ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಒಸಿ ಜಾಗ ಕಬಳಿಸಲು ಹುನ್ನಾರ; ಪೊಲೀಸ್ ಕಮಿಷನರ್‌ಗೆ ದೂರು

Last Updated 2 ನವೆಂಬರ್ 2020, 18:35 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಇಂಡಿಯನ್ ಆಯಿಲ್ ಕಾರ್ಪೊರೇಷನ್‌ಗೆ (ಐಒಸಿ) ಹಂಚಿಕೆಯಾಗಿದ್ದ ಜಾಗವನ್ನು ಕಬಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿ ಐಒಸಿ ಅಧಿಕಾರಿ, ನಗರ ಪೊಲೀಸ್ ಕಮಿಷನರ್ ಕಮಲ್‌ ಪಂತ್ ಅವರಿಗೆ ದೂರು ನೀಡಿದ್ದಾರೆ.

ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಕಮಿಷನರ್ ಅವರನ್ನು ಭೇಟಿಯಾದ ಐಒಸಿ ಉಪ ಪ್ರಧಾನ ವ್ಯವಸ್ಥಾಪಕ ಸುರೇಶ್ ಕುಮಾರ್, ‘ಜಾಗದಲ್ಲಿ ಫಲಕ ಹಾಗೂಶೆಡ್ ಹಾಕಲಾಗಿದೆ. ಇದರಿಂದ ನಮ್ಮ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ದೂರಿದ್ದಾರೆ.

‘ಬಿಟಿಎಂ 4ನೇ ಹಂತದಲ್ಲಿರುವ ದೇವರಚಿಕ್ಕನಹಳ್ಳಿಯಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ ನಿವೇಶಗಳ ಪೈಕಿ, 12/1 ಸಂಖ್ಯೆಯ ಸಿಎ ನಿವೇಶನವನ್ನು (1118.28 ಚದರ ಮೀಟರ್) ಐಒಸಿಗೆ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಬಿಡಿಎ ಹಾಗೂ ಐಒಸಿ ನಡುವೆ 2019ರ ನವೆಂಬರ್ 7ರಂದು ಒಪ್ಪಂದವೂ ಆಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ನಿವೇಶನ ತಮ್ಮದೆಂದು ವಾದಿಸುತ್ತಿರುವ ಕೆಲ ಸ್ಥಳೀಯರು, ಅದೇ ಜಾಗದಲ್ಲಿ ಫಲಕ ಅಳವಡಿಸಿದ್ದಾರೆ. ಈ ವಿಷಯ ತಿಳಿದ ಬಿಡಿಎ ಸಹಾಯಕ ಕಾರ್ಯಪಾಲಕರು 2020ರ ಫೆಬ್ರುವರಿ 21ರಂದು ಸ್ಥಳ ಪರಿಶೀಲನೆ ನಡೆಸಿದ್ದರು. ನಿವೇಶನ ಕಬಳಿಸಲು ಫಲಕ ಅಳವಡಿಸಿದ್ದು ಪತ್ತೆಯಾಗಿತ್ತು. ಫಲಕ ಹಾಕಿದ್ದವರ ವಿರುದ್ಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಮ್ಮ ಸಂಸ್ಥೆಯಿಂದಲೂ ದೂರು ನೀಡಲಾಗಿತ್ತು. ಜಾಗಕ್ಕೆ ಭದ್ರತೆ ನೀಡುವಂತೆ ಪೊಲೀಸರನ್ನು ಕೋರಲಾಗಿತ್ತು.’

‘ದೂರು ನೀಡಿ ಹಲವು ತಿಂಗಳಾದರೂ ತನಿಖೆ ಪೂರ್ಣಗೊಳಿಸಿಲ್ಲ. ನಿವೇಶನದಲ್ಲಿ ಸಾಕಷ್ಟು ಹಾನಿಯಾಗಿದ್ದು, ಆರೋಪಿಗಳ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು, ನಿವೇಶನದಲ್ಲಿ ಪೆಟ್ರೋಲ್ ಔಟ್‌ಲೆಟ್ ತೆರೆಯಲು ಅನುಕೂಲ ಮಾಡಿಕೊಡಬೇಕು’ ಎಂದೂ ದೂರಿನಲ್ಲಿ ವಿನಂತಿಸಿದ್ದಾರೆ.

ದೂರು ಸ್ವೀಕರಿಸಿರುವ ಕಮಿಷನರ್ ಕಮಲ್ ಪಂತ್, ‘ದಾಖಲೆ ಪರಿಶೀಲಿಸಿ ಭದ್ರತೆ ನೀಡುವಂತೆ ಹಾಗೂ ಜಾಗ ಕಬಳಿಸಲು ಹುನ್ನಾರ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹುಳಿಮಾವು ಠಾಣೆ ಇನ್‌ಸ್ಪೆಕ್ಟರ್ ಅವರಿಗೆ ಸೂಚಿಸುವೆ’ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT