ಬುಧವಾರ, ಅಕ್ಟೋಬರ್ 21, 2020
26 °C
ಬಿಡಿಎ ಮೂಲೆ ನಿವೇಶನಗಳ ಮೂರನೇ ಹಂತದ ಇ–ಹರಾಜು ಮುಕ್ತಾಯ

ಕ್ಷೀಣಿಸಿದ ಬೇಡಿಕೆ – ಬಂದಿಲ್ಲ ನಿರೀಕ್ಷಿತ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೋವಿಡ್‌ ಕಾಣಿಸಿಕೊಂಡ ಬಳಿಕ ಮೂರನೇ ಹಂತದಲ್ಲಿ ಕೈಗೊಂಡ ನಿವೇಶನಗಳ ಇ–ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಹಿಂದಿನ ಹರಾಜು ಪ್ರಕ್ರಿಯೆಗೆ ಹೋಲಿಸಿದರೆ ಈ ಬಾರಿ ಹರಾಜು ಪ್ರಕ್ರಿಯೆಗೆ ನಿರೀಕ್ಷಿತ ಪ್ರತಿಕ್ರಿಯೆ ಬಂದಿಲ್ಲ.

ಒಟ್ಟು 402 ನಿವೇಶನಗಳನ್ನು ಬಿಡಿಎ ಇ-ಹರಾಜಿಗೆ ಇಟ್ಟಿತ್ತು. ಮಾರ್ಗಸೂಚಿ ದರ ಕಡಿಮೆ ಇದ್ದ ಕಾರಣ 40 ನಿವೇಶನಗಳನ್ನು ಇ– ಹರಾಜಿನಿಂದ ಹಿಂಪಡೆದಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 286 ನಿವೇಶನಗಳು ಮಾತ್ರ ಮಾರಾಟವಾಗಿವೆ. 55 ನಿವೇಶನಗಳಿಗೆ ಪ್ರತಿಕ್ರಿಯೆಯೇ ಬಂದಿಲ್ಲ.

ಮಾರಾಟವಾದ ನಿವೇಶನಗಳ ಒಟ್ಟು ಮೂಲದರ ₹ 180.46 ಕೋಟಿ. ನಿವೇಶನ ಮಾರಾಟದಿಂದ ಬಿಡಿಎ ಒಟ್ಟು ₹ 266.33 ಕೋಟಿ ವರಮಾನ ಗಳಿಸಲಿದೆ. ಅಂದರೆ, ಹರಾಜಿಗಿಟ್ಟಿದ್ದ ಮೂಲದರಕ್ಕೆ ಹೋಲಿಸಿದರೆ ನಿವೇಶನಗಳ ಮಾರಾಟದಿಂದ ಸರಸರಿ ಶೇ 47.58ರಷ್ಟು ಹೆಚ್ಚು ವರಮಾನ ಬರಲಿದೆ.

‘ಈ ಹಿಂದೆ ಇ ಹರಾಜು ನಡೆಸಿದಾಗ ಮೂಲದರಕ್ಕಿಂತ ಸರಾಸರಿ ಶೇ 65ರಷ್ಟು ಹೆಚ್ಚು ವರಮಾನ ಬಂದಿತ್ತು. ಈ ಬಾರಿ ವರಮಾನದಲ್ಲಿ ಸ್ವಲ್ಪ ಇಳಿಕೆ ಆಗಿರುವುದು ನಿಜ’ ಎಂದು ಬಿಡಿಎ ಆರ್ಥಿಕ ಸದಸ್ಯ ರಾಮಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬನಶಂಕರಿ ಆರನೇ ಹಂತ, ಜೆ.ಪಿ.ನಗರದ ಕೆಲವು ಬ್ಲಾಕ್‌ಗಳಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ. ಕೆಲವು ಪ್ರದೇಶಗಳಲ್ಲಿ ಮಾರ್ಗಸೂಚಿ ದರವೂ ಕಡಿಮೆ ಇತ್ತು. ಇದರಿಂದಾಗಿಯೂ ಬೇಡಿಕೆ ಕಡಿಮೆಯಾಗಿರಬಹುದು’ ಎಂದು ಅವರು ವಿಶ್ಲೇಷಿಸಿದರು.

ಅರ್ಕಾವತಿ ಬಡಾವಣೆಯ ನಿವೇಶನವೊಂದಕ್ಕೆ (ನಿವೇಶನ ಸಂಖ್ಯೆ 1355) ಪ್ರತಿ ಚದರ ಮೀಟರ್‌ಗೆ ₹ 44,400 ದರ ನಿಗದಿಪಡಿಸಲಾಗಿತ್ತು. ಈ ನಿವೇಶನವು ಪ್ರತಿ ಚದರ ಮೀಟರ್‌ಗೆ ₹ 1,54,900ಕ್ಕೆ ಹರಾಜಾಗಿದೆ.   ಎಚ್ಎಸ್ಆರ್ ಬಡಾವಣೆಯ 3ನೇ ಸೆಕ್ಟರ್‌ನ ನಿವೇಶನಕ್ಕೆ (ಸಂಖ್ಯೆ 213/ಎ) ಪ್ರತಿ ಚದರ ಮೀಟರ್‌ಗೆ ₹ 1.50 ಲಕ್ಷ ದರ ನಿಗದಿಪಡಿಸಲಾಗಿತ್ತು. ಈ ನಿವೇಶನವು ಪ್ರತಿ ಚದರ ಮೀಟರ್‌ಗೆ ₹ 2,71,000ಕ್ಕೆ ಮಾರಾಟವಾಗಿದೆ. 

ನಾಲ್ಕನೇ ಹಂತದ ಇ-ಹರಾಜು 12ರಿಂದ

ನಿವೇಶನಗಳ ನಾಲ್ಕನೇ ಹಂತದ ಹರಾಜು ಪ್ರಕ್ರಿಯೆಗೆ ಬಿಡಿಎ ಅಧಿಸೂಚನೆ ಹೊರಡಿಸಿದೆ. ಬನಶಂಕರಿ, ಸರ್. ಎಂ. ವಿಶ್ವೇಶ್ವರಯ್ಯ, ಜೆ.ಪಿ.ನಗರ, ಅರ್ಕಾವತಿ ಹಾಗೂ ಬಿಟಿಎಂ ಬಡಾವಣೆಗಳಲ್ಲಿ ವಿವಿಧ ಅಳತೆಯ ಒಟ್ಟು 448 ನಿವೇಶನಗಳು ಹರಾಜಿಗೆ ಲಭ್ಯ ಇವೆ.

ಇದೇ 12ರಂದು ಇ–ಹರಾಜು ಪ್ರಾರಂಭವಾಗಲಿದ್ದು, ನ.9ರವರೆಗೆ ಆರು ಹಂತಗಳಲ್ಲಿ ಬಿಡ್ಡಿಂಗ್ ನಡೆಯಲಿದೆ. ಹರಾಜಿಗಿರುವ ನಿವೇಶನಗಳಿಗೆ ಜಿಯೋ ಟ್ಯಾಗ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬಿಡಿಎ ವೆಬ್‌ಸೈಟ್‌ನಲ್ಲಿ (http://bdabengaluru.org/) ಈ ನಿವೇಶನಗಳನ್ನು ನೋಡಬಹುದು ಎಂದು ಬಿಡಿಎ ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು