ಬುಧವಾರ, ಏಪ್ರಿಲ್ 21, 2021
23 °C
ಬಿಡಿಎ ನಿವೇಶನಗಳ ಇ-ಹರಾಜು: 6ನೇ ಹಂತದ ಪ್ರಕ್ರಿಯೆ ಮುಕ್ತಾಯ– ₹ 255 ಕೋಟಿ ವರಮಾನ ಗಳಿಕೆ

ಮೂಲದರದ 4 ಪಟ್ಟು ಹೆಚ್ಚು ಮೊತ್ತಕ್ಕೆ ಬಿಡಿಎ ನಿವೇಶನಗಳು ಬಿಕರಿ: ₹255 ಕೋಟಿ ವರಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿವಿಧ ಬಡಾವಣೆಗಳ ನಿವೇಶನಗಳನ್ನು ಮಾರಾಟ ಮಾಡಲು ಮೂರನೇ ಹಂತದಲ್ಲಿ ಹಮ್ಮಿಕೊಂಡಿದ್ದ ಇ–ಹರಾಜು ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಕೆಲವು ಬಡಾವಣೆಗಳ ಕೆಲವೊಂದು ನಿವೇಶನಗಳು ಬಿಡಿಎ ನಿಗದಿಪಡಿಸಿದ್ದ ಮೂಲ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮೊತ್ತಕ್ಕೆ ಬಿಕರಿಯಾಗಿವೆ.

ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯ ನಿವೇಶನಗಳಿಗೆ ಬೇಡಿಕೆ ಹೆಚ್ಚು ಇತ್ತು. 10ಕ್ಕೂ ಅಧಿಕ ನಿವೇಶನಗಳು ಮೂಲ ದರದ ದುಪ್ಪಟ್ಟಿಗಿಂತಲೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿವೆ. ಆದರೆ, ಬೇಡಿಕೆ ಇಲ್ಲದ ಕಡೆಯ 128 ನಿವೇಶನಗಳು ಮಾರಾಟವಾಗಿಲ್ಲ. 29 ನಿವೇಶನಗಳಿಗೆ ಶೆ 5ಕ್ಕಿಂತ ಕಡಿಮೆ ಪ್ರತಿಕ್ರಿಯೆ ಬಂದಿದ್ದರಿಂದ ಈ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಪ್ರಾಧಿಕಾರ ರದ್ದುಡಿಸಿದೆ. ಆರನೇ ಹಂತದ ಹರಾಜಿನಲ್ಲಿ ₹ 255 ಕೋಟಿ ವರಮಾನ ಗಳಿಸಲಿದೆ.

ಸರ್‌.ಎಂ.ವಿಶ್ವೇಶ್ವರಯ್ಯ ಬಡಾವಣೆಯ 3ನೇ ಬ್ಲಾಕ್‌ನ ನಿವೇಶನಕ್ಕೆ ಬಿಡಿಎ ಪ್ರತಿ ಚ.ಮೀಟರ್‌ಗೆ ₹ 39 ಸಾವಿರ ದರ ನಿಗದಿಪಡಿಸಿತ್ತು. ಈ ನಿವೇಶನವು ಪ್ರತಿ ಚದರ ಮೀಟರ್‌ಗೆ ₹ 1.67 ಲಕ್ಷ ದರಕ್ಕೆ ಮಾರಾಟವಾಗಿದೆ. ಇದೇ ಬಡಾವಣೆಯ 5ನೇ ಬ್ಲಾಕ್‌ನ ಎರಡು ನಿವೇಶನಗಳು ಮೂಲದರಕ್ಕಿಂತ ಮೂರು ಪಟ್ಟು ಹೆಚ್ಚು ಮೊತ್ತಕ್ಕೆ ಬಿಕರಿಯಾಗಿವೆ. ಬಿಡಿಎ ಈ ನಿವೇಶನಗಳಿಗೆ ಪ್ರತಿ ಚದರ ಮೀಟರ್‌ಗೆ ₹ 42 ಸಾವಿರ ಮೂಲದರ ನಿಗದಿಪಡಿಸಿತ್ತು. ಆದರೆ ಪ್ರತಿ ಚದರ ಮೀಟರ್‌ಗೆ ₹1.20 ಲಕ್ಷ ಮೊತ್ತಕ್ಕೆ ನಿವೇಶನಗಳು ಮಾರಾಟವಾಗಿವೆ. ಇದೇ ಬಡಾವಣೆಯ 5ನೇ ಬ್ಲಾಕ್‌ನ ನಿವೇಶನವೊಂದಕ್ಕೆ ಬಿಡಿಎ ₹ 1.51 ಕೋಟಿ ಮೂಲದರವನ್ನು ನಿಗದಿಪಡಿಸಿತ್ತು. ಈ ನಿವೇಶನ ₹ 3.82 ಕೋಟಿ ಮೊತ್ತಕ್ಕೆ ಹರಾಜಾಗಿದೆ. ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ನಿವೇಶನ ಇದಾಗಿದೆ.

‘ಒಂದರಿಂದ ಐದನೇ ಹಂತದವರೆಗಿನ ಇ-ಹರಾಜುಗಳಲ್ಲಿ ಮಾರಾಟವಾಗದ 365 ನಿವೇಶನಗಳನ್ನೂ ಈ ಬಾರಿ ಮರು ಹರಾಜು ಹಾಕಲಾಗಿತ್ತು. ಆದರೂ 429 ನಿವೇಶನಗಳಲ್ಲಿ 271 ನಿವೇಶನಗಳು ಮಾರಾಟವಾಗಿರುವುದು ಗಮನಾರ್ಹ. ಹರಾಜು ಪ್ರಕ್ರಿಯೆಯಲ್ಲಿ 1,614 ಮಂದಿ ಭಾಗವಹಿಸಿದ್ದು, ಈ ಬಾರಿ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಬಿಡಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಐದನೇ ಹಂತದಲ್ಲಿ ಹರಾಜಿಗಿಟ್ಟಿದ್ದ 451 ನಿವೇಶನಗಳಲ್ಲಿ 317ಮಾರಾಟವಾಗಿದ್ದವು. ಐದನೇ ಹಂತದಲ್ಲಿ ನಿವೇಶನ ಮಾರಾಟದಿಂದ ₹ 184.57 ಕೋಟಿ ವರಮಾನ ನಿರೀಕ್ಷಿಸಲಾಗಿತ್ತು. ಒಟ್ಟು ₹ 278.58 ಕೋಟಿ ವರಮಾನವನ್ನು ಬಿಡಿಎ ಗಳಿಸಿತ್ತು. 25 ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಹಿಂಪಡೆಯಲಾಗಿತ್ತು. 109 ನಿವೇಶನಗಳಿಗೆ ಯಾವುದೇ ಬೇಡಿಕೆ ಬಂದಿಲ್ಲ. 

ನಾಲ್ಕನೇ ಹಂತದ ಪ್ರಕ್ರಿಯೆಯಲ್ಲಿ 448 ನಿವೇಶನಗಳಲ್ಲಿ 332 ಬಿಕರಿಯಾಗಿದ್ದವು. 99 ನಿವೇಶನಗಳಿಗೆ ಬೇಡಿಕೆ ಬಂದಿರಲಿಲ್ಲ. ಈ ಹಂತದಲ್ಲಿ  ನಿವೇಶನಗಳ ಒಟ್ಟು ಮೂಲ ದರ ₹ 171.95 ಕೋಟಿಯಷ್ಟಿತ್ತು. ಹರಾಜಿನಿಂದ  ₹ 281.32 ಕೋಟಿ ವರಮಾನ ಬಂದಿತ್ತು.

ಮೂರನೇ ಹಂತದಲ್ಲಿ 402 ನಿವೇಶನಗಳಲ್ಲಿ 286 ನಿವೇಶನಗಳು ಮಾರಾಟವಾಗಿದ್ದವು. 40 ನಿವೇಶನಗಳನ್ನು ಇ– ಹರಾಜಿನಿಂದ ಹಿಂಪಡೆಯಲಾಗಿತ್ತು. ಹರಾಜಿಗಿದ್ದ 362 ನಿವೇಶನಗಳಲ್ಲಿ  55 ನಿವೇಶನಗಳಿಗೆ ಬೇಡಿಕೆ ಬಂದಿರಲಿಲ್ಲ. ನಿವೇಶನಗಳ ಒಟ್ಟು ಮೂಲ ದರ ₹ 180.46 ಕೋಟಿಗಳಷ್ಟಿತ್ತು. ಇ ಹರಾಜಿನಿಂದ ₹ 266.33 ಕೋಟಿ ವರಮಾನವನ್ನು ಪ್ರಾಧಿಕಾರ ಗಳಿಸಿತ್ತು. 

ಏಳನೇ ಹಂತದ ಇ-ಹರಾಜು ಪ್ರಕ್ರಿಯೆಗೆ ಸಿದ್ಧತೆ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಪ್ರಾಧಿಕಾರವು ಹೇಳಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು