ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಬಲದ ಎದುರು ಸೋತ ‘ಸಿದ್ಧಾಂತ’

ಬಾಗೇಪಲ್ಲಿ: ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದ ಶಾಸಕ ಸುಬ್ಬಾರೆಡ್ಡಿ, ಸಾಯಿಕುಮಾರ್‌ಗೆ ಮುಖಭಂಗ
Last Updated 16 ಮೇ 2018, 10:57 IST
ಅಕ್ಷರ ಗಾತ್ರ

ಬಾಗೆಪಲ್ಲಿ: ಎಡಪಂಥಿಯ ಚಿಂತನೆಗಳಿಗೆ ನೆಲೆಯಾಗಿರುವ ಈ ಕ್ಷೇತ್ರದಲ್ಲಿ ಬಹು ಹಿಂದಿನಿಂದಲೂ ಸಿಪಿಎಂ ರಾಜಕೀಯದಲ್ಲಿ ತನ್ನದೇ ಆದ ಸೈದ್ಧಾಂತಿಕ ಸಂಘರ್ಷದ ಮೂಲಕ ಛಾಪು ಒತ್ತುತ್ತಲೇ ಬಂದಿದೆ. ಈ ಬಾರಿ ಕಾಂಗ್ರೆಸ್ ಎದುರು ಸಿಪಿಎಂ ಸಂಘರ್ಷ ಜೋರಾಗಿಯೇ ನಡೆಯಿತಾದರೂ ಕೊನೆಗೂ ಹಣಬಲದ ಎದುರು ‘ಸಿದ್ಧಾಂತ’ ಗೆಲುವು ದಕ್ಕಿಸಿಕೊಡಲಿಲ್ಲ.

ಪರಿಣಾಮ, ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಅವರು ಐದನೇ ಬಾರಿ ಈ ಕ್ಷೇತ್ರದಲ್ಲಿ ಸೋಲು ಅನುಭವಿಸಿದರು. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರು ಎರಡನೇ ಸುತ್ತಿನಲ್ಲಿ ಸಹ ಗೆಲುವಿನ ದಡ ಸೇರಿ ಕ್ಷೇತ್ರದಲ್ಲಿ ಸತತವಾಗಿ ಎರಡನೇ ಬಾರಿಗೆ ಗೆದ್ದ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸುಬ್ಬಾರೆಡ್ಡಿ ಅವರಿಗೆ ಪ್ರತಿಸ್ಪರ್ಧಿಗಳಾಗಿ ಶ್ರೀರಾಮರೆಡ್ಡಿ, ಜೆಡಿಎಸ್ ಅಭ್ಯರ್ಥಿ, ವಿಧಾನಪರಿಷತ್ ಸದಸ್ಯ ಸಿ.ಆರ್.ಮನೋಹರ್ ಮತ್ತು ಬಿಜೆಪಿ ಅಭ್ಯರ್ಥಿ, ನಟ ಪಿ.ಸಾಯಿಕುಮಾರ್ ಅವರು ಕಣಕ್ಕೆ ಧುಮುಕಿ ಸ್ಪರ್ಧೆಯ ತೀವ್ರತೆ ಹಿಂದೆಂದಿಗಿಂತಲೂ ಹೆಚ್ಚಿಸಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಈ ಕ್ಷೇತ್ರ ಎಲ್ಲ ಆಕರ್ಷಣೆಯ ಕಣವಾಗಿತ್ತು.

ಶಾಸಕ ಸುಬ್ಬಾರೆಡ್ಡಿ ಅವರಿಗೆ ತೀವ್ರ ಆಡಳಿತ ವಿರೋಧಿ ಅಲೆ ಎದಿದೆ ಎನ್ನುವಂತೆ ಈ ಬಾರಿ ಭಾಸವಾದರೂ ಅವರು ಕ್ಷೇತ್ರವ್ಯಾಪಿ ಮಾಡಿದ ಸಮಾಜಮುಖಿ ಕಾರ್ಯಗಳು ಅವರ ‘ಕೈ’ ಹಿಡಿದವು ಎನ್ನುವ ವಿಶ್ಲೇಷಣೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಜೆಡಿಎಸ್‌ನಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಸ್ಫೋಟಗೊಂಡ ಭಿನ್ನಮತ ಕೊನೆಯ ಗಳಿಗೆ ವರೆಗೆ ಶಮನವಾಗಲೇ ಇಲ್ಲ. ಮನೋಹರ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾದರೆ, ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖಂಡ ಗುಂಜೂರು ಶ್ರೀನಿವಾಸ್ ರೆಡ್ಡಿ ಅವರು ಪ್ರಬಲವಾಗಿ ಬಂಡಾಯದ ಬಾವುಟ ಹಾರಿಸಿದರು. ಅಷ್ಟರಲ್ಲಾಗಲೇ ಗೊಂದಲಕ್ಕೆ ಈಡಾಗಿದ್ದ ಪಕ್ಷದ ಕಾರ್ಯಕರ್ತರಿಗೆ ಕೊನೆ ಕೊನೆಗೆ ಏನು ಮಾಡಬೇಕೆಂಬ ದಿಕ್ಕು ತೋಚದ ಪರಿಸ್ಥಿತಿ ಉಂಟಾಯಿತು.

ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಡಿ.ಜೆ.ನಾಗರಾಜ್ ರೆಡ್ಡಿ ಮತ್ತು ಮುಖಂಡ ಹರಿನಾಥ್ ರೆಡ್ಡಿ ಅವರು ಸಹ ಕೊನೆಯ ಗಳಿಗೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಬಿಟ್ಟು ಗುಂಜೂರು ಶ್ರೀನಿವಾಸ್ ರೆಡ್ಡಿ ಅವರು ಬೆಂಬಲ ಸೂಚಿಸಿದ್ದು ಪಕ್ಷ ನಿಷ್ಠರಿಗೆ ದಾರಿ ತಪ್ಪುವಂತೆ ಮಾಡಿತ್ತು. ದಿಢೀರ್ ಬೆಳವಣಿಗೆಯಲ್ಲಿ ಮತದಾನದ ದಿನ ಸಮೀಪಿಸುತ್ತಿದ್ದಂತೆ ಜೆಡಿಎಸ್ ಬಂಡಾಯಗಾರರು ಕಾವು ಕಳೆದುಕೊಂಡು ತೆರೆಮರೆಗೆ ಸರಿದದ್ದು ಹಲವು ವದಂತಿಗಳಿಗೆ ಕಾರಣವಾಯಿತು ಎನ್ನಲಾಗಿದೆ.

ಪಕ್ಷದೊಳಗಿನ ಕಿತ್ತಾಟ ಕಂಡು ಅನೇಕ ಜೆಡಿಎಸ್ ಮತದಾರರು ಸಹ ಈ ಬಾರಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇನ್ನೊಂದೆಡೆ ಹಣದ ಆಕರ್ಷಣೆಗೆ ಅನೇಕ ಸಿಪಿಎಂ ಮತದಾರರು ಸಿದ್ಧಾಂತ ಮರೆತು ಅನ್ಯಪಕ್ಷಗಳತ್ತ ಒಲುವು ತೋರಿದ್ದಾರೆ.

ಸಂಘಟನೆಯ ಇಲ್ಲದ ಕ್ಷೇತ್ರದಲ್ಲಿ ಅತಿಥಿಯಂತೆ ಕೊನೆಯ ಕ್ಷಣದಲ್ಲಿ ಬಂದ ಸಾಯಿಕುಮಾರ್ ಅವರಿಗೆ ಗೆಲುವು ದಕ್ಕುವುದು ಅಷ್ಟು ಸುಲಭವಲ್ಲ ಎನ್ನುವುದು ಗೊತ್ತಿತ್ತು ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ಒಂದು ಕಾಲದ ‘ಹೋರಾಟದ ನೆಲ’ ಕಾಲ ಉರುಳಿದಂತೆ ‘ಮುಕ್ತ ಮಾರುಕಟ್ಟೆ’ಯಾಗಿ ಬದಲಾಗುತ್ತ ಬಂದಿರುವುದು ಇಲ್ಲಿ ಸಿಪಿಎಂ ಅಭ್ಯರ್ಥಿ ಸೋಲಲು ಕಾರಣವಾಗುತ್ತಿದೆ ಎನ್ನಲಾಗಿದೆ. ಕಮ್ಯೂನಿಸ್ಟ್ ಮುಖಂಡರಾದ ಎ.ವಿ.ಅಪ್ಪಾಸ್ವಾಮಿ ರೆಡ್ಡಿ ಅವರ ತರುವಾಯ ಈ ಭಾಗದಲ್ಲಿ ಹೋರಾಟಗಳ ಮೂಲಕ ದೊಡ್ಡ ನಾಯಕರಾಗಿ ಬೆಳೆದ ಜಿ.ವಿ.ಶ್ರೀರಾಮರೆಡ್ಡಿ ಅವರಿಗೆ ಇದು ಕೊನೆಯ ಚುನಾವಣೆಯಾಗಿತ್ತು. ಹೀಗಾಗಿ ಅವರ ಕಾರ್ಯಕರ್ತರು ಹಗಲಿರುಳು ಅವರ ಗೆಲುವಿಗಾಗಿ ಶ್ರಮಿಸಿದರೂ ನಿರೀಕ್ಷಿತ ಫಲ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT