ಸೋಮವಾರ, ಏಪ್ರಿಲ್ 12, 2021
31 °C
ಬಿಡಿಎ: ನಿರೀಕ್ಷೆಗಿಂತ ₹ 113 ಕೋಟಿ ಹೆಚ್ಚುವರಿ ವರಮಾನ ಗಳಿಕೆ

ಏಳನೇ ಹಂತದ ಇ ಹರಾಜು: 270 ನಿವೇಶನ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಬಡಾವಣೆಗಳ ನಿವೇಶನಗಳ ಮಾರಾಟದ ಸಲುವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹಮ್ಮಿಕೊಂಡಿದ್ದ ಏಳನೇ ಹಂತದ ಇ-ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಒಟ್ಟು 270 ನಿವೇಶನಗಳು ಮಾರಾಟವಾಗಿವೆ.

ಈ ಬಾರಿ ಒಟ್ಟು 421 ನಿವೇಶನಗಳನ್ನು ಬಿಡಿಎ ಹರಾಜಿಗಿಟ್ಟಿತ್ತು. ಅವುಗಳಲ್ಲಿ 122 ನಿವೇಶನಗಳ ಖರೀದಿಗೆ ಯಾರೂ ಮುಂದೆ ಬಂದಿಲ್ಲ. ಒಂದು ನಿವೇಶನವನ್ನು ಹರಾಜು ಪ್ರಕ್ರಿಯೆಯಿಂದ ಬಿಡಿಎ ಹಿಂಪಡೆದಿತ್ತು. ನಿರೀಕ್ಷಿಸಿದಷ್ಟು ಮೊತ್ತಕ್ಕೆ (ಮೂಲ ದರಕ್ಕಿಂತ ಶೇ 5ರಷ್ಟು ಹೆಚ್ಚು ಮೊತ್ತಕ್ಕೆ) ಹರಾಜಾಗಿಲ್ಲ ಎಂಬ ಕಾರಣಕ್ಕೆ ಬಿಡಿಎ ಒಟ್ಟು  28 ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿದೆ.

‘ನಿವೇಶನಗಳ ಇ–ಹರಾಜು ಪ್ರಕ್ರಿಯೆಯಿಂದ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ₹ 113.58 ಕೋಟಿ ಹೆಚ್ಚುವರಿ ವರಮಾನ ಪ್ರಾಧಿಕಾರಕ್ಕೆ ಬಂದಿದೆ. ನಾವು ನಿಗದಿಪಡಿಸಿದ ಮೂಲದರಕ್ಕಿಂತ ಶೇ 67.94ರಷ್ಟು ಹೆಚ್ಚು ವರಮಾನ ಬಂದಿದೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ

ಏಳನೇ ಹಂತದ ಇ–ಹರಾಜಿನಲ್ಲಿ ಒಟ್ಟು 1,771 ಬಿಡ್ಡುದಾರರು ಭಾಗವಹಿಸಿದ್ದರು. ಇ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಕನಿಷ್ಠ ₹ 4 ಲಕ್ಷ ಮೊತ್ತದ ಪ್ರಾರಂಭಿಕ ಠೇವಣಿ (ಇಎಂಡಿ) ಪಾವತಿಸಬೇಕಾಗುತ್ತದೆ. ಹರಾಜಿನಲ್ಲಿ ಯಾವುದೇ ನಿವೇಶನ ಪಡೆಯಲು ಸಾಧ್ಯವಾಗದ ಬಿಡ್ಡುದಾರರಿಗೆ  ಪ್ರಾರಂಭಿಕ ಠೇವಣಿಯನ್ನು ಹಿಂದಿರುಗಿಸುತ್ತದೆ.

ಆರನೇ ಹಂತದ ಇ ಹರಾಜಿನಲ್ಲಿ ಬಿಡಿಎ 429 ನಿವೇಶನಗಳನ್ನು ಮಾರಾಟಕ್ಕಿಟ್ಟಿತ್ತು. ಅವುಗಳಲ್ಲಿ 271 ನಿವೇಶನಗಳು ಮಾರಾಟವಾಗಿದ್ದವು.  ನಿವೇಶನಗಳ ಮೂಲ ದರದ ಪ್ರಕಾರ ₹ 166.32 ಕೋಟಿ ಗಳಿಸಬೇಕಿದ್ದ ಬಿಡಿಎ ಒಟ್ಟು ₹ 255 ಕೋಟಿ ವರಮಾನ ಗಳಿಸಿತ್ತು. ಐದನೇ ಹಂತದಲ್ಲಿ ಹರಾಜಿಗಿಟ್ಟಿದ್ದ 451 ನಿವೇಶನಗಳಲ್ಲಿ 317 ಮಾರಾಟವಾಗಿದ್ದವು. ಬೇಡಿಕೆ ಇಲ್ಲದ ಕಡೆಯ 128 ನಿವೇಶನಗಳು ಮಾರಾಟವಾಗಿರಲಿಲ್ಲ. ನಿರೀಕ್ಷಿಸಿದಷ್ಟು ಬೇಡಿಕೆ ಬಾರದ ಕಾರಣಕ್ಕೆ 29 ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಪ್ರಾಧಿಕಾರ ರದ್ದುಡಿಸಿತ್ತು.

ಐದನೇ ಹಂತದಲ್ಲಿ ನಿವೇಶನ ಮಾರಾಟದಿಂದ ₹ 184.57 ಕೋಟಿ ವರಮಾನ ನಿರೀಕ್ಷಿಸಲಾಗಿತ್ತು. ಒಟ್ಟು ₹ 278.58 ಕೋಟಿ ವರಮಾನವನ್ನು ಬಿಡಿಎ ಗಳಿಸಿತ್ತು. 25 ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಹಿಂಪಡೆಯಲಾಗಿತ್ತು. 109 ನಿವೇಶನಗಳಿಗೆ ಯಾವುದೇ ಬೇಡಿಕೆ ಬಂದಿಲ್ಲ. 

ನಾಲ್ಕನೇ ಹಂತದ ಪ್ರಕ್ರಿಯೆಯಲ್ಲಿ 448 ನಿವೇಶನಗಳಲ್ಲಿ 332 ಬಿಕರಿಯಾಗಿದ್ದವು. 99 ನಿವೇಶನಗಳಿಗೆ ಬೇಡಿಕೆ ಬಂದಿರಲಿಲ್ಲ. ಈ ಹಂತದಲ್ಲಿ  ನಿವೇಶನಗಳ ಒಟ್ಟು ಮೂಲ ದರ ₹ 171.95 ಕೋಟಿಯಷ್ಟಿತ್ತು. ಹರಾಜಿನಿಂದ  ₹ 281.32 ಕೋಟಿ ವರಮಾನ ಬಂದಿತ್ತು.

ಮೂರನೇ ಹಂತದಲ್ಲಿ 402 ನಿವೇಶನಗಳಲ್ಲಿ 286 ನಿವೇಶನಗಳು ಮಾರಾಟವಾಗಿದ್ದವು. 40 ನಿವೇಶನಗಳನ್ನು ಇ– ಹರಾಜಿನಿಂದ ಹಿಂಪಡೆಯಲಾಗಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ 55 ನಿವೇಶನಗಳಿಗೆ ಬೇಡಿಕೆ ಬಂದಿರಲಿಲ್ಲ. ನಿವೇಶನಗಳ ಒಟ್ಟು ಮೂಲ ದರ ₹ 180.46 ಕೋಟಿಗಳಷ್ಟಿತ್ತು. ಇ– ಹರಾಜಿನಿಂದ ₹ 266.33 ಕೋಟಿ ವರಮಾನವನ್ನು ಪ್ರಾಧಿಕಾರ ಗಳಿಸಿತ್ತು. 

ಸದ್ಯದಲ್ಲಿಯೇ ಎಂಟನೇ ಹಂತದ ಇ–ಹರಾಜು ಪ್ರಕ್ರಿಯೆಗೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್‌.ಪಿ.ಗಿರೀಶ್‌ ತಿಳಿಸಿದ್ದಾರೆ.

ದಾಖಲೆ ಮೊತ್ತಕ್ಕೆ ನಿವೇಶನ ಮಾರಾಟ
ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯ ಎಂಟನೇ ಬ್ಲಾಕ್‌ನ 108 ಚ.ಮೀಟರ್‌ ವಿಸ್ತೀರ್ಣದ ನಿವೇಶನವೊಂದು ದಾಖಲೆ (ಶೇ 595.24 ರಷ್ಟು ಹೆಚ್ಚು) ಮೊತ್ತಕ್ಕೆ ಮಾರಾಟವಾಯಿತು. ನಿವೇಶನ ಸಂಖ್ಯೆ 666ಕ್ಕೆ ಬಿಡಿಎ ₹ 45.36 ಲಕ್ಷ ಮೂಲ ದರವನ್ನು ನಿಗದಿ ಪಡಿಸಿತ್ತು. ಈ ನಿವೇಶನವು ₹ 2.70 ಕೋಟಿಗೆ ಮಾರಾಟವಾಯಿತು. ಇ– ಹರಾಜಿನಲ್ಲಿ ಮೂಲದರಕ್ಕಿಂತ ಇಷ್ಟೊಂದು ಹೆಚ್ಚು ಪಟ್ಟು ಮೊತ್ತಕ್ಕೆ ನಿವೇಶನ ಹರಾಜಾಗಿದ್ದು ಇದೇ ಮೊದಲು ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.

ಎಂದಿನಂತೆ ಈ ಬಾರಿಯೂ ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯ ನಿವೇಶನಗಳಿಗೆ ಬೇಡಿಕೆ ಹೆಚ್ಚು ಇತ್ತು. ಈ ಬಡಾವಣೆಯಲ್ಲಿ ಒಟ್ಟು 13 ನಿವೇಶನಗಳು ಮೂಲ ದರಕ್ಕೆ ಹೋಲಿಸಿದರೆ ಶೇ 100ಕ್ಕೂ ಅಧಿಕ ಮೊತ್ತಕ್ಕೆ ಹರಾಜಾಗಿವೆ. ಈ ಬಡಾವಣೆಯ ಎಂಟನೇ ಬ್ಲಾಕ್‌ನ 1355 ಸಂಖ್ಯೆಯ 642 ಚ.ಮೀ ವಿಸ್ತೀರ್ಣದ ನಿವೇಶನ ₹ 5.33 ಕೋಟಿಗೆ ಹರಾಜಾಗಿದೆ. ಏಳನೇ ಹಂತದ ಹರಾಜು ಪ್ರಕ್ರಿಯೆಯಲ್ಲಿ ನಿವೇಶನವೊಂದಕ್ಕೆ ಬಿಡಿಎ ಗಳಿಸಿದ ಗರಿಷ್ಠ ಮೊತ್ತವಿದು.1344 ಸಂಖ್ಯೆಯ (360 ಚ.ಮೀ ವಿಸ್ತೀರ್ಣ) ನಿವೇಶನ ₹ 3.02 ಕೋಟಿಗೆ, 1356 ಸಂಖ್ಯೆಯ (525 ಚ.ಮೀ) ನಿವೇಶನ ₹ 3.41 ಕೋಟಿಗೆ ಹರಾಜಾಗಿದೆ.

ಅಂಕಿ ಅಂಶಗಳು

270: ಇ-ಹರಾಜಿನಲ್ಲಿ ಮಾರಾಟವಾದ ಒಟ್ಟು ನಿವೇಶನಗಳು

₹ 169.08 ಕೋಟಿ: ಮೂಲ ದರದ ಪ್ರಕಾರ ಬಿಡಿಎಗೆ ಬರಬೇಕಾದ ಮೊತ್ತ

₹ 282.66 ಕೋಟಿ: ಇ–ಹರಾಜಿನಿಂದ ಬಿಡಿಎ ಗಳಿಕೆ 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು