ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಉಣ್ಣಿಗೆರೆಯಲ್ಲಿ ತಲೆ ಎತ್ತಲಿವೆ 322 ವಿಲ್ಲಾ, 1ಬಿಎಚ್‌ಕೆಯ 320 ಫ್ಲ್ಯಾಟ್

ಉಣ್ಣಿಗೆರೆಯಲ್ಲಿ ತಲೆ ಎತ್ತಲಿವೆ 322 ವಿಲ್ಲಾ, 1 ಬಿಎಚ್‌ಕೆಯ 320 ಫ್ಲ್ಯಾಟ್‌
Last Updated 22 ಜುಲೈ 2019, 19:19 IST
ಅಕ್ಷರ ಗಾತ್ರ

ಬೆಂಗಳೂರು: ಆಲೂರಿನಲ್ಲಿ ನಿರ್ಮಿಸಿದ್ದ ವಿಲ್ಲಾಗಳು ಬೇಗನೇ ಬಿಕರಿಯಾಗಿದ್ದರಿಂದ ಅದೇ ಮಾದರಿಯ ವಸತಿಗಳನ್ನು ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮುಂದಾಗಿದೆ.

ಉಣ್ಣಿಗೆರೆಯಲ್ಲಿ 26 ಎಕರೆ 21 ಗುಂಟೆಗಳಷ್ಟು ವಿಶಾಲ ಜಾಗದಲ್ಲಿ ವಸತಿ ಪ್ರದೇಶವನ್ನು ಅಭಿವೃದ್ಧಿಪಡಿಸಿ ಒಟ್ಟು 642 ಮನೆಗಳನ್ನು ನಿರ್ಮಿಸಲು ಬಿಡಿಎ ಸಿದ್ಧತೆ ನಡೆಸಿದೆ. ಸೌರಶಕ್ತಿ ಬಳಕೆ, ಹಸಿರು ಕಟ್ಟಡ ತಂತ್ರಜ್ಞಾನ ಬಳಕೆ, ವಸತಿ ಪ್ರದೇಶದ ಹಸಿರೀಕರಣ ಯೋಜನೆಗಳನ್ನು ಇಲ್ಲಿ ಅನುಷ್ಠಾನಗೊಳಿಸುವ ಇರಾದೆಯನ್ನು ಪ್ರಾಧಿಕಾರವು ಹೊಂದಿದೆ.

4 ಬಿಎಚ್‌ಕೆ ಹಾಗೂ 3 ಬಿಎಚ್‌ಕೆಯ ಡುಪ್ಲೆಕ್ಸ್‌ ಮನೆಗಳು ವಿಲ್ಲಾ ಮಾದರಿಯಲ್ಲಿ ನಿರ್ಮಾಣವಾಗಲಿವೆ. 4 ಬಿಎಚ್‌ಕೆ ಮನೆಯ ನೆಲ ಮಹಡಿಯಲ್ಲಿ ಅಡುಗೆಮನೆ, ಹಾಲ್‌, ಒಂದು ಕೊಠಡಿ ಹಾಗೂ ಮೊದಲ ಮಹಡಿಯಲ್ಲಿ ಮೂರು ಕೊಠಡಿಗಳು ಇರಲಿವೆ. 3 ಬಿಎಚ್‌ಕೆ ಮನೆಗಳಲ್ಲಿ ನೆಲ ಮಹಡಿಯಲ್ಲಿ ಅಡುಗೆ ಮನೆ, ಒಂದು ಕೊಠಡಿ ಹಾಗೂ ಹಾಲ್‌, ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳು ಇರಲಿವೆ. 4 ಬಿಎಚ್‌ಕೆಯ 70 ವಿಲ್ಲಾಗಳಲ್ಲಿ ತಲಾ ಎರಡು ಕಾರು ನಿಲುಗಡೆಗೆ ಹಾಗೂ ಉಳಿದ ವಿಲ್ಲಾಗಳಲ್ಲಿ ತಲಾ ಒಂದು ಕಾರು ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ವಿಲ್ಲಾ ಖರೀದಿಸುವವರಿಗೆ ನೆಲದ ಮಾಲೀಕತ್ವದಲ್ಲಿ ಅವಿಭಜಿತ ಪಾಲು ಕೂಡಾ ಸಿಗಲಿದೆ. 1 ಬಿಎಚ್‌ಕೆಯ 320 ಮನೆಗಳಿರುವ ವಸತಿ ಸಮುಚ್ಚಯವನ್ನೂ ಇಲ್ಲಿ ನಿರ್ಮಿಸಲಿದೆ.

ಮನರಂಜನಾ ಕೇಂದ್ರ: ‘ವಸತಿ ಪ್ರದೇಶದಲ್ಲಿ ಮನರಂಜನಾ ಕೇಂದ್ರವನ್ನೂ ನಿರ್ಮಿಸಲಾಗುತ್ತದೆ. ಕ್ರಿಕೆಟ್‌ ನೆಟ್‌ ಅಭ್ಯಾಸಕ್ಕೆ ವ್ಯವಸ್ಥೆ, ಶಟ್ಲ್‌ ಬ್ಯಾಡ್ಮಿಂಟನ್‌ ಹಾಗೂ ಬ್ಯಾಸ್ಕೆಟ್‌ಬಾಲ್‌ ಅಂಕಣಗಳನ್ನು ನಿರ್ಮಿಸಲಾಗುತ್ತದೆ. ಇವುಗಳಿಗಾಗಿಯೇ 37 ಸಾವಿರ ಚದರ ಅಡಿ ಜಾಗ ಕಾಯ್ದಿರಿಸಲಾಗಿದೆ. ಇಲ್ಲಿ ಈಜುಕೊಳ ನಿರ್ಮಿಸುವ ಉದ್ದೇಶವೂ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಡಿಎ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀದಿದೀಪಗಳಿಗೆ, ಉದ್ಯಾನಗಳ ದೀಪಗಳಿಗೆ ಹಾಗೂ ನೀರು ಪಂಪ್‌ ಮಾಡಲು ಸೌರ ವಿದ್ಯುತ್‌ ಬಳಸುವ ಉದ್ದೇಶವಿದೆ. ಇಲ್ಲಿ ಬಳಸಿ ಉಳಿಯುವ ಸೌರ ವಿದ್ಯುತ್‌ ಅನ್ನು 100 ಕೆ.ವಿ. ಗ್ರಿಡ್‌ಗೆ ನೀಡಲಿದ್ದೇವೆ. ಮನರಂಜನಾ ಕೇಂದ್ರದ ಚಾವಣಿಯಲ್ಲಿ ಸೌರಕೋಶಗಳನ್ನು ಅಳವಡಿಸಲಿದ್ದೇವೆ. ಇಲ್ಲಿ ವಿಲ್ಲಾಗಳನ್ನು ಖರೀದಿಸುವವರೂ ಚಾವಣಿಯಲ್ಲಿ ಸೌರವಿದ್ಯುತ್‌ ಉತ್ಪಾದಿಸಬಹುದು’ ಎಂದರು.

ಉದ್ಯಾನ: ‘ವಸತಿ ಪ್ರದೇಶದ ನಿವಾಸಿಗಳ ಬಳಕೆಗಾಗಿ ಮೂರು ದೊಡ್ಡ ಉದ್ಯಾನಗಳು ಸೇರಿ ಒಟ್ಟು ಐದು ಕಡೆ ಉದ್ಯಾನಗಳನ್ನು ನಿರ್ಮಿಸಲಾಗುತ್ತದೆ. ಸಂಪರ್ಕ ರಸ್ತೆಗಳ ಇಕ್ಕೆಲಗಳಲ್ಲೂ ದೇಸಿ ಸಸ್ಯಗಳನ್ನು ಬೆಳೆಸಲಾಗುತ್ತದೆ’ ಎಂದರು.

‘ಉಣ್ಣಿಗೆರೆ ವಸತಿ ಯೋಜನೆಯ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವುದಕ್ಕೆ ಮುನ್ನವೇ 300ಕ್ಕೂ ಹೆಚ್ಚು ಮಂದಿ ಇಲ್ಲಿ ಮನೆ ಖರೀದಿಸಲು ಆಸಕ್ತಿ ತೋರಿಸಿದ್ದಾರೆ. 2020ರ ಒಳಗೆ ಗ್ರಾಹಕರಿಗೆ ಇದನ್ನು ಬಿಟ್ಟುಕೊಡುವ ಉದ್ದೇಶ ನಮ್ಮದು. ಈ ಯೋಜನೆಗೆ 190 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ಮನೆಯನ್ನು ಎಷ್ಟಕ್ಕೆ ಮಾರಾಟ ಮಾಡಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದರು.

ಹಸಿರು ಪರಿಕಲ್ಪನೆ

‘ಕಡಿಮೆ ವಿದ್ಯುತ್‌ ಬಳಸುವ ಹಾಗೂ ಹೆಚ್ಚು ನೈಸರ್ಗಿಕ ಬೆಳಕನ್ನು ಅವಲಂಬಿಸುವ ಹಸಿರು ಕಟ್ಟಡದ ಪರಿಕಲ್ಪನೆಯಡಿ ವಿಲ್ಲಾಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ನಿಸರ್ಗಸ್ನೇಹಿ ಕಟ್ಟಡಗಳಿಗೆ ಪೇಂಟಿಂಗ್‌ನ ಅಗತ್ಯವಿಲ್ಲ. ಈ ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಸಿಕ್ಕಿದೆ. ಮೂಲಸೌಕರ್ಯ ನಿರ್ಮಾಣವೂ ಆರಂಭವಾಗಿದೆ’ ಎಂದು ಬಿಡಿಎ ಎಂಜಿನಿಯರ್‌ ತಿಳಿಸಿದರು.

ಎಷ್ಟು ಮನೆ ನಿರ್ಮಾಣ?

4 ಬಿಎಚ್‌ಕೆ; 170 ವಿಲ್ಲಾ ( 2,200 ಚ.ಅಡಿ)

3 ಬಿಎಚ್‌ಕೆ; 152 ವಿಲ್ಲಾ (1,150 ಚ.ಅಡಿಯ 132 ಹಾಗೂ 1,650 ಚ.ಅಡಿಯ 30 ವಿಲ್ಲಾ)

1 ಬಿಎಚ್‌ಕೆ; 320 ಫ್ಲ್ಯಾಟ್‌ ( 430 ಚ. ಅಡಿ)


ಎಲ್ಲಿದೆ ವಸತಿ ಪ್ರದೇಶ?

ವಸತಿ ಪ್ರದೇಶ ನಿರ್ಮಾಣವಾಗಲಿರುವ ಉಣ್ಣಿಗೆರೆಯು ಮೆಜೆಸ್ಟಿಕ್‌ನಿಂದ 25 ಕಿ.ಮೀ. ದೂರದಲ್ಲಿದೆ. ತುಮಕೂರು ರಸ್ತೆಯಲ್ಲಿ ಅಗರವಾಲ್‌ ಭವನದ ಬಳಿ ಎಡಕ್ಕೆ ತಿರುಗಿ 6 ಕಿ.ಮೀ ಸಾಗಿದರೆ ವಸತಿ ಪ್ರದೇಶ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT