ತು.

ಈ ಬೆಳವಣಿಗೆ ಬಳಿಕ ರಾಜ್ಯ ಸರ್ಕಾರವು ಬಿಡಿಎಗೆ ಮತ್ತೊಂದು ಎಂಜಿನಿಯರಿಂಗ್‌ ಸದಸ್ಯ ಹುದ್ದೆಯನ್ನೇ ಸೃಷ್ಟಿಸಲು ಪ್ರಸ್ತಾವ ಸಿದ್ಧಪಡಿಸಿತ್ತು. ಆಡಳಿತಾತ್ಮಕ ಹಿತದೃಷ್ಟಿಯಿಂದ ಡಾ.ಶಿವರಾಮ ಕಾರಂತ ಬಡಾವಣೆಯ ಕರ್ತವ್ಯ ನಿರ್ವಹಣೆಯ ಉದ್ದೇಶಕ್ಕಾಗಿ ಬಿಡಿಎಗೆ ಹೆಚ್ಚುವರಿಯಾಗಿ ಒಂದು ಎಂಜಿನಿಯರಿಂಗ್‌ ಸದಸ್ಯ (ಮುಖ್ಯ ಎಂಜಿನಿಯರ್‌ ವೃಂದ) ಹುದ್ದೆಯನ್ನು ತಕ್ಷಣವೇ ಸೃಜಿಸಲು ಆದೇಶ ಹೊರಡಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಇದೇ 20ರಂದು ಟಿಪ್ಪಣಿಯನ್ನೂ ಕಳುಹಿಸಿದ್ದರು. ಆದರೆ, ಈ ಕುರಿತ ಆದೇಶದಲ್ಲಿ ಹೊಸ ಹುದ್ದೆಯನ್ನು ಇನ್ನೊಂದು ಮುಖ್ಯ ಎಂಜಿನಿಯರಿಂಗ್‌ ಹುದ್ದೆ ಎಂದು ಮಾತ್ರ ಉಲ್ಲೇಖಿಸಲಾಗಿದೆ.

ಶಾಂತರಾಜಣ್ಣ ಅವರು ಬಿಡಿಎ ಎಂಜಿನಿಯರಿಂಗ್‌ ಸದಸ್ಯರಾಗಿ 1 ವರ್ಷ ಎರಡು ತಿಂಗಳುಗಳಷ್ಟೇ ಆಗಿವೆ. ಅವರಿಗೆ ಇನ್ನೂ ನಾಲ್ಕೂವರೆ ವರ್ಷ ಸೇವಾವಧಿ ಇದೆ. ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿದ್ದ ವಿ.ಗೋವಿಂದರಾಜು ಅವರನ್ನು ಆ. 31ರಂದೇ  ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಹುದ್ದೆಗೆ ವರ್ಗ ಮಾಡಲಾಗಿತ್ತು. ಶಾಂತರಾಜಣ್ಣ ಅವರನ್ನು ಮರು ವರ್ಗ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದರಿಂದ ಗೋವಿಂದರಾಜು ಅವರು ಅಧಿಕಾರ ವಹಿಸಿಕೊಂಡಿಲ್ಲ. ಹಾಗಾಗಿ ಸದ್ಯಕ್ಕೆ ಶಾಂತರಾಜಣ್ಣ ಅವರೇ ಈ ಹುದ್ದೆಯಲ್ಲಿದ್ದಾರೆ. 

ಬಿಡಿಎ ಕಾಯ್ದೆಯಲ್ಲಿಲ್ಲ ಅವಕಾಶ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಟಿಪ್ಪಣಿಯಲ್ಲಿ ಬಿಡಿಎಗೆ ಮತ್ತೊಂದು ಎಂಜಿನಿಯರಿಂಗ್‌ ಸದಸ್ಯ ಹುದ್ದೆಯನ್ನು ಸೃಷ್ಟಿಸುವ ಬಗ್ಗೆ ‍ಪ್ರಸ್ತಾಪಿಸಲಾಗಿತ್ತು. ಆದರೆ, 1976ರ ಬಿಡಿಎ ಕಾಯ್ದೆ ಪ್ರಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಒಬ್ಬರು ಎಂಜಿನಿಯರಿಂಗ್‌ ಸದಸ್ಯರನ್ನು ಹೊಂದುವುದಕ್ಕೆ ಮಾತ್ರ ಅವಕಾಶ ಇದೆ. ಅವರು ಕರ್ನಾಟಕ ಎಂಜಿನಿಯರಿಂಗ್‌ ಸೇವೆಯ ಅಧಿಕಾರಿಯಾಗಿರಬೇಕು ಹಾಗೂ ಅವರು ಮುಖ್ಯ ಎಂಜಿನಿಯರ್ ವೃಂದಕ್ಕಿಂತ ಕಡಿಮೆ ಶ್ರೇಣಿಯ ಅಧಿಕಾರಿ ಆಗಿರುವಂತಿಲ್ಲ. ಈಗ ಹೆಚ್ಚುವರಿ ಎಂಜಿನಿಯರಿಂಗ್‌ ಸದಸ್ಯ ಹುದ್ದೆ ಸೃಷ್ಟಿಸಬೇಕಾದರೆ ಬಿಡಿಎ ಕಾಯ್ದೆಗೆ ತಿದ್ದು‍ಪಡಿ ತರಬೇಕಾಗುತ್ತದೆ.

‘ಬಿಡಿಎಯಲ್ಲಿ ಎರಡು ಎಂಜಿನಿಯರಿಂಗ್‌ ಸದಸ್ಯ ಹುದ್ದೆಗಳನ್ನು ಸೃಷ್ಟಿಸಿದರೆ ಭವಿಷ್ಯದಲ್ಲಿ ತಿಕ್ಕಾಟಕ್ಕೆ ಕಾರಣವಾಗಬಹುದು. ಇದು ಉತ್ತಮ ಬೆಳವಣಿಗೆ ಅಲ್ಲ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಸರ್ಕಾರದ ವರ್ಗಾವಣೆ ಮಾರ್ಗಸೂಚಿಗಳ ಪ್ರಕಾರ ಒಬ್ಬ ಎ– ದರ್ಜೆಯ ಅಧಿಕಾರಿ ವಿರುದ್ಧ ಯಾವುದೇ ಗುರುತರ ಆರೋಪ ಇಲ್ಲದಿದ್ದರೆ ಅವರನ್ನು ಎರಡು ವರ್ಷಕ್ಕೆ ಮುನ್ನ ವರ್ಗ ಮಾಡುವಂತಿಲ್ಲ. ಅವಧಿಪೂರ್ವ ವರ್ಗಾವಣೆಗಳನ್ನು ಮಾಡುತ್ತಿದ್ದರೆ ಯಾವುದೇ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಡೆಸಲು ಅವಕಾಶ ಸಿಗದು. ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಸಂಬಂಧಿಸಿದ ನಿರ್ಧಾರ ತಳೆಯಲು ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಪೊಲೀಸ್‌ ಸಿಬ್ಬಂದಿ ಮಂಡಳಿ ರಚಿಸಿದಂತೆ ಎಂಜಿನಿಯರ್‌ಗಳ ವರ್ಗಾವಣೆ ಬಗ್ಗೆ ತೀರ್ಮಾನಕ್ಕೆ ಪ್ರತ್ಯೇಕ ಮಂಡಳಿ ರಚಿಸುವುದು ಸೂಕ್ತ’ ಎಂದು ಅವರು ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು