ಭಾನುವಾರ, ಮೇ 22, 2022
21 °C

ಸೋಂಕು ನಿವಾರಣೆಗೆ ಯುವಿಸಿ ರೋಬೊಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ನಿಯಂತ್ರಣಕ್ಕಾಗಿ ಕಚೇರಿಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸೋಂಕು ನಿವಾರಕಗೊಳಿಸುವುದು ಸವಾಲಿನ ವಿಷಯ. ಈ ತಲೆನೋವಿನ ಕೆಲಸವನ್ನು ಸುಲಭಗೊಳಿಸಲು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (ಬಿಇಎಲ್‌) ಸಂಸ್ಥೆ ನೇರಳಾತೀತ ಕಿರಣಗಳ ಮೂಲಕ ಸೋಂಕು ನಿವಾರಿಸುವ ‘ಯುವಿ –ಸಿ ಸ್ಯಾನಿಟೈಸರ್‌ ರೋಬೊಟ್‌’ ಅನ್ನು ರೂಪಿಸಿದೆ.

‘ಈ ಯಂತ್ರವು ಮಾನವನ ನೇರ ಹಸ್ತಕ್ಷೇಪವಿಲ್ಲದೆಯೇ ಕಾರ್ಯನಿರ್ವಹಿಸಬಲ್ಲದು. ವೈರಸ್‌, ಬ್ಯಾಕ್ಟೀರಿಯಾದಂತಹ ಕ್ರಿಮಿಗಳನ್ನು ಕೆಲವೇ ನಿಮಿಷಗಳಲ್ಲಿ ನಾಶಪಡಿಸಬಲ್ಲುದು’ ಎನ್ನುತ್ತಾರೆ ಬಿಇಎಲ್‌ ಅಧಿಕಾರಿಗಳು.

‘ಇದರಲ್ಲಿ ಲಿಡಾರ್‌ ತಂತ್ರಜ್ಞಾನ ಬಳಸಿದ್ದೇವೆ. ಶಬ್ದಾತೀತ ಕಿರಣಗಳ (ಅಲ್ಟ್ರಾಸೋನಿಕ್‌) ಸೆನ್ಸರ್‌ಗಳನ್ನು ಅಳವಡಿಸಿದ್ದೇವೆ. ರಿಮೋಟ್‌ ಕಂಟ್ರೋಲ್‌ ಮೂಲಕ ಅಥವಾ ಕಂಪ್ಯೂಟರ್ ಮೂಲಕ ಇದರ ಕಾರ್ಯಾಚರಣೆಯನ್ನು ದೂರದಿಂದಲೇ ನಿಯಂತ್ರಿಸಬಹುದು. 300 ಮೀ ದೂರದವರೆಗೂ ಈ ಯಂತ್ರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ’ ಎಂದು ಮಾಹಿತಿ ನೀಡಿದರು.

‘ಈ ಯಂತ್ರವನ್ನು ಬಳಸುವಾಗ ಆ ಕೊಠಡಿಯಲ್ಲಿ ಯಾವುದೇ ವ್ಯಕ್ತಿಗಳು ಇರುವಂತಿಲ್ಲ. ಮಾಲ್‌ಗಳು, ಸಿನಿಮಾ ಮಂದಿರಗಳು, ಆಸ್ಪತ್ರೆ, ಶಾಲಾ ಕಾಲೇಜುಗಳಲ್ಲಿ ಸೊಂಕು ನಿವಾರಣೆಗೆ ಇದು ಹೇಳಿ ಮಾಡಿಸಿದಂತಿದೆ. ಬಸ್ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಜನರಿಲ್ಲದ ಸಮಯದಲ್ಲಿ ಈ ಯಂತ್ರವನ್ನು ಬಳಸಿ ಸೋಂಕು ನಿವಾರಣೆ ಮಾಡಬಹುದು’ ಎಂದು ಅವರು ತಿಳಿಸಿದರು. 

ಮರೆಯಿಂದ ಗುಂಡಿಕ್ಕುವ ಕೋವಿ

ಒಂದು ಕೋವಿಯಿಂದ ನೇರವಾಗಿ ಗುಂಡು ಹಾರಿಸುವುದು ಸಹಜ. ಆದರೆ, ಬಿಇಎಲ್‌ ಅಭಿವೃದ್ಧಿಪಡಿಸಿರುವ ಈ ಹೊಸ ನಮೂನೆಯ ಕೋವಿಯನ್ನು ಬಳಸಿ 165 ಡಿಗ್ರಿವರೆಗೆ ಯಾವುದೇ ದಿಕ್ಕಿನಲ್ಲಿ ಶತ್ರು ಇದ್ದರೂ ಅವರಿಗೆ ಗುಂಡು ಹಾರಿಸಬಹುದು.  

‘ಕಟ್ಟಡಗಳ ನಡುವೆ, ಗೋಡೆಗಳ ಮರೆಯಲ್ಲಿ ಅವಿತುಕೊಂಡಿರುವ ಶತ್ರುವಿನ ದಾಳಿ ಮಾಡುವುದಕ್ಕೆ ಈ  ‘ಕಾರ್ನರ್‌ ಶಾಟ್‌ ವೆಪನ್‌’ ಸಹಕಾರಿ. ಈ ಕೋವಿಯ ಮೂತಿಯನ್ನು 165 ಡಿಗ್ರಿವರೆಗೆ ತಿರುಗಿಸಬಹುದು. ಶತ್ರುವನ್ನು ನಿಖರವಾಗಿ ನೋಡಲು ಈ ಆಯುಧದಲ್ಲಿ ಅಳವಡಿಸಿರುವ ಎಲ್‌ಸಿಡಿ ಡಿಸ್‌ಪ್ಲೇ ನೆರವಾಗುತ್ತದೆ. ಇದರಲ್ಲಿ ಲೇಸರ್‌ ಪಾಯಿಂಟರ್‌ ಕೂಡಾ ಇದೆ. ರಕ್ತಾತೀತ ಕಿರಣಗಳನ್ನು ಹೊರಸೂಸುವ ಸಾಧನ (ಐಆರ್‌ ಇಲ್ಯುಮಿನೇಟರ್‌), ಎಲ್‌ಇಡಿ ಟಾರ್ಚ್‌ಗಳನ್ನೂ ಜೋಡಿಸಲಾಗಿದೆ. ರಾತ್ರಿ ವೇಳೆಯೂ ಕಾರ್ಯನಿರ್ವಹಿಸುವ ಕ್ಯಾಮೆರಾವನ್ನೂ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಬಿಇಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

-0-

ಡಯಾಲಿಸಿಸ್‌ಗೆ ದೇಸಿ ಯಂತ್ರ

ಸಂಪೂರ್ಣ ದೇಸಿ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸುವ ಡಯಾಲಿಸಿಸ್‌ ಯಂತ್ರವನ್ನು ಬಿಇಎಲ್‌ ಮಳಿಗೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ರವಾನಿಸಬಹುದು.

‘ಸದ್ಯಕ್ಕೆ ಇದನ್ನು ಆಸ್ಪತ್ರೆಗಳಲ್ಲಿನ ಬಳಕೆಗಾಗಿ ಸಿದ್ಧಪಡಿಸಿದ್ದೇವೆ. ಭವಿಷ್ಯದಲ್ಲಿ ಮನೆಯಲ್ಲೇ ಡಯಾಲಿಸಿಸ್‌ಗೆ ಒಳಗಾಗುವುದಕ್ಕೂ ಇದೇ ಮಾದರಿಯ ಯಂತ್ರ ತಯಾರಿಸುವ ಯೋಚನೆಗಳಿವೆ’  ಎಂದು ಬಿಇಎಲ್ ಅಧಿಕಾರಿಯೊಬ್ಬರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು