ಸೋಮವಾರ, ಜನವರಿ 20, 2020
20 °C
ನಾಗವಾರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

₹ 300 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ ಪಡೆದ ಬಿಡಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಗವಾರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಅಂದಾಜು ₹300 ಕೋಟಿ ಮೌಲ್ಯದ ಕಟ್ಟಡಗಳನ್ನು ಪ್ರಾಧಿಕಾರವು ಮಂಗಳವಾರ ವಶಪಡಿಸಿಕೊಂಡಿದೆ.

ನಾಗವಾರ ಗ್ರಾಮದ ಸರ್ವೆ ನಂಬರ್ 75ರಲ್ಲಿ ಎಚ್.ಬಿ.ಆರ್. ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರವು 1985ರಲ್ಲಿ ಸುಮಾರು 6 ಎಕರೆ 3 ಗುಂಟೆ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. ಇದರಲ್ಲಿ 1 ಎಕರೆ 26 ಗುಂಟೆ ಜಾಗವನ್ನು ಹೊರವರ್ತುಲ ರಸ್ತೆಗೆ ಹಾಗೂ ಇನ್ನುಳಿದ 4 ಎಕರೆ 17 ಗುಂಟೆ ಜಾಗವನ್ನು ಬಡಾವಣೆ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿತ್ತು.

ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಸ್ಥಳೀಯರು ಅನಧಿಕೃತವಾಗಿ ಕಟ್ಟಡ ಹಾಗೂ ಶೆಡ್‌ಗಳನ್ನು ನಿರ್ಮಿಸಿದ್ದರು. ಇವುಗಳನ್ನು ಬಿಡಿಎ ಆಯುಕ್ತ ಜಿ.ಸಿ. ಪ್ರಕಾಶ್, ಎಂಜಿನಿಯರಿಂಗ್‌ ಸದಸ್ಯ ಬಿ.ಶಿವಶಂಕರ್‌ ಹಾಗೂ ಪ್ರಾಧಿಕಾರದ ಕಾರ್ಯಪಡೆಯ ಪೊಲೀಸ್ ಸೂಪರಿಂಟೆಂಡೆಂಟ್ ಶಿವಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡವು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸ್ವಾಧೀನಪಡಿಸಿಕೊಂಡಿತು.

‘ಒತ್ತುವರಿಯಾದ ಜಾಗದಲ್ಲಿ ನಾಲ್ಕೈದು ಬಹುಮಹಡಿ ಕಟ್ಟಡಗಳು ಸೇರಿ ಹತ್ತಾರು ಕಟ್ಟಡಗಳು ನಿರ್ಮಾಣ
ವಾಗಿದ್ದವು. ಕೆಲವು ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದವು. ಅವುಗಳನ್ನು ಸ್ವಾಧೀನಕ್ಕೆ ಪಡೆದು ಈ ಸ್ವತ್ತು ಬಿಡಿಎಗೆ ಸೇರಿದ್ದು ಎಂಬ ಫಲಕಗಳನ್ನು ಹಾಕಿದ್ದೇವೆ. ಈ ಕಟ್ಟಡಗಳಲ್ಲಿದ್ದವರೂ ಸ್ವಾಧೀನ ಪ್ರಕ್ರಿಯೆಗೆ ಸಹಕರಿಸಿದ್ದಾರೆ’ ಎಂದು ಬಿಡಿಎ ಆಯುಕ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲವರು ತಾವಾಗಿಯೇ ಕಟ್ಟಡವನ್ನು ತೆರವುಗೊಳಿಸುವುದಾಗಿ ಹೇಳಿದ್ದಾರೆ. ಸಣ್ಣ ಕಟ್ಟಡಗಳಲ್ಲಿರುವ
ವರು ತೆರವು ಮಾಡಲು ಕಾಲಾವಕಾಶ ಕೇಳಿದ್ದಾರೆ. ಒಂದೆರಡು ದಿನಗಳಲ್ಲಿ ಆ ಕಟ್ಟಡಗಳನ್ನು ನೆಲಸಮ ಮಾಡಲಿದ್ದೇವೆ. ಬಹುಮಹಡಿ ಕಟ್ಟಡಗಳನ್ನು ಸದ್ಯಕ್ಕೆ ನೆಲಸಮಗೊಳಿಸುವುದಿಲ್ಲ’ ಎಂದರು.

‘ಬಿಡಿಎ ನಿರ್ಮಿಸಿರುವ ಅನೇಕ ಬಡಾವಣೆಗಳಲ್ಲಿ ಜಾಗ ಒತ್ತುವರಿಯಾಗಿವೆ. ಅವುಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.ಇನ್ನೆರಡು ತಿಂಗಳುಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ’ ಎಂದರು.

ಇನ್ನಷ್ಟು ಒತ್ತುವರಿ ತೆರವು ಶೀಘ್ರ: ‘ಇದುವರೆಗೆ ಸುಮಾರು ₹ 5ಸಾವಿರ ಕೋಟಿ ಮೌಲ್ಯದ ಸ್ವತ್ತುಗಳು ಒತ್ತುವರಿ ಆಗಿರುವುದನ್ನು ಪತ್ತೆ ಹಚ್ಚಲಾಗಿದೆ. ಅವುಗಳನ್ನು ಸ್ವಾಧಿನಪಡಿಸಿಕೊಳ್ಳಲು ಶೀಘ್ರವೇ ಕಾರ್ಯಾಚರಣೆ ಕೈಗೊಳ್ಳಲಿದ್ದೇವೆ. ಪ್ರಾಧಿಕಾರಕ್ಕೆ ಸಂಬಂಧಿಸಿದ ಒಂದು ಸ್ವತ್ತನ್ನೂ ಬಿಡದೇ ಎಲ್ಲವನ್ನೂ ಸ್ವಾಧೀನಪಡಿಸಿಕೊಳ್ಳುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)