ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆ ನಿವೇಶನ: ತನಿಖೆ ಆರಂಭ

ಅಕ್ರಮ ವಿಭಜನೆ: ಬಿಡಿಎನ ಜಾಗೃತ, ವಿಶೇಷ ಕಾರ್ಯಪಡೆಯಿಂದ ವಿಚಾರಣೆ
Last Updated 27 ಸೆಪ್ಟೆಂಬರ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ಮೂಲೆ ನಿವೇಶನಗಳನ್ನು ವಿಭಾಗಿಸಿ ಮಧ್ಯಂತರ ನಿವೇಶನಗಳಾಗಿ ವಿಭಜಿಸಿರುವ (ಕಾರ್ನರ್ ಕಟ್‌) ಎಂಟು ಪ್ರಕರಣಗಳ ತನಿಖೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗೃತ ಮತ್ತು ವಿಶೇಷ ಕಾರ್ಯಪಡೆ ಆರಂಭಿಸಿದೆ.

ಭ್ರಷ್ಟಾಚಾರ ನಿರ್ಮೂಲನೆ ಮತ್ತು ಭೂರಕ್ಷಣಾ ಸಮಿತಿಯ ಅಧ್ಯಕ್ಷ ಆರ್. ರಮೇಶ್ ನೀಡಿದ ದೂರು ಆಧರಿಸಿ ತನಿಖೆ ಆರಂಭಿಸಲಾಗಿದೆ.

ಬಾಣಸವಾಡಿ ಮತ್ತು ಚೇಳಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬಿಡಿಎ ಅಭಿವೃದ್ಧಿಪಡಿಸಿರುವ ಒಎಂಬಿಆರ್‌ ಲೇಔಟ್‌ನ 4ಸಿಎಂ–678, ಎಚ್‌ಆರ್‌ಬಿಆರ್ ಲೇಔಟ್‌ನ 9ಡಿಎಂ–328, 9ಇಎಂ–325, 4ಬಿಸಿ–411, 4ಎಂ–516, ಎನ್‌ಜಿಇಎಫ್‌ ಬಡಾವಣೆಯ 2ಎಂ–420, 402, 427 ಸಂಖ್ಯೆಯ ನಿವೇಶನಗಳನ್ನು ಅಕ್ರಮವಾಗಿ ವಿಭಜಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಎಂಟು ನಿವೇಶನಗಳ ಒಟ್ಟು ವಿಸ್ತೀರ್ಣ 19,600 ಚದರ ಅಡಿಗಳಾಗಿದ್ದು, ಮಾರುಕಟ್ಟೆ ದರ ಅಂದಾಜು ₹29.40 ಕೋಟಿ ಇದೆ ಎಂದು ಅವರು ತಿಳಿಸಿದ್ದರು.

‘ಮೂಲೆ ನಿವೇಶನಗಳನ್ನು ಮಧ್ಯಂತರ ನಿವೇಶನಗಳಾಗಿ ವಿಭಜಿಸಬಾರದೆಂದು ಬಿಡಿಎ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಆದರೂ, ಬೆಲೆಬಾಳುವ ಈ ನಿವೇಶನಗಳನ್ನು ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ಕಾನೂನುಬಾಹಿರವಾಗಿ ವಿಭಜಿಸಲಾಗಿದೆ. ಇದರಿಂದ ಪ್ರಾಧಿಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದರು.

‌ತನಿಖೆ ಕೈಗೆತ್ತಿಕೊಂಡಿರುವ ಬಿಡಿಎ ಜಾಗೃತದಳದ ಇನ್‌ಸ್ಪೆಕ್ಟರ್‌, ‘ಇವು ಮೂಲೆ ನಿವೇಶನಗಳೇ ಅಥವಾ ಮಧ್ಯಂತರ ನಿವೇಶನಗಳೇ ಮತ್ತು ಅವುಗಳನ್ನು ವಿಭಜಿಸಲಾಗಿದೆಯೇ ಎಂಬುದರ ಬಗ್ಗೆ ವಸ್ತುಸ್ಥಿತಿ ವರದಿಯನ್ನು ಕೂಡಲೇ ಒದಗಿಸಬೇಕು’ ಎಂದು ಉತ್ತರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿರುವ ಅಥವಾ ವಾಣಿಜ್ಯ ಉದ್ದೇಶಕ್ಕೆ ಪ್ರಾಧಿಕಾರವೇ ಬಳಸಿಕೊಳ್ಳಲು ಅವಕಾಶ ಇರುವ ಮೂಲೆ ನಿವೇಶನಗಳನ್ನು ಬದಲಿ ನಿವೇಶನವಾಗಿ ಹಂಚಿಕೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ, ಈ ನಿವೇಶನಗಳನ್ನು ವಿಭಜಿಸಿ ಮೂಲೆ ನಿವೇಶನಗಳಲ್ಲ ಎಂದು ದಾಖಲೆಗಳನ್ನು ಸೃಷ್ಟಿ ಮಾಡಲಾಗುತ್ತದೆ. ಬಳಿಕ ಅವುಗಳನ್ನು ಬದಲಿ ನಿವೇಶನವಾಗಿ ಹಂಚಿಕೆ ಮಾಡಲಾಗುತ್ತದೆ. ಉಳಿದ ಸ್ವಲ್ಪ ಭಾಗವನ್ನೂ ಆ ನಿವೇಶನ ಪಡೆದವರೇ ಬಳಸಿಕೊಳ್ಳುತ್ತಾರೆ. ಬೆಲೆಬಾಳುವ ನಿವೇಶನಗಳಾಗಿರುವ ಕಾರಣ ‘ಕಾರ್ನರ್‌ ಕಟ್‌’ ದಂಧೆಯನ್ನು ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್‌ ಮಧ್ಯವರ್ತಿಗಳು ಶಾಮೀಲಾಗಿ ನಡೆಸುತ್ತಾರೆ’ ಎಂದು ರಮೇಶ್ ‘‍ಪ್ರಜಾವಾಣಿ’ಗೆ ತಿಳಿಸಿದರು.

ಸಮಗ್ರ ತನಿಖೆಗೆ ಸಿಎಂ ಆದೇಶ
ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿದ್ದ ಮೂಲೆ ನಿವೇಶನಗಳನ್ನು ವಿಭಜಿಸಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಎರಡು ತಿಂಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಆದೇಶಿಸಿದ್ದಾರೆ.

ನಿಯಮಬಾಹಿರವಾಗಿ ಸಾವಿರಾರು ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಬಗ್ಗೆಯೂ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT