ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ನೂರಾರು ಕೋಟಿ ಹಗರಣ: 5 ಎಫ್‌ಐಆರ್‌ ದಾಖಲು, ತನಿಖೆ ಆರಂಭಿಸಿದ ಎಸಿಬಿ

Last Updated 12 ಫೆಬ್ರುವರಿ 2022, 19:25 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ನಡೆದಿರುವ ನೂರಾರು ಕೋಟಿ ಮೊತ್ತದ ಹಗರಣಗಳ ತನಿಖೆ ಆರಂಭಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಕೆಎಎಸ್‌ ಅಧಿಕಾರಿಗಳೂ ಸೇರಿದಂತೆ ಹಲವರ ವಿರುದ್ಧ ಗುರುವಾರ ಐದು ಎಫ್‌ಐಆರ್‌ಗಳನ್ನು ದಾಖಲಿಸಿದೆ.

2021ರ ನವೆಂಬರ್‌ 19ರಿಂದ 23ರವರೆಗೆ ಬಿಡಿಎ ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳಲ್ಲಿ ಶೋಧ ನಡೆಸಿದ್ದ ಎಸಿಬಿ ಅಧಿಕಾರಿಗಳು, ನಿವೇಶನ ಹಂಚಿಕೆ, ಬದಲಿ ನಿವೇಶನ ಹಂಚಿಕೆ, ಭೂಸ್ವಾಧೀನ, ಪರಿಹಾರ ಪಾವತಿ, ಕ್ರಯಪತ್ರ ವಿತರಣೆ, ಸಗಟು ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪದ ಮೇಲೆ ನೂರಾರು ಕಡತಗಳನ್ನ ವಶಕ್ಕೆ ಪಡೆದಿದ್ದರು. 70ಕ್ಕೂ ಹೆಚ್ಚು ಅಧಿಕಾರಿಗಳು, ನೌಕರರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲು ಅವಕಾಶ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.

ಕೆಲವು ಪ್ರಕರಣಗಳಲ್ಲಿ ತನಿಖೆಗೆ ಅನುಮತಿ ನೀಡಿ ನಗರಾಭಿವೃದ್ಧಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗಳು ಆದೇಶ ಹೊರಡಿಸಿವೆ. ಬಳಿಕ ತನಿಖಾ ಪ್ರಕ್ರಿಯೆ ಚುರುಕುಗೊಂಡಿದ್ದು, ಎಸಿಬಿ ಬೆಂಗಳೂರು ನಗರ ಘಟಕದ ಕಚೇರಿಯಲ್ಲಿ ಐದು ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿದೆ.

ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ: ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್‌ ಜಿ. ಗುರುಪ್ರಸಾದ್ ಅವರಿಗೆ 2000ನೇ ಸಾಲಿನಲ್ಲಿ ಜೆ.ಪಿ.ನಗರ ಒಂಬತ್ತನೇ ಹಂತದ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಅವರು ₹ 3.54 ಲಕ್ಷ ಪಾವತಿಸಿದ್ದರು. ಅದನ್ನು ರದ್ದು ಮಾಡಿ, ಬಳಿಕ ಎಚ್‌.ಎಸ್‌.ಆರ್‌. ಬಡಾವಣೆಯ ಆರನೇ ಸೆಕ್ಟರ್‌ನಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಫಲಾನುಭವಿಗೆ ತಿಳಿಸದೇ ಅದೇ ನಿವೇಶನವನ್ನು ಬೇರೊಬ್ಬರಿಗೆ ರವಿರಾಜ್‌ ಎಂಬುವವರಿಗೆ ₹ 2.90 ಲಕ್ಷಕ್ಕೆ ಹಂಚಿಕೆ ಮಾಡಲಾಗಿದೆ. ಆ ವ್ಯಕ್ತಿ ನಿವೇಶನವನ್ನು ₹ 1.5 ಕೋಟಿಗೆ ಮಾರಾಟ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ಗುರುಪ್ರಸಾದ್‌ ನೀಡಿರುವ ದೂರನ್ನು ಆಧರಿಸಿ ಬಿಡಿಎ ಮೇಲ್ವಿಚಾರಕ ಡಿ. ಅಶ್ವತ್ಥನಾರಾಯಣ ರಾವ್‌ ಮತ್ತು ನಿವೃತ್ತ ಪ್ರಥಮ ದರ್ಜೆ ಸಹಾಯಕ ಎಸ್‌. ಮಂಜುನಾಥ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಮುಂಬೈನ ವರ್ಸೋವಾದಲ್ಲಿ ನೆಲೆಸಿರುವ ವರದಾಚಾರಿ ಎಂಬುವರಿಗೆ ಭೂಪಸಂದ್ರದಲ್ಲಿ ಹಂಚಿಕೆ ಮಾಡಿದ್ದ ನಿವೇಶನವನ್ನು ಅವರಿಗೆ ತಿಳಿಸದೇ ಪದ್ಮಾವತಮ್ಮ ಎಂಬುವವರಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಆರೋಪದ ಮೇಲೆ ಬಿಡಿಎ ಉಪ ಕಾರ್ಯದರ್ಶಿ–4 ಹುದ್ದೆಯಲ್ಲಿದ್ದು, ನಿವೃತ್ತರಾಗಿರುವ ಮಂಜುಳಾ ಬಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಜಾಜಿನಗರ ಕೈಗಾರಿಕಾ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಿಯಾಗಿ ಕೆಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡಿರುವ ಆರೋಪದ ಮೇಲೆ ಬಿಡಿಎ ಉಪ ಕಾರ್ಯದರ್ಶಿ–4 ಹುದ್ದೆಯಲ್ಲಿದ್ದಬಿ. ರಾಜು ವಿರುದ್ಧ ಎಫ್‌ಐಆರ್‌ ದಾಖಲು ಮಾಡಿ, ತನಿಖೆ ಆರಂಭಿಸಲಾಗಿದೆ.

ಸಗಟು ನಿವೇಶನ ಹಂಚಿಕೆ ಹಗರಣ: ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಕೆ.ಆರ್‌. ಪುರ ತಾಲ್ಲೂಕಿನ ಕೆ. ನಾರಾಯಣಪುರ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಜಮೀನಿನಲ್ಲಿ ಟ್ರಿನಿಟಿ ಫ್ಲ್ಯಾಟ್‌ ಓನರ್ಸ್‌ ಅಸೋಸಿಯೇಷನ್‌ ಮತ್ತು ವಿಲ್ಲೇಜ್‌ ಫ್ಲ್ಯಾಟ್‌ ಓನರ್ಸ್‌ ಅಸೋಸಿಯೇಷನ್‌ ಹೆಸರಿನಲ್ಲಿ ಅಕ್ರಮವಾಗಿ ಸಗಟು ನಿವೇಶನ ಹಂಚಿಕೆ ಮಾಡಿರುವ ಆರೋಪದ ಮೇಲೆ ಬಿಡಿಎ ಲೆಕ್ಕ ಪರಿಶೋಧಕಿ ಎಚ್‌.ಎಸ್‌.ಸುಜಾತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಫ್ಲ್ಯಾಟ್‌ ಮಾಲೀಕರ ಸಂಘಗಳ ಹೆಸರಿನಲ್ಲಿ ಸಲ್ಲಿಕೆಯಾದ ಅರ್ಜಿಗಳ ಆಧಾರದಲ್ಲಿ ಅಕ್ರಮವಾಗಿ ಅನರ್ಹರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಹಳೆಯ ದರದಲ್ಲೇ ನಿವೇಶನ ಮಂಜೂರು ಮಾಡಿ ಪ್ರಾಧಿಕಾರಕ್ಕೆ ನಷ್ಟ ಉಂಟುಮಾಡಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಶಾಸಕರಿಗೆ ಕ್ರಯಪತ್ರ!

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ ನಾಯಕ್‌ ಅವರಿಗೆ ‘ಜಿ’ ಕೋಟಾದಲ್ಲಿ ಮಂಜೂರು ಮಾಡಿದ್ದ ನಿವೇಶನದ ಕುರಿತು ಹೈಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿ ಕ್ರಯಪತ್ರ ಮಾಡಿಕೊಟ್ಟ ಆರೋಪದ ಮೇಲೆ ಬಿಡಿಎ ಮೇಲ್ವಿಚಾರಕ ಡಿ. ಅಶ್ವತ್ಥನಾರಾಯಣ ರಾವ್‌ ಮತ್ತು ನಿವೃತ್ತ ಪ್ರಥಮ ದರ್ಜೆ ಸಹಾಯಕ ಎಸ್‌. ಮಂಜುನಾಥ್‌ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT