ರಸ್ತೆ ಮೇಲೆ ರಸ್ತೆ, ಅದರ ಮೇಲೆ ಮೆಟ್ರೊ!

7
ಪಿಆರ್‌ಆರ್‌ ಯೋಜನೆ ಸ್ವರೂಪ ಬದಲು: ಬಿಡಿಎ ಆಡಳಿತ ಮಂಡಳಿ ಸಭೆ ಒಪ್ಪಿಗೆ

ರಸ್ತೆ ಮೇಲೆ ರಸ್ತೆ, ಅದರ ಮೇಲೆ ಮೆಟ್ರೊ!

Published:
Updated:

ಬೆಂಗಳೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೀರ್ಮಾನಿಸಿದೆ. ಆದರೆ, ಯೋಜನೆಯ ಸ್ವರೂಪ ಸಂಪೂರ್ಣ ಬದಲಾಗಲಿದೆ.

ನೆಲಮಟ್ಟದ ರಸ್ತೆ, ಅದರ ಮೇಲೆ ಎತ್ತರಿಸಿದ ರಸ್ತೆ ಹಾಗೂ ಅದರ ಮೇಲೆ ಮೆಟ್ರೊ ಮಾರ್ಗವನ್ನು ನಿರ್ಮಿಸುವ ಪ್ರಸ್ತಾಪವನ್ನು ಬಿಡಿಎ ಸಿದ್ಧಪಡಿಸಿದೆ. ಶುಕ್ರವಾರ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಯಿತು.

‘ಮೂಲ ಯೋಜನೆ ಪ್ರಕಾರ ಪಿಆರ್‌ಆರ್‌ ನಿರ್ಮಾಣವಾದರೆ ಭೂ ಸ್ವಾಧೀನಕ್ಕೆ ಹೆಚ್ಚು ವೆಚ್ಚವಾಗುತ್ತದೆ. ವೆಚ್ಚವನ್ನು ಕಡಿಮೆಗೊಳಿಸುವ ಸಲುವಾಗಿ ವಿನ್ಯಾಸ ಮಾರ್ಪಾಡು ಮಾಡಿದ್ದೇವೆ. ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ₹13 ಸಾವಿರ ಕೋಟಿ ಬೇಕಾಗುತ್ತದೆ’ ಎಂದು ಪ್ರಾಧಿಕಾರದ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್‌‘ಪ್ರಜಾವಾಣಿ’ಗೆ ತಿಳಿಸಿದರು.

100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ ಸಂಬಂಧಿಸಿ 2006ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 65 ಕಿ.ಮೀ. ಉದ್ದದ ರಸ್ತೆಗೆ ಒಟ್ಟು 1,810 ಎಕರೆ 19 ಗುಂಟೆ ಭೂಸ್ವಾಧೀನ ಮಾಡಲು ಬಿಡಿಎ ಉದ್ದೇಶಿಸಿತ್ತು. ಯೋಜನೆಯ ಅಂದಾಜು ವೆಚ್ಚ ಆರಂಭದಲ್ಲಿ ₹ 500 ಕೋಟಿ ಇತ್ತು. 2012ರಲ್ಲಿ ಇದು ₹ 5,800 ಕೋಟಿಗೆ ಹೆಚ್ಚಿತ್ತು. ಭೂಮಿ ಬಿಟ್ಟುಕೊಡುವ ರೈತ ರಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರವಾಗಿ ನೀಡಬೇಕಾಗಿ ಬಂದಿದ್ದರಿಂದ ಯೋಜನೆ ವೆಚ್ಚ ಮತ್ತಷ್ಟು ಹೆಚ್ಚಳವಾಯಿತು.

ಬಿಡಿಎ 2016ರಲ್ಲಿ ಮೊದಲ ಬಾರಿ ಯೋಜನೆಯ ವಿನ್ಯಾಸದಲ್ಲಿ ಮಾರ್ಪಾಡು ಮಾಡಿತ್ತು. 100 ಮೀಟರ್‌ ಬದಲು 75 ಮೀಟರ್‌ ಅಗಲದಲ್ಲಿ ರಸ್ತೆ ನಿರ್ಮಿಸಲು ನಿರ್ಧರಿಸಿತ್ತು. ಉಳಿದ 25 ಮೀಟರ್‌ ಅಗಲದ ಜಾಗವನ್ನು ಅಭಿವೃದ್ಧಿಪಡಿಸಿ, ಭೂಮಿ ನೀಡಿದ ರೈತರಿಗೆ ಬಿಟ್ಟುಕೊಡುವ ಪ್ರಸ್ತಾವಕ್ಕೆ ಸಚಿವ ಸಂಪುಟವೂ ಒಪ್ಪಿಗೆ ನೀಡಿತ್ತು. ಆದರೆ, ಇದಕ್ಕೆ ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ಮತ್ತೆ ನನೆಗುದಿಗೆ ಬಿದ್ದಿತ್ತು.

‘ಪರಿಷ್ಕೃತ ವಿನ್ಯಾಸದ ಪ್ರಕಾರ 60 ಮೀಟರ್‌ ಅಗಲದ ರಸ್ತೆ ನಿರ್ಮಾಣಕ್ಕೆ ಮಾತ್ರ ಭೂಸ್ವಾಧೀನ ಮಾಡಿಕೊಳ್ಳಲಿದ್ದೇವೆ. ಇಲ್ಲಿ ಎಂಟು ಲೇನ್‌ಗಳ ಎತ್ತರಿಸಿದ ರಸ್ತೆಯನ್ನು ನಿರ್ಮಿಸುತ್ತೇವೆ. ನೆಲ ಮಟ್ಟದಲ್ಲಿ 4 ಲೇನ್‌ ರಸ್ತೆ (ಏಕಮುಖ ಸಂಚಾರದ ತಲಾ 2 ಲೇನ್‌ಗಳು) ಹಾಗೂ ಆ ರಸ್ತೆಯ ಎರಡೂ ಕಡೆ ಸರ್ವಿಸ್‌ ರಸ್ತೆಗಳು (ತಲಾ 2 ಲೇನ್‌) ನಿರ್ಮಾಣವಾಗಲಿವೆ. ಇದಕ್ಕೆ ಮೊದಲು ಉದ್ದೇಶಿಸಿದಕ್ಕಿಂತ ಶೇ 40ರಷ್ಟು ಕಡಿಮೆ ಭೂಮಿ ಸಾಕಾಗುತ್ತದೆ’ ಎಂದು ಶಿವಕುಮಾರ್‌ ವಿವರಿಸಿದರು.

‘ಈ ಹಿಂದಿನ ವಿನ್ಯಾಸದ ಪ್ರಕಾರ ಭೂಸ್ವಾಧೀನಕ್ಕೆ ಅಂದಾಜು ₹ 8,500 ಕೋಟಿ ವೆಚ್ಚವಾಗುತ್ತಿತ್ತು. ಆದರೆ ಈಗ ₹ 4,500 ಕೋಟಿ ಸಾಕಾಗುತ್ತದೆ’ ಎಂದರು. ಈ ಯೋಜನೆಗೆ ಬಂಡವಾಳ ಹೂಡಲು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಆಸಕ್ತಿ ತೋರಿತ್ತು. ಆದರೆ, ಭೂಸ್ವಾಧೀನಕ್ಕೆ ತಗಲುವ ವೆಚ್ಚ ಭರಿಸಲು ಸಂಸ್ಥೆ ಸಿದ್ಧವಿರಲಿಲ್ಲ. ಹಾಗಾಗಿ ಭೂಸ್ವಾಧೀನಕ್ಕೆ ತಗಲುವ ವೆಚ್ಚವನ್ನು ಭರಿಸುವಂತೆ ಬಿಡಿಎ ಕೇಂದ್ರ ಭೂಸಾರಿಗೆ ಸಚಿವಾಲಯದ ಮೊರೆ ಹೋಗಿತ್ತು. ಆದರೆ, ಅವರು ಇದಕ್ಕೆ ಒಪ್ಪಿಲ್ಲ. ‘ಪರಿಷ್ಕೃತ ಯೋಜನೆ ಪ್ರಕಾರ ರಸ್ತೆ ನಿರ್ಮಾಣಕ್ಕೆ ₹ 8,500 ಕೋಟಿ ವೆಚ್ಚವಾಗಲಿದೆ. ಇದನ್ನು ಜೈಕಾ ಸಂಸ್ಥೆ ಭರಿಸುತ್ತದೆ ಎಂಬ ವಿಶ್ವಾಸವಿದೆ. ಆದರೆ, ಭೂಸ್ವಾಧೀನಕ್ಕೆ ಹಣ ಹೊಂದಿಸುವುದು ನಮ್ಮ ಮುಂದಿರುವ ಸವಾಲು. ಇದಕ್ಕೆ ಬೇರೆ ಮಾರ್ಗೋಪಾಯಗಳನ್ನು ಹುಡುಕುವ ಪ್ರಯತ್ನ ನಡೆದಿದೆ. ಇದೊಂದು ಭಾರಿ ಮೊತ್ತ ಬೇಕಾಗಿರುವುದರಿಂದ ಸರ್ಕಾರವೇ ಅನುದಾನ ನೀಡಬೇಕಾಗುತ್ತದೆ’ ಎಂದರು.

‘ಬಿಎಂಆರ್‌ಸಿಎಲ್‌ ನೆರವಾಗಲಿ’
‘ಪಿಆರ್‌ಆರ್‌ನಲ್ಲಿ ಮೆಟ್ರೊ ಮಾರ್ಗ ನಿರ್ಮಿಸುವುದಕ್ಕೂ ಅವಕಾಶ ಕಲ್ಪಿಸಲಿದ್ದೇವೆ. ಹಾಗಾಗಿ ಭೂಸ್ವಾಧೀನಕ್ಕೆ ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮದವರೂ (ಬಿಎಂಆರ್‌ಸಿಎಲ್‌) ಆರ್ಥಿಕ ನೆರವು ಒದಗಿಸಬೇಕೆಂಬುದು ನಮ್ಮ ಅಪೇಕ್ಷೆ’ ಎಂದು ಶಿವಕುಮಾರ್‌ ತಿಳಿಸಿದರು.

‘ಈ ಮಾರ್ಗದಲ್ಲಿ ಪ್ರತಿ ಒಂದೂವರೆ ಕಿ.ಮೀ ದೂರದಲ್ಲಿ ಮೆಟ್ರೊ ನಿಲ್ದಾಣಗಳನ್ನು ನಿರ್ಮಿಸುವುದಕ್ಕೂ ಅವಕಾಶ ಮಾಡಿಕೊಳ್ಳಲಿದ್ದೇವೆ. ಮೆಟ್ರೊ ನಿಲ್ದಾಣ ನಿರ್ಮಾಣವಾಗುವ ಕಡೆ ನಾವು 60 ಮೀ ಬದಲಿ 100 ಮೀ ಅಗಲದಷ್ಟು ಭೂಸ್ವಾಧೀನ ನಡೆಸುತ್ತೇವೆ. ಈ ಮಾರ್ಗದಲ್ಲಿ ಸುಮರು 45ಕ್ಕೂ ಹೆಚ್ಚು ಕಡೆ ಮೆಟ್ರೊ ನಿಲ್ದಾಣ ನಿರ್ಮಿಸಬೇಕಾಗಿಬರಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 24

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !