ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮಗಳಿಗೆ ಕಡಿವಾಣ : ‘ಇ – ಕಚೇರಿ’ಯಾಗಲು ಮೂರೇ ಹೆಜ್ಜೆ

ಕಾಗದ ರಹಿತ ಸೇವೆಗೆ ಸಜ್ಜಾಗುತ್ತಿದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
Last Updated 25 ಜೂನ್ 2019, 19:54 IST
ಅಕ್ಷರ ಗಾತ್ರ

ಬೆಂಗಳೂರು: ಕಡತಗಳನ್ನೇ ಕಣ್ಮರೆ ಮಾಡುವುದು, ಮೂಲ ಕಡತಗಳನ್ನೇ ತಿದ್ದಿ ನಿವೇಶನಗಳ ಮಾಲೀಕತ್ವವನ್ನು ಯಾರದೋ ಹೆಸರಿಗೆ ಮಾಡಿಕೊಡುವುದು... ಇಂತಹ ಅಕ್ರಮ ನಡೆಸುವುದರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಎತ್ತಿದ ಕೈ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರಾಧಿಕಾರದಲ್ಲಿ ಕಾಗದರಹಿತ ಸೇವೆ ಪರಿಚಯಿಸಲಾಗುತ್ತಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಇ–ಕಚೇರಿ’ಯನ್ನು ಜಾರಿಗೊಳಿಸಲು ಬಿಡಿಎ ಕೂಡಾ ಸಜ್ಜಾಗುತ್ತಿದೆ. ಬಹುತೇಕ ವಿಭಾಗಗಳ ಕಡತಗಳ ಡಿಜಿಟಲೀಕರಣ ಪ್ರಕ್ರಿಯೆ ಹಾಗೂ ಸಿಬ್ಬಂದಿ ತರಬೇತಿ ಪೂರ್ಣಗೊಂಡಿವೆ. ಎಂಜಿನಿಯರಿಂಗ್‌ ವಿಭಾಗ, ಭೂಸ್ವಾಧೀನ ವಿಭಾಗ ಹಾಗೂ ನಗರ ಯೋಜನೆ ವಿಭಾಗಗಳಲ್ಲಿ ದಾಖಲೆಗಳ ಡಿಜಿಟಲೀಕರಣ ಇನ್ನಷ್ಟೇ ಆಗಬೇಕಿದೆ. ಈ ಪ್ರಕ್ರಿಯೆಯೂ ಮುಗಿದರೆ ಬಿಡಿಎಯಲ್ಲಿ ‘ಇ– ಕಚೇರಿ’ಸೇವೆ ಪೂರ್ಣಪ್ರಮಾಣದಲ್ಲಿ ಆರಂಭವಾಗಲಿದೆ.

ಉಪಕಾರ್ಯದರ್ಶಿಗಳ ಕಚೇರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಕಂಪ್ಯೂಟರ್ ವಿಭಾಗಗಳಲ್ಲಿ ದಾಖಲೆಗಳ ಡಿಜಿಟಲೀಕರಣ ಮುಗಿದಿದೆ. ಹಣಕಾಸು ವಿಭಾಗದ ಮೂಲಕ ನಡೆಯುವ ಪಾವತಿಗಳನ್ನೂ ಇ– ಕಚೇರಿ ಮೂಲಕ ನಿರ್ವಹಿಸಲು ಕ್ರಮಕೈಗೊಳ್ಳಲಾಗಿದೆ.

‘ಎಲ್ಲ ಕಚೇರಿಗಳೂ ಕಾಗದರಹಿತ ಸೇವೆಗೆ ಸಜ್ಜಾಗಬೇಕು ಎಂದು 2019ರ ಜನವರಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಸೂಚನೆ ನೀಡಿದ್ದರು. ಇದಕ್ಕಾಗಿ ಪ್ರಾಧಿಕಾರದ ಕೇಂದ್ರ ಕಚೇರಿಯ ಎಲ್ಲ ವಿಭಾಗಗಳಿಗೆ ಹಾಗೂ ವಿಭಾಗೀಯ ಕಚೇರಿಗಳಿಗೆ ಸೇರಿ ಒಟ್ಟು 273 ಕಂಪ್ಯೂಟರ್‌ಗಳ ಅಗತ್ಯವಿತ್ತು. ಸದ್ಯಕ್ಕೆ 100 ಕಂಪ್ಯೂಟರ್‌ಗಳನ್ನು ಇ– ಗವರ್ನನ್ಸ್‌ ಇಲಾಖೆಯವರು ಒದಗಿಸಿದ್ದಾರೆ. ಅವುಗಳನ್ನು ಬಳಸಿಕೊಂಡು ಪ್ರಾಧಿಕಾರದ ಕೆಲವು ವಿಭಾಗಗಳಲ್ಲಿ ಕಾಗದರಹಿತ ಸೇವೆ ಆರಂಭಿಸಿದ್ದೇವೆ’ ಎಂದು ಬಿಡಿಎ ಕಾರ್ಯದರ್ಶಿ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇ– ಕಚೇರಿ ವ್ಯವಸ್ಥೆಯಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಯಾವುದೇ ಕಡತವೂ ಕಳವಾಗುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಎಲ್ಲ ಕಡತಗಳೂ ಡಿಜಿಟಲ್‌ ರೂಪದಲ್ಲಿ ಭದ್ರವಾಗಿರಲಿವೆ. ಸರ್ಕಾರದ ಇ–ಗವರ್ನನ್ಸ್‌ ಇಲಾಖೆಯೇ ಸರ್ವರ್‌ಗಳ ನಿರ್ವಹಣೆ ನೋಡಿಕೊಳ್ಳಲಿದೆ. ಕಡತ ಯಾವ ಅಧಿಕಾರಿ ಬಳಿ ಇದೆ ಎಂಬುದನ್ನು ತಿಳಿದುಕೊಳ್ಳುವುದೂ ಸುಲಭ. ಅಗತ್ಯಕ್ಕಿಂತ ಹೆಚ್ಚು ದಿನ ಕಡತವನ್ನು ಇಟ್ಟುಕೊಳ್ಳುವುದಕ್ಕೂ ಆಸ್ಪದ ಇರುವುದಿಲ್ಲ. ಪ್ರಾಧಿಕಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಗಳಿಗೆ ಇದರಿಂದ ಕಡಿವಾಣ ಬೀಳಲಿದೆ’ ಎಂದು ಅವರು ವಿವರಿಸಿದರು.

‘ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ಸ್ಕ್ಯಾನರ್‌ಗಳಿಲ್ಲದ ಕಾರಣ ಕಡತ ಡಿಜಿಟಲೀಕರಣ ಸಾಧ್ಯವಾಗಿರಲಿಲ್ಲ. ಈಗ ಸ್ಕ್ಯಾನರ್‌ಗಳನ್ನು ಖರೀದಿಸಲಾಗಿದೆ. ಅಲ್ಲಿನ ದಾಖಲೆಗಳನ್ನೂ ಹಂತ ಹಂತವಾಗಿ ಡಿಜಿಟಲ್‌ ರೂಪಕ್ಕೆ ಪರಿವರ್ತಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಇ–ಗವರ್ನನ್ಸ್‌ ಇಲಾಖೆಯಿಂದ 170 ಕಂಪ್ಯೂಟರ್‌ಗಳು ಪೂರೈಕೆ ಆಗಬೇಕು. ಕಂಪ್ಯೂಟರ್‌ಗಳು ಲಭ್ಯವಾದ ಕೂಡಲೇ ಇ–ಕಚೇರಿ ಸೇವೆಯನ್ನು ಎಂಜಿನಿಯರಿಂಗ್‌ ವಿಭಾಗಕ್ಕೂ ವಿಸ್ತರಿಸುತ್ತೇವೆ. ಭೂಸ್ವಾಧೀನ ವಿಭಾಗಗಳಲ್ಲಿ ಬಹಳಷ್ಟು ಹಳೆ ಕಡತಗಳನ್ನು ಡಿಜಿಟಲೀಕರಿಸಬೇಕಾಗುತ್ತದೆ. ಇದಕ್ಕೆ ಸಮಯ ತಗಲುತ್ತದೆ. ಶೀಘ್ರವೇ ಈ ವಿಭಾಗಗಳಲ್ಲೂ ಇ– ಕಚೇರಿ ಸೇವೆ ಆರಂಭಿಸಲಾಗುತ್ತದೆ’ ಎಂದರು.

‘ಮಾಹಿತಿ ಸೋರಿಕೆಗೆ ಇಲ್ಲ ಆಸ್ಪದ’

‘ತಳಮಟ್ಟದ ಅಧಿಕಾರಿಗಳು ಕಡತ ಸಿದ್ಧಪಡಿಸಿ ಹಿರಿಯ ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಈ ಹಿಂದೆ ಕಡತವನ್ನು ವಿಭಾಗದಿಂದ ವಿಭಾಗಕ್ಕೆ ರವಾನಿಸುವಾಗ ಮೇಲಧಿಕಾರಿಗಳು ಏನು ಟಿಪ್ಪಣಿ ಬರೆದಿದ್ದಾರೆ ಎಂಬುದು ಸುಲಭವಾಗಿ ಸೋರಿಕೆಯಾಗುತ್ತಿತ್ತು. ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ಕಡತಗಳಲ್ಲಿ ನಮೂದಿಸಿದ ಟಿಪ್ಪಣಿಗಳು ಗೋಪ್ಯವಾಗಿ ಉಳಿಯುತ್ತಿರಲಿಲ್ಲ. ಕೆಲವೊಮ್ಮೆ ಟಿಪ್ಪಣಿ ಬದಲಾಯಿಸಲು ರಾಜಕಾರಣಿಗಳಿಂದ ಒತ್ತಡ ತರಿಸುವ ಪ್ರಯತ್ನ ನಡೆಯುತ್ತಿದ್ದವು. ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.

ಡಿಜಿಟಲ್‌ ಪ್ರಕ್ರಿಯೆ ಆರಂಭ

‘ಪ್ರಾಧಿಕಾರದ ಅಧಿಕಾರಿಗಳಿಗೆ ಡಿಜಿಟಲ್‌ ಸಹಿ ಒದಗಿಸುವ ಪ್ರಕ್ರಿಯೆ ಇನ್ನಷ್ಟೇ ಆಗಬೇಕಿದೆ. ಸದ್ಯಕ್ಕೆ ಇ–ಕಚೇರಿ ವ್ಯವಸ್ಥೆ ಅಳವಡಿಸಿರುವ ವಿಭಾಗಗಳ ಅಧಿಕಾರಿಗಳಿಗೆ ಪ್ರತ್ಯೇಕ ಲಾಗಿನ್‌ ಐಡಿ ಮಾತ್ರ ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT