ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸುಸ್ಥಿತಿ ಕಟ್ಟಡ ಕೆಡವಿ ‘ಅಭಿವೃದ್ಧಿ ಭವನ’ ನಿರ್ಮಾಣ

Last Updated 19 ಆಗಸ್ಟ್ 2021, 21:00 IST
ಅಕ್ಷರ ಗಾತ್ರ

ಬೆಂಗಳೂರು: ಒಂದೆಡೆ, ಕೋವಿಡ್‌ ಸಂದರ್ಭದಲ್ಲಿ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಡಿಎ) ಈ ಸಂದಿಗ್ಧ ಕಾಲದಲ್ಲಿ ದಿಢೀರ್‌ ಆಗಿ ಹೊಸ ಕಟ್ಟಡದ ಚಿಂತೆ ಎದುರಾಗಿದೆ. ಅದಕ್ಕಾಗಿ ಕೇಂದ್ರ ಕಚೇರಿ ಆವರಣದಲ್ಲಿರುವ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ಸಂಕೀರ್ಣ ನಿರ್ಮಿಸಲು ಮುಂದಾಗಿದೆ. ಅಚ್ಚರಿ ಎಂದರೆ, ಇನ್ನೂ 17 ವರ್ಷವೂ ತುಂಬಿರದ ಸುಸ್ಥಿತಿಯಲ್ಲಿರುವ ಕಟ್ಟಡವನ್ನು ಕೆಡವಿ ಬಿಡಿಎ ನಿರ್ಮಿಸುತ್ತಿರುವುದು ‘ಅಭಿವೃದ್ಧಿ ಭವನ’ವನ್ನು.

ಬಿಡಿಎ ಸೇವೆ ಬಯಸಿ ಬರುವ ಜನರಿಗೆ ಒಂದೇ ಕಡೆ ಎಲ್ಲ ಸೇವೆಗಳು ಸಿಗಬೇಕು ಎಂಬ ಕಾರಣಕ್ಕೆ ಕೇಂದ್ರ ಕಚೇರಿಯ ಹಳೆಯ ಕಟ್ಟಡಗಳ ಸಂಕೀರ್ಣಕ್ಕೆ ತಾಗಿಕೊಂಡು ಮೂರು ಮಹಡಿಗಳ (ನೆಲ ಮಹಡಿ ಸೇರಿ ನಾಲ್ಕು ಮಹಡಿಗಳ) ಕಟ್ಟಡ ಸಂಕೀರ್ಣವನ್ನು ಪ್ರಾಧಿಕಾರವು 2004ರಲ್ಲಿ ನಿರ್ಮಿಸಿತ್ತು. ಆಗಿನ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಆ ಕಟ್ಟಡವನ್ನು ಉದ್ಘಾಟಿಸಿದ್ದರು. ಇನ್ನೂ ಗಟ್ಟಿಮುಟ್ಟಾಗಿರುವ ಈ ಕಟ್ಟಡವೂ ‘ಅಭಿವೃದ್ಧಿ ಭವನ’ಕ್ಕಾಗಿ ನೆಲಸಮವಾಗಲಿದೆ!

ಕೇಂದ್ರ ಕಚೇರಿ ಆವರಣದಲ್ಲಿ ಬಿಡಿಎ ಒಟ್ಟು 2 ಎಕರೆ 29 ಗುಂಟೆ ಜಮೀನನ್ನು ಹೊಂದಿದೆ. ಇಷ್ಟೂ ಜಾಗವನ್ನು ಬಳಸಿಕೊಂಡು ಇಲ್ಲಿ ಸುಮಾರು ₹ 250 ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ಸಂಕೀರ್ಣವನ್ನು ನಿರ್ಮಿಸುವುದು ಬಿಡಿಎ ಯೋಜನೆ.

‘ಬಿಡಿಎ ಕಚೇರಿಗಳಿಗೆ ಸುಮಾರು 2.25 ಲಕ್ಷ ಚದರ ಅಡಿಗಳಷ್ಟು ಜಾಗದ ಅಗತ್ಯವಿದೆ. ನಾವು 4.25 ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣದ ಕಟ್ಟಡ ನಿರ್ಮಿಸಲಿದ್ದೇವೆ. ಹೆಚ್ಚುವರಿ ಜಾಗವನ್ನು ಸರ್ಕಾರಿ ಹಾಗೂ ಸರ್ಕಾರದ ಅಧೀನದ ಸಂಸ್ಥೆಗಳ ಕಚೇರಿಗಳಿಗೆ ಬಾಡಿಗೆಗೆ ನೀಡುವ ಉದ್ದೇಶವಿದೆ. ಇದರಿಂದ ಬಿಡಿಎಗೆ ವರಮಾನವೂ ಬರಲಿದೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೊಸ ಕಟ್ಟಡ ಸಂಕೀರ್ಣದ ವಿನ್ಯಾಸ ಒದಗಿಸುವಂತೆ ಆಸಕ್ತ ವಾಸ್ತುಶಿಲ್ಪಿಗಳಿಂದ ಪ್ರಸ್ತಾವನೆಗಳನ್ನು (ಎಕ್ಸ್‌ಪ್ರೆಷನ್‌ ಆಫ್‌ ಇಂಟೆರೆಸ್ಟ್) ಬಿಡಿಎ ಸೋಮವಾರ ಆಹ್ವಾನಿಸಿದೆ. ಪ್ರಸ್ತಾವನೆಗಳ ಸಲ್ಲಿಕೆಗೆ ಪೂರ್ವಭಾವಿಯಾಗಿ ಆಸಕ್ತ ವಾಸ್ತುಶಿಲ್ಪಿಗಳ ಜೊತೆ ಸಭೆಗುರುವಾರವಿತ್ತು. ಪ್ರಸ್ತಾವನೆಗಳನ್ನು ಸಲ್ಲಿಸಲು ಕೇವಲ ಒಂದು ವಾರ ಕಾಲಾವಕಾಶ ನೀಡಲಾಗಿದೆ. ಇದೇ 23ರಂದೇ ಪ್ರಸ್ತಾವನೆಗಳನ್ನು ಬಿಡಿಎ ತೆರೆಯಲಿದೆ. ಇದೇ 25ರಂದು ತಮ್ಮ ಪ್ರಸ್ತಾವನೆಗಳ ಬಗ್ಗೆ ವಿವರಿಸಲು ಆಸಕ್ತ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

‘ಬಿಡಿಎರ ದಾಖಲೆಪತ್ರಗಳನ್ನು ದಾಸ್ತಾನು ಇಡಲು ಕೊಠಡಿಗಳ ಕೊರತೆ ಇದೆ. ಕೆಲವೆಡೆ ಕಾರಿಡಾರ್‌ಗಳಲ್ಲೇ ಕಪಾಟುಗಳನ್ನು ಇಟ್ಟು ಅವುಗಳಲ್ಲಿ ದಾಖಲೆ ಪತ್ರಗಳನ್ನು ಸಂಗ್ರಹಿಸಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಹೊಸ ಕಟ್ಟಡ ನಿರ್ಮಿಸುವ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

’ಸುಮಾರು 10 ಮಹಡಿಗಳ ಹೊಸ ಕಟ್ಟಡ ನಿರ್ಮಿಸುವ ಯೋಜನೆ ನಮ್ಮದು. ಈ ಪ್ರಸ್ತಾಪವಿನ್ನೂ ಪ್ರಾರಂಭಿಕ ಹಂತದಲ್ಲಿದೆ. ವಾಸ್ತುಶಿಲ್ಪಿಗಳಿಂದ ಪ್ರಸ್ತಾವನೆಗಳು ಸಲ್ಲಿಕೆ ಆದ ಬಳಿಕವೇ ಈ ಯೋಜನೆಗೆ ಅಂತಿಮ ರೂಪ ನೀಡಲಾಗುತ್ತದೆ. ಯಾರು ಅತ್ಯುತ್ತಮ ವಿನ್ಯಾಸವನ್ನು ಒದಗಿಸುತ್ತಾರೋ ಅದರ ಪ್ರಕಾರ ಕಟ್ಟಡ ನಿರ್ಮಿಸಲಾಗುತ್ತದೆ. ಇದಕ್ಕೆ ಸರ್ಕಾರದಿಂದ ಅನುದಾನ ಕೇಳುತ್ತಿಲ್ಲ. ಬಿಡಿಎಸ್ವಂತ ಸಂಪನ್ಮೂಲದಲ್ಲೇ ಇದನ್ನು ನಿರ್ಮಿಸಲಿದೆ. ಈ ಕಟ್ಟಡದಿಂದ ಬರುವ ಬಾಡಿಗೆ ಆದಾಯದಿಂದ ಇದರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು 10 ವರ್ಷದಲ್ಲಿ ಹಿಂಪಡೆಯಬಹುದು’ ಎಂದು ಅವರು ವಿವರಿಸಿದರು.

‘ಬಿಡಿಎ ಕೇಂದ್ರ ಕಚೇರಿ ಇರುವ ಪ್ರದೇಶದಲ್ಲಿ 2.25 ಎಫ್‌ಎಆರ್‌ ಬಳಸಿ ಬಹುಮಹಡಿ ಕಟ್ಟಡ ನಿರ್ಮಿಸಬಹುದು. ಅದಲ್ಲದೇ ಟಿಡಿಆರ್‌ ಬಳಸಿ 3.60 ಪ್ರೀಮಿಯಂ ಎಫ್‌ಎಆರ್‌ ಬಳಕೆಗೂ ಅವಕಾಶವಿದೆ. ಇಲ್ಲಿ 1.18 ಲಕ್ಷ ಚದರ ಅಡಿ ಜಾಗ ಲಭ್ಯ ಇದ್ದು, ಎಫ್ಎಆರ್‌ ಬಳಸಿಕೊಂಡು 4.27 ಲಕ್ಷ ಚದರ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ಅವಕಾಶ ಇದೆ’ ಎಂದರು.

‘ಹೊಸ ಕಟ್ಟಡದಲ್ಲಿ ನೆಲದಡಿಯ ಎರಡು ಮಹಡಿಗಳನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಬಹುಹಂತದ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಿದ್ದೇವೆ. ಸುಮಾರು 800 ಕಾರುಗಳನ್ನು ನಿಲ್ಲಿಸಲು ಅಲ್ಲಿ ಸ್ಥಳಾವಕಾಶ ಲಭ್ಯವಾಗಲಿದೆ’ ಎಂದರು.

‘ಇನ್ನೂ ಅನುಮೋದನೆ ಆಗಿಲ್ಲ’

’ಬಿಡಿಎಯ ಅಭಿವೃದ್ಧಿ ಭವನ ನಿರ್ಮಿಸುವ ಪ್ರಸ್ತಾವಕ್ಕೆ ಇನ್ನೂ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ಸಿಕ್ಕಿಲ್ಲ. ಆದರೆ, ಕಚೇರಿಗಳಿಗೆ ಹಾಗೂ ದಾಖಲೆ ಪತ್ರಗಳನ್ನು ಇಡಲು ಸ್ಥಳದ ಕೊರತೆ ಇರುವುದು ನಿಜ. ಇಲ್ಲಿ ವಾಹನ ನಿಲುಗಡೆ ಸಮಸ್ಯೆಯೂ ಇದೆ. ಹೊಸ ಕಟ್ಟಡ ನಿರ್ಮಾಣದಿಂದ ಈ ಸಮಸ್ಯೆಗಳಿಗೆಲ್ಲ ಪರಿಹಾರ ಸಿಗಲಿದೆ’ ಎಂದು ಬಿಡಿಎ ಆಯಕ್ತ ಎಂ.ಬಿ.ರಾಜೇಶ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

₹1704 ಕೋಟಿ ಮೇಲೆ ಕಣ್ಣು!

ಬಿಡಿಎ ಇತ್ತೀಚಿಗೆ ವಿವಿಧ ಬಡಾವಣೆಗಳಲ್ಲಿನ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಏಳು ಹಂತಗಳಲ್ಲಿ ನಡೆಸಿದೆ. ಇದರಿಂದ ಬಿಡಿಎ ಬೊಕ್ಕಸಕ್ಕೆ ₹ 1,704 ಕೋಟಿ ವರಮಾನ ಬರಲಿದೆ. ಈ ಹಣದ ಮೇಲೆ ಕಣ್ಣಿಟ್ಟು ಈ ಭಾರಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಸುಸ್ಥಿತಿಯಲ್ಲಿರುವ ಕಟ್ಟಡ ಕೆಡಹುವುದೇಕೆ?

‘ಭಾರಿ ಯೋಜನೆಗಳ ಹೆಸರಿನಲ್ಲಿ ಭಾರಿ ಅಕ್ರಮಗಳು ನಡೆಯುತ್ತವೆ. ಇದು ಕೂಡ ಅಂತಹದ್ದೇ ಯೋಜನೆ. ಕಡತ ದಾಸ್ತಾನು ಇಡಲು ಜಾಗ ಇಲ್ಲದಿದ್ದರೆ ಅದಕ್ಕೆ ಮಾತ್ರ ಹೊಸ ಕಟ್ಟಡ ನಿರ್ಮಿಸಬಹುದು. ಅದಕ್ಕಾಗಿ ಸುಸ್ಥಿತಿಯಲ್ಲಿರುವ ಕಟ್ಟಡವನ್ನು ಕೆಡಹುವ ಅಗತ್ಯವಿದೆಯೇ’ ಎಂದು ಬಿಡಿಎ ನಿವೃತ್ತ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT