ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಅಗರ ಗುಂಜೂರು ಬಿಡಿಎ ಸಮುಚ್ಚಯ

Last Updated 16 ಜುಲೈ 2019, 19:13 IST
ಅಕ್ಷರ ಗಾತ್ರ

ವೈಟ್‌ಫೀಲ್ಡ್: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವರ್ತೂರು ವಾರ್ಡ್‌ನ ಗುಂಜೂರಿನಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯವು ಸಮಸ್ಯೆಗಳ ಆಗರವಾಗಿದ್ದು, ಇಲ್ಲಿ ನೆಲೆಸಿರುವ ಕುಟುಂಬಗಳು ವಿದ್ಯುತ್, ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದಾಗಿ ತೊಂದರೆ ಅನುಭವಿಸುತ್ತಿವೆ.

ಇಲ್ಲಿನ ವಸತಿ ಸಮುಚ್ಚಯಗಳನ್ನು ಗಡುವಿಗಿಂತ ಮೂರು ವರ್ಷ ತಡವಾಗಿ ಕಾಮಗಾರಿ ಪೂರ್ಣಗೊಳಿಸಿ ಹಂಚಿಕೆದಾರರಿಗೆ ಫ್ಲ್ಯಾಟ್‌ಗಳನ್ನು ವಿತರಿಸಲಾಗಿದೆ. ಅಪೂರ್ಣ ಸೌಲಭ್ಯದಿಂದಾಗಿ ಜನರು ಇಲ್ಲಿ ನೆಮ್ಮದಿಯಾಗಿ ವಾಸಿಸಲು ಸಾಧ್ಯವಿಲ್ಲದಂತಾಗಿದೆ. ಅರೆಬರೆ ಕಾಮಗಾರಿ ನಡೆಸಿರುವ ಪರಿಣಾಮ ಸ್ವಾಧೀನ ಪಡೆದಿರುವ ಫ್ಲ್ಯಾಟ್‌ಗಳಲ್ಲಿ ವಾಸ್ತವ್ಯ ಹೂಡಲು ಹಿಂದೇಟು ಹಾಕುತ್ತಿದ್ದಾರೆ.

ಗುಂಜೂರಿನಲ್ಲಿ 2013-14ರಲ್ಲಿ 1, 2 ಮತ್ತು 3 ಬಿಎಚ್‌ಕೆ ಮಾದರಿಯ ಫ್ಲ್ಯಾಟ್‌ಗಳು ಸೇರಿ ಒಟ್ಟು 820 ಫ್ಲ್ಯಾಟ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಾಧಿಕಾರ ಕೈಗೆತ್ತಿಕೊಂಡಿತ್ತು. ಗುತ್ತಿಗೆದಾರ ಕಂಪನಿಯ ತಪ್ಪಿನಿಂದ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣವಾಗದೇ ಹಂಚಿಕೆದಾರರಿಗೆ ಮನೆಗಳನ್ನು ಹಸ್ತಾಂತರಿಸುವುದು ವಿಳಂಬವಾಗಿತ್ತು. ಇದರಿಂದ ಆಕ್ರೋಶಗೊಂಡ ಕಳೆದ ವರ್ಷ ಪ್ರತಿಭಟನೆ ನಡೆಸಿದ್ದರು. ಬಳಿಕ ಫ್ಲ್ಯಾಟ್ ನೋಂದಣಿ ಪ್ರಕ್ರಿಯೆ ನಡೆಸಿ ಸ್ವಾಧೀನ ಪತ್ರಗಳನ್ನು ವಿತರಿಸಲಾಗಿದೆ. ಪೂರ್ಣ ಪ್ರಮಾಣದ ಸೌಲಭ್ಯ ಕಲ್ಪಿಸದ ಕಾರಣ 60 ಕುಟುಂಬಗಳಷ್ಟೇ ನೆಲೆಸಿವೆ. ಬಹಳಷ್ಟು ಹಂಚಿಕೆದಾರರು ಪೂರ್ತಿ ಹಣ ಪಾವತಿಸಿದ್ದಾರೆ. ಆದರೆ, ಸೌಲಭ್ಯದ ಕೊರತೆಯಿಂದ ಸ್ಥಳಾಂತರ ಆಗಿಲ್ಲ.

‘ವಸತಿ ಸಮುಚ್ಚಯ ನಿರ್ಮಿಸುವ ವೇಳೆ ವಿದ್ಯುತ್ ಹಾಗೂ ಕೊಳವೆಬಾವಿ ಸಂಪರ್ಕಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. 2 ಬಿಎಚ್‌ಕೆ ಹಾಗೂ 3 ಬಿಎಚ್‌ಕೆ ಫ್ಲ್ಯಾಟ್‌ಗಳಿಗೆ ಈವರೆಗೂ ಕಾಯಂ ಸಂಪರ್ಕ ನೀಡಿಲ್ಲ. ಕೆಲ ದಿನಗಳ ಹಿಂದೆ ಬೆಸ್ಕಾಂ ತಾತ್ಕಾಲಿಕ ಸಂಪರ್ಕವನ್ನು ಕಡಿತಗೊಳಿಸಿದ್ದರಿಂದ ಕುಟುಂಬಗಳು ಮೂರು ದಿನಗಳು ಕತ್ತಲೆಯಲ್ಲಿ ಕಳೆಯುವಂತಾಯಿತು. ನಾನಾ ಬ್ಲಾಕ್‌ಗಳಲ್ಲಿ ಸ್ಥಾಪಿಸಿರುವ ಲಿಫ್ಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಸುತ್ತಿಲ್ಲ’ ಎಂದು ನಿವಾಸಿ ಸೌಮ್ಯ ದೂರಿದರು.

‘ಸಮುಚ್ಚಯಕ್ಕೆ ಕಾವೇರಿ ನೀರಿನ ಸೌಲಭ್ಯ ಒದಗಿಸಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಕೊಟ್ಟ ವಾಗ್ದಾನವನ್ನು ಈವರೆಗೂ ಈಡೇರಿಸಿಲ್ಲ. ಜಲಮಂಡಳಿಗೆ ಹಣ ಪಾವತಿ ಮಾಡಿದ್ದರೂ ಸಂಪರ್ಕ ಕಲ್ಪಿಸಿಲ್ಲ. ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಮಳೆ ನೀರು ಸಂಗ್ರಹ ವ್ಯವಸ್ಥೆ ಕಲ್ಪಿಸಿದ್ದರೂ ನಿರ್ವಹಣೆಯಿಲ್ಲದೆ ಸೊರಗಿದೆ’ ಎಂದು ನಿವಾಸಿ ಮುರಳಿಧರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT