ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ನಿವೇಶನ ಹಂಚಿಕೆ ದಾಖಲೆಗಳನ್ನೇ ತಿದ್ದಿ ಅಕ್ರಮ

ನಕಲಿ ದಾಖಲೆ ಆಧರಿಸಿ ನಿವೇಶನಕ್ಕೆ ಶುದ್ಧ ಕ್ರಯಪತ್ರ ನೀಡಿದ ಅಧಿಕಾರಿಗಳು
Last Updated 5 ಫೆಬ್ರುವರಿ 2022, 19:25 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರ ಬಡಾವಣೆಯ ನಿವೇಶನವೊಂದರ ಹಂಚಿಕೆಗೆ ಸಂಬಂಧಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಹಿಳೆಯೊಬ್ಬರ ಹೆಸರಿಗೆ ಶುದ್ಧ ಕ್ರಯಪತ್ರ ಮಾಡಿಕೊಟ್ಟಿರುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಂತರಿಕ ತನಿಖೆಯಿಂದ ದೃಢಪಟ್ಟಿದೆ. ಈ ಕೃತ್ಯದಲ್ಲಿ ಉಪಕಾರ್ಯದರ್ಶಿ–3 ಆಗಿದ್ದ ಕೆಎಎಸ್‌ ಅಧಿಕಾರಿ ಅನಿಲ್‌ ಕುಮಾರ್ ಹಾಗೂ ಅವರ ಕಚೇರಿಯ ಇಬ್ಬರು ಸಿಬ್ಬಂದಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹದಿಂದ ವಿಸ್ತೃತ ತನಿಖೆಗೆ ಒಳಪಡಿಸುವಂತೆ ಬಿಡಿಎ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಚಂದ್ರ ಲೇಔಟ್ ಎರಡನೇ ಹಂತದ ನಿವೇಶನವೊಂದನ್ನು ( ಸಂಖ್ಯೆ 1453) ಸೆಲ್ವರಾಣಿ ಅವರಿಗೆ ಹಂಚಿಕೆ ಮಾಡಿದಂತೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರದಲ್ಲಿ (ಎಲ್‌ಎಸ್‌ಡಿಎ) ವಿಭಿನ್ನ ರೀತಿಯ ಛಾಪಾ ಕಾಗದಗಳಿವೆ. ಆಳವಾಗಿ ಪರಿಶೀಲಿಸಿದಾಗ ಈ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿರುವುದಾಗಿ ಕಂಡುಬಂದಿದೆ. ಈ ನಿವೇಶನಕ್ಕೆ ಸಂಬಂಧಿಸಿದ ನಕಲಿ ದಾಖಲಾತಿಗಳನ್ನು ನಕಲಿ ಎಲ್‌ಎಸ್‌ಡಿಎಯನ್ನು ಸೃಷ್ಟಿಸಿ ಪ್ರಾಧಿಕಾರಕ್ಕೆ ನಷ್ಟ ಉಂಟುಮಾಡಿರುವ ಬಗ್ಗೆ ಕ್ರಮ ವಹಿಸಲು ಬಿಡಿಎ ಲೆಕ್ಕಪರಿಶೋಧನೆಯ ಕರಡು ಟಿಪ್ಪಣಿಯಲ್ಲೂ ಶಿಫಾರಸು ಮಾಡಲಾಗಿತ್ತು.

ಈ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ 1983ರ ಮಾರ್ಚ್‌ 17ರಂದು ₹ 15,181 ಮೊತ್ತವನ್ನು ಪಾವತಿಸಿದ್ದನ್ನು ನಮೂದಿಸಲಾಗಿದೆ. ಅದನ್ನು ತಿದ್ದುಪಡಿ ಮಾಡಿ ₹ 11,646 ಎಂದು ನಮೂದಿಸಿರುವುದು ಕಡತ ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದಿರುತ್ತದೆ. ಮೂಲ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರದಲ್ಲಿ (ಎಲ್‌ಎಸ್‌ಡಿಎ) ದಾಖಲೆ (ಸಂಖ್ಯೆ 5135/83-84) ಪ್ರಕಾರ ಈ ನಿವೇಶನವನ್ನು 1984ರ ಫೆ.18ರಂದು ಗುರುನಾವಡಿ ಅವರಿಗೆ ಹಂಚಿಕೆ ಮಾಡಲಾಗಿತ್ತು. ಇದರ ಎಲ್‌ಎಸ್‌ಡಿಎ ನಕಲಿ ಆಗಿರುವುದು ಕಂಡುಬಂದಿರುತ್ತದೆ. ಸೆಲ್ವರಾಣಿ ಅವರು ಒದಗಿಸಿರುವ ಋಣಭಾರರಾಹಿತ್ಯ ಪತ್ರವನ್ನು ಪರಿಶೀಲಿಸಿದಾಗಲೂ ಅದರಲ್ಲಿ ನಮೂದಾಗಿರುವ ವ್ಯವಹಾರಗಳಲ್ಲಿ ಅದರ ಖರೀದಿಯ ವಿವರಗಳಿಲ್ಲ.

ಹಂಚಿಕೆ ನೋಂದಣಿಯ ದಾಖಲೆಗಳನ್ನು ಕೂಡ ನಕಲಿಯಾಗಿ ಸೃಷ್ಟಿಸಿರುವುದು ಕಂಡುಬಂದಿದೆ. ಈ ನಿವೇಶನಕ್ಕೆ ಸಂಬಂಧಿಸಿದಂತೆ ನೋಂದಣಿಯಾಗಿದ್ದ ಎಲ್‌ಎಸ್‌ಡಿಎ ದಾಖಲಾತಿಯ ಕ್ಸೆರಾಕ್ಸ್‌ ಪ್ರತಿಯ ಒಂದನೇ ಪುಟದ ಹಿಂಭಾಗದಲ್ಲಿ ಖಜಾನೆಗೆ ಸಂಬಂಧಿಸಿದ ಮೊಹರಿನಲ್ಲಿ, ದಿನಾಂಕವು 1983ರ ಸೆ. 23 ಎಂದು, ಎರಡು ಮತ್ತು ಮೂರನೇ ಪುಟಗಳಲ್ಲಿ ದಿನಾಂಕ 1983ರ ಆ 16 ಎಂದು, ನಾಲ್ಕನೇ ಮತ್ತು ಐದನೇ ಪುಟದಲ್ಲಿ ದಿನಾಂಕ 1983ರ ಜುಲೈ20 ಎಂದು ನಮೂದಾಗಿದೆ. ಒಂದೇ ಕ್ರಯಪತ್ರದಲ್ಲಿ ವಿಭಿನ್ನ ರೀತಿಯಲ್ಲಿ ದಿನಾಂಕಗಳು ಇರುವುದು ಕಂಡುಬಂದಿದೆ.

ನಿವೇಶನ ಹಂಚಿಕೆ ನೋಂದಣಿ ಪುಸ್ತಕಗಳನ್ನು ಪರಿಶೀಲಿಸಿದಾಗ ಪುಟಸಂಖ್ಯೆ 90 ರಲ್ಲಿಚಂದ್ರಾ ಬಡಾವಣೆಯ ಎರಡನೇ ಹಂತದ ಒಂದನೇ ಹಂತದಲ್ಲಿ 40x60 ಅಡಿ ವಿಸ್ತೀರ್ಣದ ನಿವೇಶನವನ್ನು (ಸಂಖ್ಯೆ 1,453) ಸೆಲ್ವರಾಣಿ ಅವರಿಗೆ ಹಂಚಿಕೆ ಮಾಡಿರುವುದಾಗಿ ಹಾಗೂ ಅವರಿಗೆ 2018ರ ಫೆ 27ರಂದು ಶುದ್ಧ ಕ್ರಯಪತ್ರ ನೀಡಿರುವುದಾಗಿ ನಮೂದಿಸಿರುತ್ತಾರೆ. ಆದರೆ, ಈ ನಿವೇಶನದ ಎಲ್‌ಎಸ್‌ಡಿಎ ನೋಂದಣಿ ಮಾಡಿರುವ ವಿವರ ದಾಖಲಿಸಿಲ್ಲ. ಸೆಲ್ವರಾಣಿ ಅವರ ಹೆಸರಿಗೆ ನೋಂದಣಿಯಾಗಿದ್ದ ಎಲ್‌ಎಸ್‌ಡಿಎಯ ನೋಂದಣಿ ಸಂಖ್ಯೆ 1ನೇ ಪುಸ್ತಕದ ಎಸ್‌ಎಫ್‌ 1173 ನೇ ಸಂಪುಟದ 127-131 ನೇ ಪುಟಗಳಲ್ಲಿ 1983-84 ನೇ ಇಸವಿಯ ದಾಖಲಾತಿಗಳನ್ನು ದೃಢೀಕರಿಸುವಂತೆ ವಿಜಯನಗರ ಮತ್ತು ಪೀಣ್ಯ ಉಪನೋಂದಣಾಧಿಕಾರಿಗಳ ಕಚೇರಿ
ಗಳನ್ನು ಬಿಡಿಎ ಕೋರಿತ್ತು. ಪೀಣ್ಯ ಉಪನೋಂದಣಾಧಿಕಾರಿಯವರ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ ಎಸ್‌.ಎಫ್‌. 1173 ನೇ ಸಂಖ್ಯೆಯ ಸಂಪುಟವೇ ಇರಲಿಲ್ಲ. ಈ ನಿವೇಶನದ ಇನ್ನೊಂದು ದಾಸ್ತವೇಜಿನ (ಸಂಖ್ಯೆ 5135/83-84) ನೋಂದಣಿಯ ದೃಢೀಕೃತ ಪ್ರತಿಯ ಪ್ರಕಾರ ಅದು ಗುರುನಾವಾಡಿ ಅವರಿಗೆ ಹಂಚಿಕೆಯಾಗಿರುವುದು ಕಂಡುಬಂದಿದೆ.

‘ಸೆಲ್ವರಾಣಿ ಅವರಿಗೆ ನಿವೇಶನ ಹಂಚಿಕೆಯ ದಾಖಲಾತಿಗಳು ನಕಲಿ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ. ನಕಲಿ ದಾಖಲೆ ಆಧಾರದಲ್ಲಿ ಅವರ ಹೆಸರಿಗೆ ಶುದ್ಧಕ್ರಯಪತ್ರ ನೀಡಿರುವಲ್ಲಿ ಉಪಕಾರ್ಯದರ್ಶಿ-3 ಆಗಿದ್ದ ಅನಿಲ್‌ ಕುಮಾರ್, ಅವರ ಕಚೇರಿಯಲ್ಲಿ ವಿಷಯ ನಿರ್ವಾಹಕರಾಗಿದ್ದ ಎಂ.ಕೆ.ಸಂಜಯ್‌ ಕುಮಾರ್ ಹಾಗೂ ಮೇಲ್ವಿಚಾರಕಿ ಮಹಾದೇವಮ್ಮ ಅವರು ಕರ್ತವ್ಯಲೋಪ ಎಸಗಿರುವುದು ಪ್ರಾಧಿಕಾರದ ವಿಶೇಷ ಕಾರ್ಯಪಡೆ ಮತ್ತು ಜಾಗೃತ ದಳ ನಡೆಸಿದ ಆಂತರಿಕ ತನಿಖೆಯಿಂದ ಕಂಡುಬಂದಿದೆ. ಈ ಅಧಿಕಾರಿ ಹಾಗೂ ನೌಕರರನ್ನು 1988ರ ಭ್ರಷ್ಟಾಚಾರ ತಡೆ ಕಾಯ್ದೆ ಕಲಂ 17 (ಎ) ಅನ್ವಯ ವಿಸ್ತೃತ ವಿಚಾರಣೆಗೆ ಒಳಪಡಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅನುಮತಿ ನೀಡಬಹುದು’ ಎಂದು ಬಿಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ 2022ರ ಜ 17ರಂದು ಬರೆದಿರುವ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT