ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ವ್ಯಾಪ್ತಿಗೆ ಜಾಲ ಹೋಬಳಿಯ ಆರು ಗ್ರಾಮಗಳು

ಬಿಡಿಎ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿ 1333 ಹೆಕ್ಟೇರ್‌ಗಳಷ್ಟು ವಿಸ್ತರಣೆ
Last Updated 20 ಜನವರಿ 2021, 18:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಐಎಎಪಿಎ) ತೆಕ್ಕೆಯಲ್ಲಿದ್ದ ಜಾಲ ಹೋಬಳಿಯ ಆರು ಗ್ರಾಮಗಳ ಸ್ಥಳೀಯ ಯೋಜನಾ ಪ್ರದೇಶಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ತೆಕ್ಕೆಗೆ ಸೇರಿಸಲು ಸಿದ್ಧತೆ ನಡೆದಿದೆ. ‌ಇದರಿಂದ ಬಿಡಿಎ ವ್ಯಾಪ್ತಿ 1333.47 ಹೆಕ್ಟೇರ್‌ಗಳಷ್ಟು ಹೆಚ್ಚಾಗಲಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಹೊಸಹಳ್ಳಿ, ಹುತ್ತನಹಳ್ಳಿ, ಮೀಸಗಾನಹಳ್ಳಿ, ಬೊಯಿಲ ಹಳ್ಳಿ, ಮುತ್ತುಕದಹಳ್ಳಿ ಹಾಗೂ ಬೇಗೂರು ಗ್ರಾಮಗಳ ಸ್ಥಳೀಯ ಯೋಜನಾ ಪ್ರದೇಶಗಳನ್ನು ಬಿಡಿಎ ಹಾಗೂ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ವ್ಯಾಪ್ತಿಗೆ ಸೇರಿಸುವಂತೆ 2019ರ ಮಾ 13ರಂದೇ ಬಿಐಎಎಪಿಎಯು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಸೇರ್ಪಡೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಆರು ಗ್ರಾಮಗಳ ಸ್ಥಳೀಯ ಯೋಜನಾ ಪ್ರದೇಶಗಳು ಬಿಡಿಎ ಅಧೀನದಲ್ಲಿ ಬರಲಿವೆ. ಹಾಗಾಗಿ ಇಲ್ಲಿನ ನಿವಾಸಿಗಳು ಇನ್ನು ನಿರ್ಮಾಣ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಅನುಮೋದನೆಗಳನ್ನು ಬಿಡಿಎಯಿಂದ ಪಡೆಯಬೇಕಾಗುತ್ತದೆ. ಈ ಆರು ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆಯೂ ಸರ್ಕಾರದ ಮುಂದಿದೆ. ಇದಕ್ಕೆ ಪೂರ್ವಭಾವಿಯಾಗಿ ಈ ಗ್ರಾಮಗಳ ಸ್ಥಳೀಯ ಯೋಜನಾ ಪ್ರದೇಶಗಳನ್ನು ಬಿಡಿಎ ವ್ಯಾಪ್ತಿಗೆ ಸೇರಿಸಲು ಸಿದ್ಧತೆ ನಡೆದಿದೆ.

ಹೊಸತಾಗಿ ಸೇರ್ಪಡೆಗೊಳ್ಳುವ ಪ್ರದೇಶಗಳು ಭೂಬಳಕೆಗೆ ಸಂಬಂಧಿಸಿದ ನಿಯಮಗಳು ಸದ್ಯಕ್ಕೆ ಬಿಐಎಎಪಿಎಯ 2021ರ ನಗರ ಮಹಾಯೋಜನೆಯಲ್ಲಿರುವಂತೆಯೇ ಮುಂದುವರಿಯಲಿವೆ. ಬಿಐಎಎಪಿಎಯ ನಗರ ಮಹಾ ಯೋಜನೆಗೆ ಸರ್ಕಾರ 2009ರಲ್ಲಿ ಅನುಮೋದನೆ ನೀಡಿತ್ತು. ಬಿಡಿಎ ಸಿದ್ಧಪಡಿಸುತ್ತಿರುವ ಪರಿಷ್ಕೃತ ನಗರ ಮಹಾಯೋಜನೆಗೆ ಸರ್ಕಾರದ ಅನುಮೋದನೆ ಸಿಗುವವರೆಗೂ ಈ ಆರು ಗ್ರಾಮಗಳ ನಿವಾಸಿಗಳಿಗೆ ನಿರ್ಮಾಣ ಅಥವಾ ಅಭಿವೃದ್ಧಿ ಕುರಿತ ಅನುಮತಿಗಳನ್ನು ಬಿಐಎಎಪಿಎಯ 2021ರ ನಗರ ಮಹಾ ಯೋಜನೆ ಪ್ರಕಾರವೇ ಬಿಡಿಎ ನೀಡಬೇಕಾಗುತ್ತದೆ.

‘ಜಾಲ ಹೋಬಳಿಯ ವ್ಯಾಪ್ತಿಯಿಂದ ಬಿಡಿಎ ವ್ಯಾಪ್ತಿಗೆ ಸೇರಿಸುವುದರಿಂದ ಹೆಚ್ಚೇನೂ ಅನುಕೂಲವಾಗದು. ಬಿಐಎಎಪಿಎಯಿಂದ ಪಡೆಯುವ ಮಂಜೂರಾತಿಗಳನ್ನು ಇನ್ನು ಬಿಡಿಎಯಿಂದ ಪಡೆಯಬೇಕಾಗುತ್ತದೆ ಅಷ್ಟೇ. ಆದರೆ, ಭವಿಷ್ಯದಲ್ಲಿ ಈ ಗ್ರಾಮಗಳು ಬಿಬಿಎಂಪಿ ತೆಕ್ಕೆಗೆ ಸೇರಿದ ಬಳಿಕ, ಈ ಗ್ರಾಮಗಳ ಜನರಿಗೆ ಇದರಿಂದ ಅನುಕೂಲ ಆಗಬಹುದು’ ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT