ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್‌

ಎಸ್‌ಟಿಪಿ ಅಳವಡಿಸದ ವಸತಿ ಸಮುಚ್ಚಯಗಳ ವಿರುದ್ಧ ಕೆಎಸ್‌ಪಿಸಿಬಿ ಕ್ರಮ
Last Updated 27 ಜುಲೈ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ಬೆಳ್ಳಂದೂರು ಕೆರೆಯ ಆಸುಪಾಸಿನಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಅಳವಡಿಸಿಕೊಳ್ಳದಿರುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಗಂಭೀರವಾಗಿ ಪರಿಗಣಿಸಿದೆ. 50ಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿರುವ ಇಂತಹ 17ಕ್ಕೂ ಅಧಿಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಮಂಡಳಿಯು ನೋಟಿಸ್‌ ಜಾರಿ ಮಾಡಿದೆ.

ವರ್ತೂರು– ಬೆಳ್ಳಂದೂರು ಹಾಗೂ ಅಗರ ಕೆರೆಗಳ ಪುನರುಜ್ಜೀವನ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಹಸಿರು ನ್ಯಾಯಮಂಡಳಿಯ ನಿರ್ದೇಶನದ ಅನ್ವಯ ನೇಮಿಸಿರುವ ತಜ್ಞರ ಸಮಿತಿಯು, ‘ಎಸ್‌ಟಿಪಿ ಹೊಂದಿರದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿವಾಸಿಗಳಿಗೆ ನೋಟಿಸ್‌ ನೀಡಿ ಪ್ರತಿಕ್ರಿಯೆ ಪಡೆಯಬೇಕು ಹಾಗೂ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದು ಕೆಎಸ್‌ಪಿಸಿಬಿಗೆ ಇತ್ತೀಚೆಗೆ ನಿರ್ದೇಶನ ನೀಡಿತ್ತು.

ಇಂತಹ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಕುಡಿಯುವ ನೀರು ಪೂರೈಕೆಯನ್ನು ಸ್ಥಗಿತಗೊಳಿಸುವಂತೆ ಜಲಮಂಡಳಿಗೂ ನಿರ್ದೇಶನ ನೀಡಿದೆ.

ರಾಜಕಾಲುವೆಗಳನ್ನು ಕಾಂಕ್ರೀಟೀಕರಣಗೊಳಿಸಬಾರದು ಎಂದು ಬಿಬಿಎಂಪಿಗೆ ಸಮಿತಿ ಸೂಚಿಸಿದೆ. ಈ ಮೂರು ಕೆರೆಗಳಿಗೆ ಸಂಬಂಧಿಸಿದ ರಾಜಕಾಲುವೆ ಒತ್ತುವರಿ ಬಗ್ಗೆಯೂ ವರದಿ ಕೇಳಿದೆ.

ಬೆಳ್ಳಂದೂರು ಕೆರೆಯ ಪುನರುಜ್ಜೀವನ ಕಾರ್ಯವನ್ನು ಸಮರ್ಪಕವಾಗಿ ಮಾಡದ ಕಾರಣಕ್ಕೆ ಎನ್‌ಜಿಟಿ ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿತ್ತು. ಎನ್‌ಜಿಟಿ ಆದೇಶದ ಮೇರೆಗೆ ರಾಜ್ಯ ಸರ್ಕಾರವು ₹500 ಕೋಟಿ ದಂಡದ ಮೊತ್ತವನ್ನು ಇದಕ್ಕಾಗಿ ಮೀಸಲಿಟ್ಟಿರುವ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದೆ.

ಬೆಳ್ಳಂದೂರು ಕೆರೆಯ ಪುನರುಜ್ಜೀವನ ಕಾರ್ಯವನ್ನು ಕೈಗೆತ್ತಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ. ಇದಕ್ಕೆ ಪೂರ್ವಭಾವಿಯಾಗಿ ಕೆರೆಯ ನೀರನ್ನು ಖಾಲಿ ಮಾಡಲಾಗುತ್ತಿದೆ. ನಂತರ ಕೊಳಚೆ ನೀರು ಕೆರೆಯನ್ನು ಸೇರದಂತೆ ತಾತ್ಕಾಲಿಕವಾಗಿ ತಡೆಯುವ ಕಾಮಗಾರಿ ನಡೆಯಲಿದೆ. ಬಳಿಕ ಕೆರೆಯ ಹೂಳೆತ್ತಲಾಗುತ್ತದೆ. ಈ ಹೂಳನ್ನು ಕ್ವಾರಿಯೊಂದಕ್ಕೆ ತುಂಬಿಸಲು ಯೋಜಿಸಲಾಗಿದೆ.

‘ಸೇನೆ ಜೊತೆ ಸಮನ್ವಯವಿಲ್ಲ’

ಬೆಳ್ಳಂದೂರು ಕೆರೆಯ ಪುನರುಜ್ಜೀವನ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮುನ್ನ ಇಲ್ಲಿನ ಸೇನಾ ಘಟಕದ ಜೊತೆ ಬಿಡಿಎ ಸಮನ್ವಯ ಕಾಪಾಡಿಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

‘ಸೇನೆ ಹಾಗೂ ಸ್ಥಳೀಯರ ನಡುವಿನ ರಾಜ್ಯಮಟ್ಟದ ಸಮನ್ವಯ ಸಮಿತಿ ಜೊತೆ ಚರ್ಚಿಸಿ ಮುಂದುವರಿಯಬೇಕು ಎಂದು ಎನ್‌ಜಿಟಿಯು ಬಿಡಿಎಗೆ ನಿರ್ದೇಶನ ನೀಡಿತ್ತು. ಒಳಚರಂಡಿ ನೀರು ಕೆರೆಯನ್ನು ಸೇರದಂತೆ ತಡೆಯುವ ಕಾರ್ಯಕ್ಕೆ ಸೇನೆಯ ಜಾಗವನ್ನು ಬಳಸದಂತೆಯೂ ಸಲಹೆ ನೀಡಿತ್ತು. ಆದರೆ, ಇತ್ತೀಚೆಗೆ ಇಬ್ಬಲೂರು ಪ್ರದೇಶದ ಸೇನಾ ಜಾಗಕ್ಕೆ ಜೆಸಿಬಿಯನ್ನು ತಂದು ರಾತ್ರಿ ವೇಳೆ ಕೆಲಸ ಆರಂಭಿಸಿದ್ದರು. ಅದರ ಚಾಲಕ ಹಾಗೂ ಇನ್ನೊಬ್ಬ ಕಾರ್ಮಿಕನನ್ನು ಸೇನಾ ಸಿಬ್ಬಂದಿ ಪೊಲೀಸರ ವಶಕ್ಕೆ ಒಪ್ಪಿಸಿದರು’ ಎಂದು ಬೆಳ್ಳಂದೂರಿನ ನಿವಾಸಿಯೊಬ್ಬರು ತಿಳಿಸಿದರು.

ಕೆರೆಗೆ ಸಂಬಂಧಿಸಿ ಶೇ 5ರಷ್ಟು ಜಾಗವನ್ನು ಬಳಸಿ ಅಲ್ಲಿ ಸ್ಥಳೀಯರ ಬಳಕೆ ಗಾಗಿ ನಡಿಗೆ ಪಥ ನಿರ್ಮಿಸಲಾಗುತ್ತದೆ. ಕೆರೆಯ ಅಂದ ಹೆಚ್ಚಿಸುವ ಕಾಮಗಾರಿ ಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಮಿತಿ ಸ್ಥಳೀಯರಿಗೆ ಭರವಸೆ ನೀಡಿತ್ತು.

114 ಕುಟುಂಬ ಸ್ಥಳಾಂತರ

‘ಬೆಳ್ಳಂದೂರು ಕೆರೆಯ ಮೀಸಲು ಪ್ರದೇಶದಲ್ಲಿರುವ ಅಂಬೇಡ್ಕರ್‌ ಕೊಳೆಗೇರಿಯಲ್ಲಿ ನೆಲೆಸಿರುವ ಸುಮಾರು 114 ಕುಟುಂಬಗಳನ್ನು ಒಕ್ಕಲೆಬ್ಬಿಸಲು ಬಿಡಿಎ ಮುಂದಾಗಿದೆ. ಈ ಕುಟುಂಬಗಳಿಗೆ ಪರ್ಯಾಯ ನೆಲೆ ಕಲ್ಪಿಸಲು ಚಿಂತನೆ ನಡೆಸಿದ್ದೇವೆ. ಅವರಿಗೆ ಪುನರ್ವಸತಿ ಕಲ್ಪಿಸಲು ಒಂದು ತಿಂಗಳ ಕಾಲಾವಕಾಶ ಕೇಳಿದ್ದೇವೆ. ಬಳಿಕ ಆ ಜಾಗಕ್ಕೆ ಬೇಲಿ ಹಾಕುತ್ತೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT