ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರಿಗೆ ಶೇ 40ರಷ್ಟು ಅಭಿವೃದ್ಧಿಯಾದ ಜಮೀನು’

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಎರಡು ತಿಂಗಳಲ್ಲಿ ಭೂಮಿಪೂಜೆ: ಎಸ್.ಆರ್. ವಿಶ್ವನಾಥ್
Last Updated 18 ಜನವರಿ 2021, 19:11 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡಾವಣೆ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ರೈತರಿಂದ ಪಡೆದ ಜಮೀನಿಗೆ ಬದಲಾಗಿ ಶೇ 40ರಷ್ಟು ಅಭಿವೃದ್ಧಿ ಹೊಂದಿದ ಜಮೀನನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಬಿಡಿಎ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಡಿಎಗೆ ಜಮೀನು ನೀಡಿದ ರೈತರು ನಿವೇಶನಕ್ಕೆ ಅಲೆದಾಡುವಂತಾಗಿದೆ. ಮುಂದೆ ಇದಕ್ಕೆ ಅವಕಾಶ ಕೊಡುವುದಿಲ್ಲ. ನಿವೇಶನ ನೀಡುವುದರ ಜೊತೆಗೆ ಆದ್ಯತೆ ಮೇರೆಗೆ ಭೂಪರಿಹಾರ ನೀಡಲಾಗುವುದು’ ಎಂದರು.

‘ಪ್ರಾಧಿಕಾರದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಕಚೇರಿಯೊಳಗೆ ಅಥವಾ ಸುತ್ತಮುತ್ತ ಏಜೆಂಟರು ಸುಳಿಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕಚೇರಿಗೆ ಬರುವ ಬಡವರೊಂದಿಗೆ ಗೌರವದಿಂದ ನಡೆದುಕೊಳ್ಳುವ ವಾತಾವರಣ ಇರಬೇಕು ಎಂದೂ ಸೂಚಿಸಲಾಗಿದೆ’ ಎಂದರು.

‘ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಗಡುವು ನಿಗದಿಪಡಿಸಿ, ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆಯೂ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಪಿಆರ್‌ಆರ್‌

’ಸರ್ಕಾರದ ಮಹತ್ವಾಕಾಂಕ್ಷೆಯ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್) ನಿರ್ಮಾಣಕ್ಕೆ ₹21 ಸಾವಿರ ಕೋಟಿ ಬೇಕಾಗುತ್ತದೆ. ಇದನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆಯನ್ನು ಆದಷ್ಟು ಶೀಘ್ರ ಅಂತಿಮಗೊಳಿಸಿ, ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ವಿಶೇಷ ತನಿಖಾ ತಂಡ:

ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಪ್ರಮುಖ ಹಗರಗಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ಶೀಘ್ರ ಇತ್ಯರ್ಥಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಭೂಮಿಪೂಜೆ:

ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ‘ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಮತ್ತು ಪಿಆರ್‌ಆರ್ ಯೋಜನೆಗೆ ಮುಂದಿನ ಎರಡು ತಿಂಗಳಲ್ಲಿ ಏಕಕಾಲಕ್ಕೆ ಗುದ್ದಲಿಪೂಜೆ ನೆರವೇರಿಸಲಾಗುವುದು’ ಎಂದು ಹೇಳಿದರು.

‘ಪಿಆರ್‌ಆರ್ ಯೋಜನೆಗೆ ಎರಡು ಎಕರೆಗಿಂತ ಹೆಚ್ಚು ಭೂಮಿ ಕಳೆದುಕೊಂಡವರಿಗೆ ಶೇ 50ರಷ್ಟು ಟಿಡಿಆರ್ ಹಾಗೂ ಉಳಿದ ಶೇ 50ರಷ್ಟು ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಯೋಜನೆ ಅನುಷ್ಠಾನಕ್ಕೆ ಇಸ್ರೇಲ್‌ನ ಝೋಡ್‌ ಕಂಪನಿಯು ಆಸಕ್ತಿ ತೋರಿಸಿದೆ. ಎರಡು ತಿಂಗಳಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು’ ಎಂದರು.

‘ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡವರಿಗೆ ಪ್ರತಿಯಾಗಿ ಬಡಾವಣೆ ಅಕ್ಕಪಕ್ಕದಲ್ಲಿ ಅಂದರೆ ಬೆಳ್ಳಳ್ಳಿ, ಕೋಗಿಲು, ಮಿಟಗಾನಹಳ್ಳಿಯಲ್ಲಿ ಒಟ್ಟಾರೆ 380 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿತರಿಸಲು ಉದ್ದೇಶಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಬಿಡಿಎನಲ್ಲಿ ಯಾವೊಂದು ಪ್ರಕರಣದ ವಿರುದ್ಧ ಎಫ್‌ಐಆರ್ ದಾಖಲಿಸಲು ಈ ಮೊದಲು ಪ್ರಾಧಿಕಾರದ ಜಾಗೃತದಳಕ್ಕೆ ಅವಕಾಶ ಇರಲಿಲ್ಲ. ಈಗ ಇದಕ್ಕೂ ಮುಖ್ಯಮಂತ್ರಿಗಳು ಅವಕಾಶ ಕಲ್ಪಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆಯುಕ್ತ ಡಾ.ಎಚ್.ಆರ್. ಮಹದೇವ ಮತ್ತು ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT