ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದೊಳಗೆ ಬಿಡಿಎ ಖಾತೆಯಲ್ಲಿ ₹ 3 ಸಾವಿರ ಕೋಟಿ: ಎಸ್‌.ಆರ್‌.ವಿಶ್ವನಾಥ್‌

ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಸ್‌.ಆರ್‌.ವಿಶ್ವನಾಥ್‌ ಆಶ್ವಾಸನೆ
Last Updated 26 ನವೆಂಬರ್ 2020, 13:34 IST
ಅಕ್ಷರ ಗಾತ್ರ

ಬೆಂಗಳೂರು:‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಖಾತೆಯಲ್ಲಿ ಒಂದು ವರ್ಷದ ಒಳಗೆ ಕನಿಷ್ಠ ₹ 3 ಸಾವಿರ ಕೋಟಿ ಹಣ ಇರುವಂತಾಗಬೇಕು. ಆ ರೀತಿ ಕೆಲಸ ಮಾಡುವ ಮೂಲಕಬಿಡಿಎ ಸಾಮರ್ಥ್ಯ ಏನು ಎಂದು ತೋರಿಸಿಕೊಡುತ್ತೇನೆ’ ಎಂದು ಪ್ರಾಧಿಕಾರದ ನೂತನ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಹೇಳಿದರು.

ಬಿಡಿಎ ಅಧ್ಯಕ್ಷರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ನನ್ನ ಕಾರ್ಯವೈಖರಿ ಇತರರಿಗಿಂತ ವಿಭಿನ್ನವಾಗಿರಲಿದೆ. ಮುಕ್ತ ಸ್ವಾತಂತ್ರ್ಯ ನೀಡುವಂತೆ ಮುಖ್ಯಮಂತ್ರಿ ಬಳಿ ಕೇಳಿದ್ದೇನೆ. ನಾಳೆ ಆಗುವ ಕೆಲಸ ಇಂದೇ ಆಗಬೇಕು ಎನ್ನುವುದರಲ್ಲಿ ನಂಬಿಕೆ ಇಟ್ಟವನು ನಾನು. ಜನರ ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತೇನೆ’ ಎಂದರು.

‘ಒಂದು ಕಾಲದಲ್ಲಿ ದಕ್ಷತೆಗೆ ಹೆಸರುವಾಸಿಯಾಗಿದ್ದ ಬಿಡಿಎಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಗತಿಗಿಂತ ಭ್ರಷ್ಟಾಚಾರವೇ ಹೆಚ್ಚು ಸದ್ದುಮಾಡುತ್ತಿದೆ. ಯಾವುದೇ ಅಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ.ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಜನಸಾಮಾನ್ಯರನ್ನು ಅಲೆದಾಡಿಸಿ ತೊಂದರೆ ಕೊಡುವ ಅಧಿಕಾರಿಗಳು ಕ್ಷಣಕಾಲವೂ ಪ್ರಾಧಿಕಾರದಲ್ಲಿ ಮುಂದುವರಿಯಲು ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾನು ಓಡಾಡಿಕೊಂಡು ಕೆಲಸ ಮಾಡಿಸುವ ಪರಿಪಾಠ ಬೆಳೆಸಿಕೊಂಡಿರುವವನು. ಬಿಡಿಎ ಬಡಾವಣೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ. ಬಿಡಿಎ ಜಾಗವನ್ನು ಯಾರೇ ಕಬಳಿಸಿದ್ದರೂ ಅವರ ವಿರುದ್ಧ ಕ್ರಮ ನಿಶ್ಚಿತ. ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸುವ ಬದಲು ನಾನೇ ಪೊಲೀಸರೊಂದಿಗೆ ತೆರಳಿ, ಒತ್ತುವರಿ ಜಾಗದಲ್ಲಿ ಕಟ್ಟಿಕೊಂಡ ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ಕೆಂಪೇಗೌಡ ಬಡಾವಣೆಯಲ್ಲಿ ಇನ್ನಷ್ಟು ನಿವೇಶನಗಳ ಹಂಚಿಕೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಬಿಡಿಎ ಬಡಾವಣೆಗಳ ಮೂಲಸೌಕರ್ಯ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತೇವೆ. ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಯ ಶೀಘ್ರ ಅನುಷ್ಠಾನ ನಮ್ಮ ಮುಂದಿರುವ ಸವಾಲು. ಅದನ್ನು ಆದಷ್ಟು ಬೇಗ ಕಾರ್ಯಗತಗೊಳಿಸಲಿದ್ದೇವೆ’ ಎಂದರು.

ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್ ಕಣ್ಣಿಟ್ಟಿದ್ದ ಕುರಿತು ಪ್ರಶ್ನೆಗೆ ವಿಶ್ವನಾಥ್‌, ‘ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅವರು ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಯಾಕೆ ಕಣ್ಣಿಡುತ್ತಾರೆ’ ಎಂದದು ಪ್ರತಿಕ್ರಿಯಿಸಿದರು.

‘ನಾನು ಯಾವುದೇ ಸ್ಥಾನಮಾನದ ಮೇಲೆ ಆಸೆ ಹೊಂದಿರಲಿಲ್ಲ. ಸಚಿವ ಸ್ಥಾನ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನೂ ನಾನು ಕೇಳಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನನ್ನ ಮೇಲೆ ಭರವಸೆ ಇಟ್ಟು ಈ ಜವಾಬ್ದಾರಿ ಕೊಟ್ಟಿದ್ದಾರೆ. ಈ ಹುದ್ದೆ ನಿಭಾಯಿಸಲು ಮುಕ್ತ ಸ್ವಾತಂತ್ರ್ಯ ನೀಡಿ ಎಂದಷ್ಟೇ ಅವರಲ್ಲಿ ಕೇಳಿದ್ದೇನೆ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಶೀಘ್ರವೇ ರಾಜೀನಾಮೆ ನೀಡುತ್ತೇನೆ’ ಎಂದು ಯಲಹಂಕ ಕ್ಷೇತ್ರದ ಶಾಸಕರೂ ಆಗಿರುವ ವಿಶ್ವನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT