ಬುಧವಾರ, ಜೂನ್ 29, 2022
26 °C
ಕಲೆ, ಸಂಸ್ಕೃತಿ, ಚಿಂತನೆಗಳ ಸಂವಾದ ಕೇಂದ್ರ

ಶತಮಾನದ ಸುಂದರ ನೆನಪುಗಳ ‘ಕಲಾಮಂದಿರ’

ಶಿವರಾಜ ರಾಮನಾಳ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಕರ್ಷಕ ಕೆಂಪು ಕಟ್ಟಡ, ಗೋಡೆಗಳಲ್ಲಿ ಕಣ್ಸೆಳೆಯುವ ಕುಸುರಿ ಚಿತ್ತಾರಗಳು. ಇವು ನಗರದ ಹನುಮಂತನಗರದ ಕಲಾಮಂದಿರ ಕಲಾಶಾಲೆಗೆ ಭೇಟಿ ನೀಡಿದಾಗ ಎದುರುಗೊಳ್ಳುವ ನೋಟಗಳು. ಸಾವಿರಾರು ಮೇರು ಕಲಾವಿದರನ್ನು ನಾಡಿಗೆ ನೀಡಿರುವ ಈ ಕಲಾಶಾಲೆ ಶತಮಾನದ ಸಂಭ್ರಮವನ್ನು ಕಂಡಿದೆ. ಈಗಲೂ ಕಲಾ ಕೈಂಕರ್ಯವನ್ನು ಉತ್ಸಾಹದಿಂದ ಮುಂದುವರಿಸುತ್ತಿದೆ.

ಮಂಡ್ಯ ಜಿಲ್ಲೆಯ ರೈತಾಪಿ ಕುಟುಂಬದ ಅಕ್ಕಿ ಹೆಬ್ಬಾಳು ನರಸಿಂಹ ಸುಬ್ಬರಾವ್‌ 1919ರಲ್ಲಿ ಬೆಂಗಳೂರಿನ ಬಳೆಪೇಟೆಯ ಸುಗ್ರೀವ ದೇವಸ್ಥಾನದ ಬಳಿ ಕಲಾ ಶಾಲೆಯನ್ನು ಆರಂಭಿಸಿದ್ದರು. ಇದು ಕರ್ನಾಟಕದ ಮೊಟ್ಟ ಮೊದಲ ಚಿತ್ರಕಲೆಯ ಮಂದಿರ. ಬಳೆಪೇಟೆಯಲ್ಲಿದ್ದ ಕಲಾಶಾಲೆ 1938ರಲ್ಲಿ ಮೆಜೆಸ್ಟಿಕ್‌ಗೆ, 1944ರಲ್ಲಿ ಗಾಂಧಿಬಜಾರ್‌ಗೆ ಸ್ಥಳಾಂತರವಾಗುತ್ತದೆ. 1978 ರಿಂದ ಕಲಾಮಂದಿರವು ಶಾಶ್ವತವಾಗಿ ಹನಮಂತನಗರದಲ್ಲಿ ನೆಲೆಗೊಂಡಿದೆ. ಈ ಕಲಾಮಂದಿರದ ಪ್ರಾಂಗಣವನ್ನು ಪ್ರವೇಶಿಸುತ್ತಿದ್ದಂತೆಯೇ ಅ.ನ.ಸುಬ್ಬರಾಯರ ಪುತ್ಥಳಿಯೂ ನಿಮ್ಮನ್ನು ಸ್ವಾಗತಿಸುತ್ತದೆ. ಇಲ್ಲಿನ ಶಿಲ್ಪಶಾಸ್ತ್ರದ ವಿದ್ಯಾರ್ಥಿಗಳೇ ಇದನ್ನು ನಿರ್ಮಿಸಿದ್ದಾರೆ. 

ಅ.ನ.ಸು ಬಾಲಕರಾಗಿದ್ದಾಗ ನಾಗಮಂಗಲದ ಹೊಯ್ಸಳ ಶಿಲ್ಪಗಳಿಂದ ಪ್ರೇರಿತರಾಗಿ ಮೈಸೂರಿನಲ್ಲಿ ಚಿತ್ರಕಲಾ ಡಿಪ್ಲೊಮಾ ಪದವಿ ಪಡೆದರು. ಬೆಂಗಳೂರಿಗೆ ಬಂದು ಬಿಷಪ್‌ ಕಾಟನ್‌ ಶಾಲೆಯಲ್ಲಿ ಕಲಾ ಶಿಕ್ಷಕರಾದರು. ಬಳಿಕ ಸರ್‌.ಎಂ.ವಿಶ್ವೇಶ್ವರಯ್ಯ ಸಲಹೆಯಂತೆ ಈ ಕಲಾ ಶಾಲೆ ಆರಂಭಿಸಿದ್ದರು. ಪ್ರಸ್ತುತ ಇಲ್ಲಿ ಚಿತ್ರಕಲೆ, ಶಿಲ್ಪಕಲೆಯ ಜೊತೆಗೆ ನಟನಾ ಕಲೆಯನ್ನು (ಅಭಿನಯ ತರಂಗ ಶಾಲೆಯಲ್ಲಿ) ಕಲಿಸಲಾಗುತ್ತದೆ.

ಅ.ನ.ಸು ಅವರ ಮೊಮ್ಮಗ ಎ.ಎಂ.ಪ್ರಕಾಶ್‌ ಅವರು ಸದ್ಯ ಕಲಾಮಂದಿರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 1983ರಿಂದ 2020ರವರೆಗೆ ಕಲಾಶಾಲೆಯ ಪ್ರಾಂಶುಪಾಲಗಳುರಾಗಿದ್ದ ಪ್ರಕಾಶ್‌ ಈಗ ಆಡಳಿತ ಮಂಡಳಿಯ ಅಧ್ಯಕ್ಷರು. 1919 ರಿಂದ ಕಲಾ  ಡಿಪ್ಲೊಮಾ ಕೋರ್ಸ್‌ ಮಾತ್ರ ಹೊಂದಿದ್ದ ಕಲಾಮಂದಿರ, 2005 ರಿಂದ ಕಲಾ ಪದವಿಯನ್ನೂ ನೀಡುತ್ತಿದೆ. ಇದು ಹಂಪಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ನಾಲ್ಕು ವರ್ಷಗಳ ಬಿ.ವಿ.ಎ (ದೃಶ್ಯಕಲೆ) ಪದವಿ ಕೋರ್ಸ್‌ ಇಲ್ಲಿದೆ. ಚಿತ್ರಕಲೆ, ವರ್ಣಚಿತ್ರ, ದೃಶ್ಯಕಲೆ, ಫೋಟೊಗ್ರಾಫಿ,ಕ್ರಿಯೇಟಿವ್‌ ಪೇಂಟಿಂಗ್‌, ಸ್ಥಿರಚಿತ್ರಣ, ವ್ಯಕ್ತಿಚಿತ್ರಣ, ರೂಪದರ್ಶಿ, ಭಾವಚಿತ್ರಣ, ರೇಖಾಚಿತ್ರ, ಕಲ್ಪನಾಚಿತ್ರ, ಕಲಾ ಚರಿತ್ರೆ, ಸೌಂದರ್ಯಶಾಸ್ತ್ರ ಕಲಿಸಲಾಗುತ್ತದೆ. ಗ್ರಾಫಿಕ್ಸ್‌ ಪಠ್ಯವನ್ನೂ ಸೇರಿಸಲಾಗಿದ್ದು ಭಾಷಾ ಶಾಸ್ತ್ರವನ್ನೂ ಹೇಳಿಕೊಡಲಾಗುತ್ತದೆ ಎಂದು ಪ್ರಕಾಶ್‌ ವಿವರಿಸಿದರು.

ಭಾರತದ ಮೊದಲ ಶಿಲ್ಪ ಕಲಾವಿದೆಯಾದ ಕನಕಾ ಮೂರ್ತಿ ಅವರು ಕಲಿತದ್ದು ಇಲ್ಲಿಯೇ. ಬಿ.ಕೆ.ಎಸ್‌.ವರ್ಮಾ, ವೆಂಕಟಾಚಲಪತಿ, ರುಮಾಲೆ ಚೆನ್ನಬಸಪ್ಪ ಮೊದಲಾದ ದಿಗ್ಗಜ ಕಲಾವಿದರು ಇಲ್ಲಿನ ವಿದ್ಯಾರ್ಥಿಗಳು. ಕರ್ನಾಟಕದಲ್ಲಿರುವ 70 ಕ್ಕೂ ಹೆಚ್ಚು ಕಲಾ ಶಾಲೆಗಳಿಗೆ ಕಲಾಮಂದಿರವೇ ಬುನಾದಿ. 

‘ಚಿತ್ರಕಲಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಒಂದು ಲಲಿತ ಕಲಾ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. 2017–18ರಲ್ಲಿ ಈ ಬಗ್ಗೆ ಪ್ರಸ್ತಾವನೆ ಕೊಟ್ಟರೂ ಪ್ರಯೋಜನವಾಗಿಲ್ಲ. ಇದಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಬೇಕು’ ಎನ್ನುತ್ತಾರೆ ಪ್ರಕಾಶ್‌.  

ಮೊದಲ ಕಲಾ ಪತ್ರಿಕೆ: 1930–33 ರ ಅವಧಿ ಯಲ್ಲಿ ಅ.ನ.ಸು. ಅವರು ‘ಕಲಾ’ ಹೆಸರಿನಲ್ಲಿ ಕರ್ನಾಟಕದ ಮೊದಲ ಸಂಕೀರ್ಣ ಪತ್ರಿಕೆ ಆರಂಭಿಸಿದರು. ಅ.ನ.ಕೃಷ್ಣರಾಯರು, ಡಿ.ವಿ.ಜಿ., ಮಾಸ್ತಿ, ದೇವುಡು, ಗೊರೂರು ಸೇರಿದಂತೆ ಅನೇಕರು ಇದಕ್ಕೆ ಲೇಖನ ಬರೆಯುತ್ತಿದ್ದರು. 

ಗಾಂಧೀಜಿ ಭೇಟಿಯ ನೆನಪು

1934ರಲ್ಲಿ ಮಹಾತ್ಮ ಗಾಂಧಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುಬ್ಬರಾಯರು ಮತ್ತು ಗೋರೂರು ರಾಮಸ್ವಾಮಿ ಅಯ್ಯಂಗಾರ್‌ ಅವರು ಖಾದಿ ಬಟ್ಟೆಗಳ ಮೇಲೆ ವಿದ್ಯಾರ್ಥಿಗಳು ಬಿಡಿಸಿದ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದ್ದರು. ಅದನ್ನು ವೀಕ್ಷಿಸಿದ್ದ ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅಖಿಲ ಭಾರತಮಟ್ಟದ ಕಲಾ‍ಪ್ರದರ್ಶನಗಳು

ಸುಬ್ಬರಾಯರು 1921ರಲ್ಲಿ ಮೆಜೆಸ್ಟಿಕ್‌ನಲ್ಲಿ ಮೊದಲ ಅಖಿಲ ಭಾರತ ಕಲಾ ಪ್ರದರ್ಶನ
ಏರ್ಪಡಿಸಿದ್ದರು. ಮೈಸೂರಿನ ದಿವಾನರಾಗಿದ್ದ ಸರ್‌.ಮಿರ್ಜಾ ಇಸ್ಮಾಯಿಲ್‌ ಅವರಿಗೆ ಆಹ್ವಾನ ನೀಡಿದ್ದರು. ಅವರ ಕೈಬರಹ ನೋಡಿಯೇ ಆಕರ್ಷಿತರಾದ ಇಸ್ಮಾಯಿಲ್‌ ಆ ಪ್ರದರ್ಶನವನ್ನು ಉದ್ಘಾಟಿಸಿದ್ದಲ್ಲದೇ, ₹50 ದೇಣಿಗೆಯನ್ನೂ ನೀಡಿದ್ದರು.

1927ರಲ್ಲಿ ನಡೆದ ಎರಡನೇ ಪ್ರದರ್ಶನದಲ್ಲಿ ನೇಪಾಳದ ಆಗಿನ ಮಹಾರಾಜ ಜೈ ಬಹದ್ದೂರ್‌ ಸಿಂಗ್‌ ಭಾಗವಹಿಸಿದ್ದರು. 1929ರಲ್ಲಿ ಏರ್ಪಡಿಸಿದ್ದ ಮೂರನೇ
ಪ್ರದರ್ಶನವನ್ನು ಹೈದರಾಬಾದ್‌ನ ಮಹಾರಾಣಿ ದುರೇಶಾ ಅವರು ಉದ್ಘಾಟಿಸಿದ್ದರು. ಅನೇಕ ಕಲಾಕೃತಿಗಳನ್ನೂ ಖರೀದಿಸಿದ್ದರು.

ಸಾಂಸ್ಕೃತಿಕ ಕೂಟವಾಗಿದ್ದ ಕಲಾಮಂದಿರ

ಕಲಾಮಂದಿರವು ಗಾಂಧಿ ಬಜಾರ್‌ನಲ್ಲಿದ್ದಾಗ ಅದೊಂದು ಸಾಂಸ್ಕೃತಿಕ ಕೇಂದ್ರವಾಗಿತ್ತು. ಜೆ.ಪಿ.ರಾಜರತ್ನಂ, ಮಾಸ್ತಿ, ಡಿ.ವಿ.ಜಿ. ಬೀಚಿ, ಅ.ನ.ಕೃ ಅಂಥವರು ಕಲೆಗಳ ಉದ್ದೇಶ, ಸೌಂದರ್ಯ
ಶಾಸ್ತ್ರ, ನಾಟಕಗಳ ಬಗ್ಗೆ ಇಲ್ಲಿ ಚರ್ಚಿಸುತ್ತಿದ್ದರು. ಕವಿ ಮೇಳಗಳು ಹಾಗೂ ವಿಚಾರ ಸಂಕಿರಣಗಳು ನಡೆಯುತ್ತಿದ್ದವು. ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರೂ ಇಲ್ಲಿಗೆ ಭೇಟಿ ನೀಡುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗುಪ್ತ ಚರ್ಚೆಗಳೂ ಇಲ್ಲಿ ನಡೆಯುತ್ತಿದ್ದವು. ಲಂಕೇಶ್‌, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರರು ತಮ್ಮ ಮೊದಲ ನಾಟಕವನ್ನು ವಾಚಿಸಿದ್ದು ಇಲ್ಲಿಯೇ. ಮೈಸೂರು ಅನಂತಸ್ವಾಮಿ ಅವರು ರಾಜರತ್ನಂ ಸಮ್ಮುಖದಲ್ಲಿ ಮೊದಲ ಬಾರಿ ಸ್ವರಚಿತ ಕವನಗಳನ್ನು ಇಲ್ಲಿ ಹಾಡಿದ್ದರು. ಸಿ.ಅಶ್ವತ್ಥ್‌, ಪಿ.ಕಾಳಿಂಗರಾವ್‌ ಆಗಾಗ ಬರುತ್ತಿದ್ದರು ಎಂದು ಪ್ರಕಾಶ್‌ ತಿಳಿಸಿದರು.

---
ಸರ್ಕಾರದ ಅನುದಾನ ಪ್ರಾಂಶುಪಾಲರ ವೇತನಕ್ಕೆ ಮಾತ್ರ ಸಾಲುತ್ತದೆ. ಇತರ ನೇಮಕಾತಿ, ಕಲಾ ಪ್ರದರ್ಶನ, ಕಾರ್ಯಾಗಾರ ಯಾವುದಕ್ಕೂ ಹಣವಿಲ್ಲ. ಕಲಾಶಾಲೆಗಳನ್ನು ಪೋಷಿಸುವತ್ತ ಸರ್ಕಾರ ಚಿತ್ತ ಹರಿಸಬೇಕು

- ಪ್ರಕಾಶ್‌ ಎ.ಎಂ., ಅಧ್ಯಕ್ಷ, ಕಲಾಮಂದಿರ ಆಡಳಿತ ಮಂಡಳಿ

-----

ಸರ್ಕಾರದ ಅನುದಾನ ಪ್ರಾಂಶುಪಾಲರ ವೇತನಕ್ಕೆ ಮಾತ್ರ ಸಾಲುತ್ತದೆ. ಇತರ ನೇಮಕಾತಿ, ಕಲಾ ಪ್ರದರ್ಶನ, ಕಾರ್ಯಾಗಾರ ಯಾವುದಕ್ಕೂ ಹಣವಿಲ್ಲ. ಕಲಾಶಾಲೆಗಳನ್ನು ಪೋಷಿಸುವತ್ತ ಸರ್ಕಾರ ಚಿತ್ತ ಹರಿಸಬೇಕು

- ಪ್ರಕಾಶ್‌ ಎ.ಎಂ, ಅಧ್ಯಕ್ಷ, ಕಲಾಮಂದಿರ ಆಡಳಿತ ಮಂಡಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು