ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಅನಧಿಕೃತ ಕಟ್ಟಡಗಳ ತೆರವು

ಕೂಡ್ಲು ಮತ್ತು ಸಿಂಗಸಂದ್ರದಲ್ಲಿ ಉದ್ಯಾನಕ್ಕೆ ಕಾಯ್ದಿರಿಸಿದ್ದ ಪ್ರದೇಶದಲ್ಲಿ ಕಾರ್ಯಾಚರಣೆ
Last Updated 5 ಫೆಬ್ರುವರಿ 2022, 19:07 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೂಡ್ಲು ಮತ್ತು ಸಿಂಗಸಂದ್ರದಲ್ಲಿ ಉದ್ಯಾನ ನಿರ್ಮಿಸಲು ಕಾಯ್ದಿರಿಸಿದ್ದ ಜಾಗದಲ್ಲಿ ನಿರ್ಮಾಣಗೊಂಡಿದ್ದ 15 ಕ್ಕೂ ಹೆಚ್ಚು ತಾತ್ಕಾಲಿಕ ಕಟ್ಟಡಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳುಶನಿವಾರ ತೆರವುಗೊಳಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕು ಮತ್ತು ಆನೇಕಲ್ ತಾಲ್ಲೂಕುಗಳ ವ್ಯಾಪ್ತಿಯ ಕೂಡ್ಲು ಮತ್ತು ಸಿಂಗಸಂದ್ರದಲ್ಲಿ ಏರ್ ಕ್ರಾಫ್ಟ್ ಎಂಪ್ಲಾಯೀಸ್ ಹೌಸಿಂಗ್ ಸೊಸೈಟಿಯವರು ಬಿಡಿಎ ಭೂಸ್ವಾಧೀನ ಮಾಡಿಕೊಟ್ಟಿದ್ದ ಜಾಗದಲ್ಲಿ ಬಡಾವಣೆ ನಿರ್ಮಾಣ ಮಾಡಿದ್ದರು. ನಿಯಮಗಳ ಪ್ರಕಾರ ಈ ಬಡಾವಣೆಗಳಲ್ಲಿ ಒಟ್ಟು 39 ಉದ್ಯಾನಗಳ ನಿರ್ಮಾಣಕ್ಕೆ ಜಾಗವನ್ನು ಮೀಸಲಿಡಲಾಗಿತ್ತು. 2015ರಲ್ಲಿ 16 ಉದ್ಯಾನಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗಿತ್ತು.

ಉದ್ಯಾನಕ್ಕೆ ಮೀಸಲಿಟ್ಟಿದ್ದ 18 ಸ್ಥಳಗಳಲ್ಲಿ ಅನಧಿಕೃತವಾಗಿ ಶೆಡ್ ಗಳು ಮತ್ತು ಆರ್‌ಸಿಸಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿತ್ತು. ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 15 ತಾತ್ಕಾಲಿಕ ಶೆಡ್ ಗಳು, 4 ಅಂಗಡಿಗಳು, 20 ಕ್ಕೂ ಹೆಚ್ಚು ಮನೆಗಳು, ಪ್ರಾರ್ಥನಾ ಮಂದಿರದಿಂದ ಒತ್ತುವರಿಯಾಗಿ ನಿರ್ಮಾಣಗೊಂಡಿದ್ದ ಕಟ್ಟಡ ಸೇರಿದಂತೆ 30 ಕ್ಕೂ ಹೆಚ್ಚು ಕಟ್ಟಡಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದರು.

ವಿಶೇಷ ಕಾರ್ಯಪಡೆಯ ಡಿವೈಎಸ್‌ಪಿ ರವಿಕುಮಾರ್ ಮತ್ತು ಕಾರ್ಯಪಾಲಕ ಎಂಜಿನಿಯರ್‌ ಕೆ.ಮಹದೇವ ಗೌಡ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ಒತ್ತುವರಿಯನ್ನು ತೆರವುಗೊಳಿಸಿದ ಜಾಗ ಸೇರಿದಂತೆ 18 ಉದ್ಯಾನಗಳಿಗೆ ಸೇರಿದ ಒಟ್ಟು 25 ಎಕರೆ 6 ಗುಂಟೆ ಜಾಗವನ್ನು ಬಿಡಿಎ ಅಧಿಕಾರಿಗಳು
ಮತ್ತೆ ಸ್ವಾಧೀನಕ್ಕೆ ಪಡೆದು ಈ ಜಾಗವನ್ನು ಉದ್ಯಾನ ನಿರ್ಮಾಣಕ್ಕಾಗಿ ಬಿಬಿಎಂಪಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಹಸ್ತಾಂತರ ಪ್ರಕ್ರಿಯೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದು ಬಿಡಿಎ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ‘ಪ್ರಾಧಿಕಾರಕ್ಕೆ ಸೇರಿದ ಸಾವಿರಾರು ಎಕರೆಗಳಷ್ಟು ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುತ್ತಿದೆ. ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT