ಶನಿವಾರ, ಫೆಬ್ರವರಿ 29, 2020
19 °C
ರಸ್ತೆ ಹಾದು ಹೋಗುವ ಜಾಗ ಗುರುತಿಸುವ ಕಾರ್ಯ ಶೇ 50ರಷ್ಟು ಪೂರ್ಣ

ಪಿಆರ್‌ಆರ್‌: ಸರ್ವೆ ಮುಗಿಸಲು ಬಿಡಿಎ ಹರಸಾಹಸ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ಯೋಜನೆ ಭೂಸ್ವಾಧೀನ ಕುರಿತ ಸರ್ವೇ ಕಾರ್ಯವನ್ನು ಇದೇ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶತಾಯಗತಾಯ ಪ್ರಯತ್ನಿಸುತ್ತಿದೆ. 

ಬಿಡಿಎ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಈ ರಸ್ತೆ ಎಲ್ಲೆಲ್ಲಿ ಹಾದುಹೋಗಲಿದೆ ಎಂಬುದನ್ನು ಗುರುತು ಮಾಡುತ್ತಿದ್ದಾರೆ. ಇದರ ಆಧಾರದಲ್ಲಿ ಪ್ರತಿ ಗ್ರಾಮದಲ್ಲಿ ಎಷ್ಟು ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗುತ್ತದೆ, ಎಷ್ಟು ಮನೆಗಳು ಹೋಗುತ್ತವೆ, ಎಷ್ಟು ಮಂದಿ ಖಾತಾದಾರರು ಜಮೀನು ಕಳೆದುಕೊಳ್ಳುತ್ತಾರೆ ಎಂಬ ವಿವರ ಕಲೆ ಹಾಕುತ್ತಿದ್ದಾರೆ.

‘ಎಲ್ಲೆಲ್ಲಿ ರಸ್ತೆ ಹಾದುಹೋಗಲಿದೆ ಎಂಬ ಬಗ್ಗೆ ಈ ಹಿಂದೆಯೇ ಸರ್ವೆ ನಡೆಸಲಾಗಿದೆ. ಆದರೆ, ಇದಾಗಿ 10 ವರ್ಷಗಳು ಕಳೆದಿವೆ. ಅನೇಕ ಕಡೆ ಬಿಡಿಎ ಅಳವಡಿಸಿದ್ದ ಸರ್ವೆ ಕಲ್ಲುಗಳು ನಾಪತ್ತೆಯಾಗಿವೆ. ಹಾಗಾಗಿ ಮಾರ್ಗವನ್ನು ನಿಖರವಾಗಿ ಗುರುತಿಸಲು ನಾವು ಭೂಸ್ವಾಧೀನ ವಿಭಾಗದ ಅಧಿಕಾರಿಗಳಿಗೆ ನೆರವಾಗುತ್ತಿದ್ದೇವೆ. ಇದುವರೆಗೆ 40 ಕಿ.ಮೀ. ಉದ್ದದಷ್ಟು ಮಾರ್ಗವನ್ನು ಗುರುತಿಸಿದ್ದೇವೆ’ ಎಂದು ಬಿಡಿಎ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆವರೆಗೆ ಹಾಗೂ ಅಲ್ಲಿಂದ ಹಳೆ ಮದ್ರಾಸ್‌ ರಸ್ತೆ ವರೆಗೆ ಒಟ್ಟು 37.5 ಕಿ.ಮೀ ಉದ್ದದ ಮಾರ್ಗದ ಸರ್ವೆ ಪೂರ್ಣಗೊಂಡಿದೆ. ಈಗ ಹಳೆ ಮದ್ರಾಸ್‌ ರಸ್ತೆಯಿಂದ ಹೊಸೂರು ರಸ್ತೆ ಕಡೆಗೆ ಸರ್ವೆ ನಡೆಸುತ್ತಿದ್ದೇವೆ’ ಎಂದರು.‌

ರಾತ್ರಿವರೆಗೂ ಸರ್ವೆ
‘ಭೂಸ್ವಾಧೀನ ವಿಭಾಗದ ಅಧಿಕಾರಿಗಳು ಈಗಾಗಲೇ 20 ಕಿ.ಮೀ ಉದ್ದದಷ್ಟು ರಸ್ತೆಯ ಸರ್ವೆ ಪೂರ್ಣಗೊಳಿಸಿದ್ದೇವೆ. ಮಾಸಾಂತ್ಯದೊಳಗೆ ಸರ್ವೆ ಮುಗಿಸಬೇಕೆಂಬ ಗುರಿ ನಿಗದಿಪಡಿಸಿಕೊಂಡಿದ್ದೇವೆ. ಹಾಗಾಗಿ, ನಮ್ಮ ಸರ್ವೇಯರ್‌ಗಳು ರಾತ್ರಿ 10 ಗಂಟೆವರೆಗೂ ಸರ್ವೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ’ ಎಂದು ಬಿಡಿಎ ಉಪವಿಭಾಗಾಧಿಕಾರಿ ಕೆ.ಮಥಾಯಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಸರ್ವೆ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಬಿಡಿಎ ಆರು ಸರ್ವೆಯರ್‌ಗಳ ಜೊತೆಗೆ ಹೆಚ್ಚುವರಿ ಸರ್ವೇಯರ್‌ಗಳ ಸೇವೆಯನ್ನು ಬಳಸಿಕೊಳ್ಳುತ್ತಿದ್ದೇವೆ. ಒಟ್ಟು 18 ಸರ್ವೆಯರ್‌ಗಳೂ ಈ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದರು.

ಪರಿಹಾರ: 31ಕ್ಕೆ ಅಂತಿಮ ನಿರ್ಧಾರ
ಭೂಪರಿಹಾರದಲ್ಲಿ ತಾರತಮ್ಯ ಆಗುತ್ತಿದೆ ಎಂಬುದು ಈ ಯೋಜನೆಗೆ ಭೂಮಿ ಬಿಟ್ಟುಕೊಡುತ್ತಿರುವ ರೈತರ ಆರೋಪ. ಇದೇ ಅಂಶವನ್ನು ಮುಂದಿಟ್ಟುಕೊಂಡು ಕೆಲವು ರೈತರು ಸರ್ವೆ ಕಾರ್ಯಕ್ಕೂ ಅಡ್ಡಿಪಡಿಸಿದ್ದರು. ಈ ಬಗ್ಗೆ ಸರ್ಕಾರದ ಜೊತೆ ಸರ್ಚಿಸಿ ಕ್ರಮಕೈಗೊಳ್ಳುವುದಾಗಿ ಬಿಡಿಎ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಸರ್ವೆಗೆ ರೈತರು ಸಹಕರಿಸಿದ್ದರು.

‘ಪರಿಹಾರದ ಗೊಂದಲ ನಿವಾರಿಸುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತುಕತೆ ನಡೆಸಿದ್ದೇವೆ. ಇದೇ 31ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಸಭೆ ನಿಗದಿಪಡಿಸಲಾಗಿದೆ. ಅಂದು ಸರ್ಕಾರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ’ ಎಂದು ಮಥಾಯಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು