ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಪಾವತಿ: ಬಿಡಿಎ ವೆಬ್‌ಸೈಟ್‌ನಲ್ಲಿ ತಪ್ಪು ವಿವರ

ಎನ್‌ಪಿಕೆ ಬಡಾವಣೆ: ಕೆಲ ನಿವೇಶನದಾರರಿಗೆ ನಿರ್ವಹಣಾ ಶುಲ್ಕ ಸೇರಿಸಿ ತೆರಿಗೆ ಮೊತ್ತ ತೊರಿಸುತ್ತಿರುವ ವೆಬ್‌ಸೈಟ್‌
Last Updated 12 ಏಪ್ರಿಲ್ 2022, 16:55 IST
ಅಕ್ಷರ ಗಾತ್ರ

ಬೆಂಗಳೂರು: ಬಿಡಿಎ ಬಡಾವಣೆಗಳ ನಿವಾಸಿಗಳು 2022–23ನೇ ಸಾಲಿನ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಲುಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೋಮವಾರದಿಂದ ಅವಕಾಶ ಕಲ್ಪಿಸಿದೆ. ಆದರೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ (ಎನ್‌ಪಿಕೆಎಲ್‌) ಕೆಲವು ನಿವೇಶನಗಳ ಆಸ್ತಿ ತೆರಿಗೆಗೆ ಸಂಬಂಧಿಸಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ತಪ್ಪು ವಿವರಗಳನ್ನು ತೋರಿಸಲಾಗುತ್ತಿದ್ದು, ಇದು ನಿವೇಶನದಾರರ ಕಳವಳಕ್ಕೆ ಕಾರಣವಾಗಿದೆ.

‘ನಾನು ಬಡಾವಣೆಯ ಐದನೇ ಬ್ಲಾಕ್‌ನ ಎಫ್‌ ಸೆಕ್ಟರ್‌ನಲ್ಲಿ 30x40 ಅಡಿಯ ನಿವೇಶನ ಹೊಂದಿದ್ದೇನೆ. ಬಿಡಿಎ ನಿಗದಿಪಡಿಸಿದ ದರದ ಪ್ರಕಾರ ನಾನು ₹ 791 ತೆರಿಗೆ ಪಾವತಿಸಬೇಕು. ಆದರೆ, ಬಿಡಿಎ ವೆಬ್‌ಸೈಟ್‌ನಲ್ಲಿ (https://propertytax.bdabangalore.org) ನನ್ನ ನಿವೇಶನದ ಆಸ್ತಿ ತೆರಿಗೆ ಮೊತ್ತವು ₹ 2,635 ಎಂದು ತೋರಿಸುತ್ತಿದೆ. ಇಷ್ಟು ಮೊತ್ತವನ್ನೇ ಕಟ್ಟಬೇಕೋ ಬೇಡವೊ ಎಂಬ ಗೊಂದಲದಲ್ಲಿದ್ದೇನೆ’ ಎಂದು ನಿವೇಶನದಾರ ಜೆ.ವೆಂಕಟೇಶಪ್ಪ ‘ಪ್ರಜಾವಾಣಿ’ ಜೊತೆ ಅಳಲು ತೋಡಿಕೊಂಡರು.

ಏಳನೇ ಬ್ಲಾಕ್‌ನ ಡಿ ಸೆಕ್ಟರ್‌ನಲ್ಲಿ ನಿವೇಶನ ಮಂಜೂರಾಗಿರುವ ನಾಗರತ್ನಾ ಅವರೂ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರಿಗೂ ನಿರ್ವಹಣಾ ಶುಲ್ಕ ವಿಧಿಸಲು ಬಿಡಿಎ 2021ರಲ್ಲಿ ನಿರ್ಧರಿಸಿತ್ತು. ಈ ಬಡಾವಣೆಯಲ್ಲಿ ಮನೆ ನಿರ್ಮಿಸುವುದಕ್ಕೆ ಅಗತ್ಯವಿರುವ ಮೂಲಸೌಕರ್ಯವನ್ನೇ ಕಲ್ಪಿಸುವ ಮುನ್ನವೇ ನಿರ್ವಹಣಾ ಶುಲ್ಕವನ್ನು ಸಂಗ್ರಹಿಸುತ್ತಿರುವ ಬಗ್ಗೆ ನಿವೇಶನದಾರರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಬಿಡಿಎ ಈ ಬಡಾವಣೆಯ ನಿವೇಶನದಾರರಿಂದ ನಿರ್ವಹಣಾ ಶುಲ್ಕ ಸಂಗ್ರಹಿಸದಿರಲು ಬಿಡಿಎ 2021ರ ಜುಲೈನಲ್ಲಿ ನಿರ್ಧರಿಸಿತ್ತು.

ಎನ್‌ಪಿಕೆ ಬಡಾವಣೆಯ ನಿವೇಶನದಾರರಿಗೆ ನಿರ್ವಹಣಾ ಶುಲ್ಕವನ್ನು ಕೈಬಿಡುವ ನಿರ್ಧಾರವನ್ನು ಬಿಡಿಎ ಪ್ರಕಟಿಸುವುದಕ್ಕೆ ಮುನ್ನವೇ ಕೆಲವರು ಅದನ್ನು ಆಸ್ತಿ ತೆರಿಗೆ ಜೊತೆ ಪಾವತಿಸಿದ್ದರು. ಅಂತಹ ನಿವೇಶನಗಳ ಆಸ್ತಿ ತೆರಿಗೆ ಮೊತ್ತದ ಜೊತೆಗೆ ನಿರ್ವಹಣಾ ಶುಲ್ಕವೂ ಸೇರಿರುವ ಮೊತ್ತವು ಬಿಡಿಎ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. 400ಕ್ಕೂ ಹೆಚ್ಚು ಮಂದಿ ಇಂತಹ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಈ ಲೋಪವನ್ನು ಬಗೆಹರಿಸಬೇಕು ಎಂದು ಎನ್‌ಪಿಕೆ ಬಡಾವಣೆ ನಿವೇಶನದಾರರ ಮುಕ್ತ ವೇದಿಕೆಯ ಎ.ಎಸ್‌.ಸೂರ್ಯಕಿರಣ್‌ ಒತ್ತಾಯಿಸಿದರು.

‘ಕಳೆದ ವರ್ಷ ನಿರ್ವಹಣಾ ಶುಲ್ಕವನ್ನು ಸೇರಿಸಿ ತೆರಿಗೆ ಕಟ್ಟಿದ್ದೆ. ನಂತರ ಬಿಡಿಎ ನಿರ್ವಹಣಾ ಶುಲ್ಕ ರದ್ದುಪಡಿಸಿತು. ನಾನು ಕಟ್ಟಿದ್ದ ನಿರ್ವಹಣಾ ಶುಲ್ಕವನ್ನು ಬಿಡಿಎ ಮರಳಿಸಿಲ್ಲ. ಈ ಸಲವೂ ವೆಬ್‌ಸೈಟ್‌ನಲ್ಲಿ ನಿರ್ವಹಣಾ ಶುಲ್ಕವನ್ನು ಸೇರಿಸಿ ಆಸ್ತಿ ತೆರಿಗೆಯ ಮೊತ್ತ ತೋರಿಸಲಾಗುತ್ತಿದೆ. ನಾನು ಯಾವುದೇ ಹಳೆ ಬಾಕಿಯನ್ನೂ ಉಳಿಸಿಕೊಂಡಿಲ್ಲ’ ಎಂದು ವೆಂಕಟೇಶಪ್ಪ ತಿಳಿಸಿದರು.

‘ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವಾಸಿಗಳಿಂದ ನಿರ್ವಹಣಾ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ. ಈ ಬಗ್ಗೆ ಕಳೆದ ವರ್ಷವೇ ಆದೇಶ ಪ್ರಕಟಿಸಲಾಗಿದೆ’ ಎಂದು ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡ ಸ್ಪಷ್ಟಪಡಿಸಿದರು.

‘ಲೋಪವಿದ್ದರೆ ಸರಿಪಡಿಸುತ್ತೇವೆ’

‘ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ತಪ್ಪು ವಿವರಗಳು ಇರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಒಂದೆರಡು ಪ್ರಕರಣಗಳಲ್ಲಿ ಈ ರೀತಿ ಆಗಿರಬಹುದು. ಆಸ್ತಿ ತೆರಿಗೆಯ ಲೆಕ್ಕ ವೆಬ್‌ಸೈಟ್‌ನಲ್ಲಿ ತಪ್ಪಾಗಿ ನಮೂದಾಗಿದ್ದರೆ, ನಿವೇಶನದಾರರು ಸ್ಥಳೀಯ ಕಂದಾಯ ಅಧಿಕಾರಿ ಕಚೇರಿಗೆ ಹೋಗಿ ದೂರು ನೀಡಬಹುದು. ಲೋಪ ಸರಿಪಡಿಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದುಬಿಡಿಎ ಆರ್ಥಿಕ ಸದಸ್ಯ ಎಸ್‌.ಎಂ. ರಾಮಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರು ಹಳೆ ಬಾಕಿ ಉಳಿಸಿಕೊಂಡಿದ್ದರೂ ಈ ರೀತಿ ಆಗುತ್ತದೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.

‘ಆಸ್ತಿ ತೆರಿಗೆಗೆ ಸಂಬಂಧಿಸಿದ ಲೋಪಗಳನ್ನು ನಮ್ಮ ಹಂತದಲ್ಲಿ ಸರಿಪಡಿಸಲಾಗದು. ಈ ಬಗ್ಗೆ ಕೇಂದ್ರ ಕಚೇರಿಯ ಅಧಿಕಾರಿಗಳೇ ಕ್ರಮ ಕೈಗೊಳ್ಳಬೇಕು’ ಎಂದು ಪಶ್ಚಿಮ ವಿಭಾಗದ ಕಂದಾಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT