ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರೆಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವ ವೇದಿಕೆ’ ನಗರದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಪ್ರಭಾಕರ ಕೋರೆ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಸರ್ವಮಂಗಳ ಶಂಕರ್‌ ಹಾಗೂ ಸಾಹಿತಿ ಹೀ.ಚಿ. ಶಾಂತವೀರಯ್ಯಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಕೋರೆ ಅವರು ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಅಕ್ಷರ ಕ್ರಾಂತಿ ಮಾಡಿದ್ದಾರೆ. ಕೆಎಲ್‌ಇ ಶಿಕ್ಷಣ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಬೆಳೆಸಿದ್ದಾರೆ. ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಮಾತನ್ನು ಚಾಚು ತಪ್ಪದೇ ಪಾಲಿಸಿದ್ದಾರೆ’ ಎಂದು ಬಸವ ವೇದಿಕೆಯ ಅಧ್ಯಕ್ಷ ಸಿ.ಸೋಮಶೇಖರ್‌ ಹೇಳಿದರು.

‘ಮೂವರು ಸಾಧಕರು ನಮ್ಮ ನಾಡಿನ ಹೆಮ್ಮೆಯ ಪ್ರತೀಕ. ಬಸವ ತತ್ವಗಳನ್ನು ಅನುಸರಿಸುವ ಎಲ್ಲರಿಗೂ ಉತ್ತಮ ಜೀವನ ಮಾರ್ಗ ಸಿಗಲಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.

‘ವಚನಗಳು ಗದ್ಯವೂ ಅಲ್ಲದ ಪದ್ಯವೂ ಅಲ್ಲದ ವಿಶಿಷ್ಟ ಸಾಹಿತ್ಯ ರೂಪ. ಪ್ರಪಂಚದಲ್ಲಿ ಎಲ್ಲಿಯೂ ಈ ರೀತಿಯ ಸಂಸ್ಕೃತಿಯನ್ನು ನೋಡಲು ಸಾಧ್ಯವಿಲ್ಲ. ಈ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ನಮ್ಮ ಕೈಯಲ್ಲಿದೆ’ ಎಂದು ಶಾಂತವೀರಯ್ಯ ಹೇಳಿದರು.

‘ವಚನಗಳನ್ನು ಬೆಳೆಸುವಲ್ಲಿ ಸಂಗೀತಕಾರರು ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ಸರ್ವಮಂಗಳ ಅಭಿಪ್ರಾಯಪಟ್ಟರು.

‘ನಮ್ಮ ಕುಟುಂಬದಲ್ಲಿ ಕನ್ನಡದಲ್ಲಿ ಓದು, ಬರಹವನ್ನು ಕಲಿತವನು ನಾನೇ ಮೊದಲು. ನಮ್ಮ ಭಾಗದಲ್ಲಿ ಪೇಶ್ವೆ ಅವರ ಪ್ರಭಾವ ಹೆಚ್ಚು. ಬಸವಣ್ಣ ಮಾನವತೆಯನ್ನು ಸಾರಿದ ಮಹಾತ್ಮ. ಅವರ ದಾರಿಯಲ್ಲಿ ನಾವು ಸಾಗಬೇಕಿದೆ. ಆದರೆ, ಇಂದಿನ ದಿನಗಳಲ್ಲಿ ಧರ್ಮ, ಜಾತಿಗಳನ್ನು ಒಡೆಯುವ ಕೆಲಸ ಆಗುತ್ತಿದೆ’ ಎಂದು ಕೋರೆ ತಿಳಿಸಿದರು.

ನಗರದ ಹಲವೆಡೆ ಬಸವ ಜಯಂತಿ ಸಂಭ್ರಮ
ಬೆಂಗಳೂರು:
ನಗರದ ಹಲವೆಡೆ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ‘ಬಸವ ಸಮಿತಿ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

‘ಕ್ರಾಂತಿಯೋಗಿ ಬಸವಣ್ಣ ದೇಶದ ಇತಿಹಾಸದಲ್ಲಿಯೇ ಕಾರ್ಮಿಕರನ್ನು ಸಂಘಟಿಸಿದ ಮೊದಲ ನಾಯಕ. ಎಲ್ಲರನ್ನೂ ಸಮಾನವಾಗಿ ಕಾಣುವ ಮಾನವ ಹಕ್ಕುಗಳ ಪ್ರತಿಪಾದಕ. 12ನೇ ಶತಮಾನದಲ್ಲಿಯೇ ಅಸ್ಪೃಶ್ಯತೆಯ ನಿವಾರಣೆಗಾಗಿ ಹೋರಾಟ ಮಾಡಿದ್ದರು’ ಎಂದು ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ಸಾಹಿತಿ ಗೊ.ರು.ಚನ್ನಬಸಪ್ಪ, ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ದೂರದರ್ಶನದ ಉಪನಿರ್ದೇಶಕಿ ನಿರ್ಮಲಾ ಎಲಿಗಾರ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಬಸವ ಜಯಂತಿ ‘ವಚನ ಗಾಯನ’ ಕಾರ್ಯಕ್ರಮದಲ್ಲಿ ಸಿದ್ಧರಾಮ ಕೇಶಾಪುರ ತಂಡದವರು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT