ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಡಿಎಗೆ ವಂಚನೆ

ಮಾಜಿ ಕಾರ್ಪೊರೇಟರ್‌ ಪತಿ ವಿರುದ್ಧ ಎಫ್‌ಐಆರ್‌
Last Updated 11 ಮಾರ್ಚ್ 2020, 23:10 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆ೦ಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಅಕ್ರಮವಾಗಿ ₹ 37 ಲಕ್ಷ ಭೂ ಪರಿಹಾರ ಹಾಗೂ ಐದು ನಿವೇಶನಗಳನ್ನು ಪಡೆದಿದ್ದ ಆರೋಪಿ ವಿರುದ್ಧ ಪ್ರಾಧಿಕಾರವು ಶೇಷಾದ್ರಿಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದೆ.

ಕೆಂಗೇರಿ ಹೋಬಳಿಯ ಹೆಮ್ಮಿಗೆಪುರ ಗ್ರಾಮದ ಸರ್ವೆ ನಂ. 109ರ 5 ಎಕರೆ 3 ಗು೦ಟೆ ಜಮೀನಿಗೆ ಸಂಬಂಧಿಸಿ ಹೆಮ್ಮಿಗೆಪುರ ವಾರ್ಡ್‌ನ ಪಾಲಿಕೆಯ ಮಾಜಿ ಸದಸ್ಯೆಯ ಪತಿಯಾದ ಎಚ್‌.ನಾಗರಾಜಯ್ಯ ಅವರು ಜೀವಂತವಿರುವ ಭೂಮಾಲೀಕರು ಮೃತಪಟ್ಟಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರದಿ೦ದ ₹ 37 ಲಕ್ಷ ಭೂಪರಿಹಾರ ಪಡೆದಿದ್ದರು. ಬನಶ೦ಕರಿ 6ನೇ ಹಂತದ ಬಡಾವಣೆಯ 2ನೇ ಬ್ಲಾಕ್‌ನಲ್ಲಿ 30x40 ಅಡಿ ನಿವೇಶನ (ಸಂಖ್ಯೆ 120), 4ನೇ ‘ಬಿ’ ಬ್ಲಾಕ್‌ನಲ್ಲಿ 40x60 ಅಡಿ ವಿಸ್ತೀರ್ಣದ ಐದು ನಿವೇಶನಗಳನ್ನು (ಸಂಖ್ಯೆ 1352, 2412, 2154 ಮತ್ತು 2155) ಹಂಚಿಕೆ ಮಾಡಿಸಿಕೊಂಡಿದ್ದರು. ಬಿಡಿಎ ಜಾಗೃತದಳದ ಪೊಲೀಸರು ಭೂ ಪರಿಹಾರದ ಮೊತ್ತವನ್ನು ಮತ್ತು ನಿವೇಶನಗಳನ್ನು ಪ್ರಾಧಿಕಾರದ ವಶಕ್ಕೆ ಪಡೆದು
ಕೊಂಡಿದ್ದಾರೆ.

ಅಬ್ದುಲ್‌ ವಹಾಬ್‌ ಎ೦ಬುವರು ಮೊಹಮ್ಮದ್‌ ಷರೀಫ್‌ ಎಂಬುವರಿಗೆ 5 ಎಕರೆ 3 ಗುಂಟೆ ಜಮೀನನ್ನು ಮಾರಿದ್ದರು. ಈ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಮೊಹಮ್ಮದ್‌ ಷರೀಫ್‌ ಊರಿನಲ್ಲಿಲ್ಲದ ವಿಷಯ ತಿಳಿದು ನಾಗರಾಜಯ್ಯ ಜಮೀನಿನ ಮೂಲ ಮಾಲೀಕರಾದ ಅಬ್ದುಲ್‌ ವಹಾಬ್‌ ಮಕ್ಕಳಿಬ್ಬರನ್ನು ಸಂಪರ್ಕಿಸಿದ್ದರು. ತಂದೆಯ ಹೆಸರಿನಲ್ಲಿರುವ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದೆ. ಅದಕ್ಕೆ ಭೂಪರಿಹಾರವನ್ನು ಕೊಡಿಸುವುದಾಗಿ ನಂಬಿಸಿ, ಅವರಿಂದ ಸಹಿ ಪಡೆದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ವಂಚಿಸಿದ್ದರು. ಪ್ರಾಧಿಕಾರವು ವಶಪಡಿಸಿಕೊಂಡಿರುವ ಜಮೀನಿಗೆ ಪರಿಹಾರವಾಗಿ ನೀಡಿರುವ ನಿವೇಶನವನ್ನು ಆರೋಪಿ ತನ್ನ ಹೆಸರಿಗೆ ನೋಂದಾಯಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT