‘ಫೈರ್ ಬ್ರಾಂಡ್’ಗಳ ಒತ್ತಡವೇ ಕಾರಣ!
ಬೆಂಗಳೂರು: ಗೋಹತ್ಯೆ ನಿಷೇಧ ಮಸೂದೆ ತರಾತುರಿಯಲ್ಲಿ ಮಂಡನೆಯಾಗಿ, ಅಂಗೀಕಾರಗೊಳ್ಳುವಂತೆ ಒತ್ತಡ ಹಾಕುವಲ್ಲಿ ವಿಧಾನಸಭೆ ಮುಖ್ಯಸಚೇತಕ ಸುನಿಲ್ ಕುಮಾರ್ ಪ್ರಮುಖ ಕಾರಣರು ಎಂದು ಮೂಲಗಳು ಹೇಳಿವೆ.
ಈ ಅಧಿವೇಶನ ಮೊಟಕುಗೊಳಿಸಿದ್ದರಿಂದ ಮಸೂದೆ ಮಂಡಿಸುವ ಇರಾದೆ ಸರ್ಕಾರಕ್ಕೆ ಇರಲಿಲ್ಲ. ಮುಂದಿನ ಅಧಿವೇಶನದಲ್ಲಿ ಮಂಡಿಸುವ ಉದ್ದೇಶವನ್ನು ಹೊಂದಿತ್ತು. ಕಾನೂನು ಸಚಿವ ಮಾಧುಸ್ವಾಮಿ ಅವರೂ
ಉತ್ಸಾಹ ತೋರಿಸಿರಲಿಲ್ಲ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬೆನ್ನು ಬಿದ್ದು, ಬುಧವಾರದ ಹೆಚ್ಚುವರಿ ಕಾರ್ಯಸೂಚಿಯಲ್ಲಿ ಮಸೂದೆಯನ್ನು ಸೇರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದಕ್ಕೆ ಪೂರಕವಾಗಿ ವಿಧಾನಸೌಧದ ಪೂರ್ವ ಭಾಗದಲ್ಲಿ ಗೋಪೂಜೆ ಮತ್ತು ಮಸೂದೆ ಮಂಡನೆ ಸಂದರ್ಭದಲ್ಲಿ ಎಲ್ಲ ಶಾಸಕರೂ ಕೇಸರಿ ಶಾಲು ಹಾಕಿಕೊಳ್ಳುವ ಆಲೋಚನೆಯೂ ಸುನಿಲ್ ಕುಮಾರ್ ಅವರದ್ದೇ ಆಗಿತ್ತು. ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಅವರು ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಿ ಮುಗಿದ ಬಳಿಕ ಸಭಾಧ್ಯಕ್ಷರು ಕಲಾಪವನ್ನು ಮುಂದೂಡಿ ಮತ್ತೆ ಸಮಾವೇಶಗೊಂಡಾಗ, ಎಲ್ಲ ಶಾಸಕರು ಮತ್ತು ಸಚಿವರ ಕುತ್ತಿಗೆಗೂ ಸುನಿಲ್ ಕೇಸರಿ ಶಾಲೂ ಹಾಕಿಸಿದ್ದರು. ಶಾಲುಗಳನ್ನು ಮೊದಲೇ ತಂದಿರಿಸಲಾಗಿತ್ತು ಮೊದಲೇ ವ್ಯವಸ್ಥೆ ಮಾಡಿಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸುನಿಲ್, ‘ಗೋಹತ್ಯೆ ನಿಷೇಧ ನಮ್ಮ ಪ್ರಮುಖ ಅಜೆಂಡಾ. ಸರ್ಕಾರ ಗೋಹತ್ಯೆ ಮಸೂದೆ ಮಂಡಿಸುತ್ತದೆ ಎಂದು ಹೇಳಿದಾಗ ಕಾಂಗ್ರೆಸ್ ಅನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದ್ದೂ ಅಲ್ಲದೆ, ಮಂಡನೆಗೆ ಬಿಡುವುದಿಲ್ಲ ಎಂದು ಸವಾಲು ಹಾಕಿತ್ತು. ಆ ಸವಾಲನ್ನು ಸ್ವೀಕರಿಸಿ, ಮಸೂದೆ ಅಂಗೀಕರಿಸುವಂತೆ ಮಾಡಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.