ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಬಂದ್‌ಗೆ ಬೆಂಗಳೂರಿನಲ್ಲಿ ‘ಮಿಶ್ರ’ ಪ್ರತಿಕ್ರಿಯೆ

100ಕ್ಕೂ ಹೆಚ್ಚು ಮುಖಂಡರು, ಕಾರ್ಯಕರ್ತರು ವಶಕ್ಕೆ l ಪ್ರತಿಭಟನಾ ಮೆರವಣಿಗೆ ಯಶಸ್ವಿ
Last Updated 27 ಸೆಪ್ಟೆಂಬರ್ 2021, 19:24 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳು ಹಾಗೂ ಬೆಲೆ ಏರಿಕೆ ಖಂಡಿಸಿ ರಾಷ್ಟ್ರವ್ಯಾಪಿ ಸೋಮವಾರ ಕರೆ ನೀಡಲಾಗಿದ್ದ ‘ಭಾರತ್ ಬಂದ್‌’ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಾರ–ವಹಿವಾಟು ಸ್ಥಗಿತಗೊಳಿಸಿ ಬಂದ್‌ಗೆ ಬೆಂಬಲ ನೀಡಬೇಕೆಂದು ರೈತಪರ ಹಾಗೂ ಕಾರ್ಮಿಕ ಸಂಘಟನೆಗಳು ಕೋರಿದ್ದವು. ಆದರೆ, ಬೆಳಿಗ್ಗೆ ಹಲವೆಡೆ ಅಂಗಡಿಗಳು‌ ತೆರೆದಿದ್ದವು. ಕೆಲವೆಡೆ ಮಾತ್ರ ಅಂಗಡಿಗಳು ಬಂದ್ ಆಗಿದ್ದವು.

ಭಾರತ್ ಬಂದ್ ಬಗ್ಗೆ ಹೆಚ್ಚು ಸುದ್ದಿಯಾಗಿದ್ದರಿಂದ ಬಹುತೇಕ‌ ಜನ, ಮನೆಯಿಂದ ಹೊರಗೆ ಬಂದಿರಲಿಲ್ಲ. ಅಂಗಡಿಗಳು ತೆರೆದಿದ್ದರೂ ಹಲವೆಡೆ ಗ್ರಾಹಕರ ಸುಳಿವು ಕಾಣಿಸಲಿಲ್ಲ.

ರಾಜಾಜಿನಗರ, ವಿಜಯನಗರ, ಮಲ್ಲೇಶ್ವರ, ಶೇಷಾದ್ರಿಪುರ, ಜೆ.ಪಿ.ನಗರ. ಜಯನಗರ, ಬಸವನಗುಡಿ, ಹನುಮಂತನಗರ, ಗಿರಿನಗರ, ಆರ್‌.ಟಿ. ನಗರ, ಹೆಬ್ಬಾಳ, ಹೆಣ್ಣೂರು, ಬಾಣಸವಾಡಿ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಅಂಗಡಿಗಳು ಭಾಗಶಃ ತೆರೆದಿದ್ದವು.

ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತ ಶೇ 75ರಷ್ಟು ಅಂಗಡಿಗಳು ಮಾತ್ರ ಬೆಳಿಗ್ಗೆ ಬಂದ್ ಇದ್ದವು. ಉಳಿದಂತೆ, ಕೆಲವರು ಅರ್ಧ ಬಾಗಿಲು ತೆರೆದು ವ್ಯಾಪಾರ ಮಾಡಿದರು.

ಬಟ್ಟೆ ಅಂಗಡಿಗಳು, ಮೊಬೈಲ್ ಮಳಿಗೆಗಳು, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆ, ಪುಸ್ತಕ ಅಂಗಡಿ, ಕಿರಾಣಿ ಅಂಗಡಿ, ಕಿರು‌ ಸೂಪರ್‌ ಮಾರ್ಕೆಟ್ ಹಾಗೂ ಇತರೆ ಅಂಗಡಿಗಳು ತೆರೆದಿರುವುದು ಕಂಡುಬಂತು.

ಕೆಲ‌ ಸಂಘಟನೆಗಳ ಕಾರ್ಯಕರ್ತರು, ಬೆಳಿಗ್ಗೆ ಅಂಗಡಿ ಬಳಿ ಹೋಗಿ ಬಂದ್ ಮಾಡಿಸಿದರು. ಕೆಲ‌ ಮಾಲೀಕರು, ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚಿದರು. ಮಧ್ಯಾಹ್ನ 1 ಗಂಟೆ ನಂತರ, ಎಲ್ಲ ಪ್ರದೇಶದಲ್ಲಿ ಅಂಗಡಿಗಳು ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡವು. ಅಲ್ಲೆಲ್ಲ ವ್ಯಾಪಾರ ವಹಿವಾಟು ಯಥಾಸ್ಥಿತಿಗೆ ಮರಳಿತ್ತು.

ಆಟೊ, ಬಸ್, ಕ್ಯಾಬ್, ಸರಕು ಸಾಗಣೆ ವಾಹನ ಹಾಗೂ ಇತರೆ ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿತ್ತು. ಕೆಲವೆಡೆ ದಟ್ಟಣೆ ಉಂಟಾಗಿದ್ದು ಬಿಟ್ಟರೆ, ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣದಲ್ಲೂ ಜನರ ಓಡಾಟ ಸಾಮಾನ್ಯವಾಗಿತ್ತು. ಪೊಲೀಸರ ಕಾವಲು ಹೆಚ್ಚಿತ್ತು.

100ಕ್ಕೂ ಹೆಚ್ಚು ಮಂದಿ ವಶಕ್ಕೆ: ಮೆಜೆಸ್ಟಿಕ್ ಕೇಂದ್ರ ನಿಲ್ದಾಣ, ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು, ಸ್ವಾತಂತ್ರ್ಯ ಉದ್ಯಾನ ಬಳಿ ಪ್ರತಿಭಟನೆ ನಡೆಸಲು ಬೆಳಿಗ್ಗೆಯೇ ಮುಖಂಡರು ಸೇರಿದ್ದರು. ಬಸ್‌ ಹಾಗೂ ಸಾರ್ವಜನಿಕರ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟಿಸಲು ಯತ್ನಿಸಿದರು.

ಅದನ್ನು ತಡೆದ ಪೊಲೀಸರು,'ಪ್ರತಿಭಟನೆಗೆ ಅನುಮತಿ ಪಡೆದಿಲ್ಲ. ಕಾನೂನು‌ ಮೀರಿ ನಡೆಯಬೇಡಿ. ವಾಪಸು ಹೋಗಿ' ಎಂದು ಕೋರಿದರು. ಅದಕ್ಕೆ ಪ್ರತಿಭಟನಕಾರರು ಒಪ್ಪಲಿಲ್ಲ. ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಸಂಜೆ ಬಿಡುಗಡೆ ಮಾಡಿದರು.

ಬೃಹತ್ ಮೆರವಣಿಗೆ; ಬಂದ್ ಪ್ರಯುಕ್ತ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಯಶಸ್ವಿಯಾಯಿತು.

ಆನಂದರಾವ್ ವೃತ್ತದ ಗಾಂಧಿ‌ ಪ್ರತಿಮೆ, ಸ್ವಾತಂತ್ರ್ಯ ‌ಉದ್ಯಾನ, ಕೆ.ಆರ್. ವೃತ್ತ, ನೃಪತುಂಗ ರಸ್ತೆ ಮೂಲಕ ಸಾಗಿ ಮೆರವಣಿಗೆ ಮೈಸೂರು ಬ್ಯಾಂಕ್ ವೃತ್ತ ತಲುಪಿತ್ತು. ಅಲ್ಲಿಯೇ ಬಹಿರಂಗ‌ ಸಭೆ ನಡೆಸಿದ ಪ್ರತಿಭಟನಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೆಲ ರೈತರು, ಟ್ರ್ಯಾಕ್ಟರ್‌ನಲ್ಲಿ ಬಂದಿದ್ದರು.

ಮೆರವಣಿಗೆ ಸಂದರ್ಭದಲ್ಲಿ ರಸ್ತೆಯ ಅಕ್ಕ-ಪಕ್ಕದ‌ ಅಂಗಡಿ, ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಯತ್ನಿಸಿದರು. ಕೆಲವರು, ಉರುಳು ಸೇವೆ ಮಾಡಿದರು. ತಮಟೆ ಚಳವಳಿ ನಡೆಸಿದರು. ಭಗತ್ ಸಿಂಗ್ ಅವರ ಜನ್ಮದಿನವಾಗಿದ್ದರಿಂದ,ಪ್ರತಿಭಟನೆಯಲ್ಲಿ ಅವರ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ರಾವಣನ ರೂಪದಲ್ಲಿ ನರೇಂದ್ರ ಮೋದಿ ಅವರ ಬ್ಯಾನರ್ ಸಿದ್ಧಪಡಿಸಿದ್ದ ಪ್ರತಿಭಟನಕಾರರು, ಅದಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ಮೆರವಣಿಗೆಯಿಂದಾಗಿ‌ ಮೆಜೆಸ್ಟಿಕ್, ಕಾರ್ಪೋರೇಷನ್ ‌ಹಾಗೂ‌ ಸುತ್ತಮುತ್ತ ರಸ್ತೆಗಳಲ್ಲಿ‌ ವಾಹನಗಳ ದಟ್ಟಣೆ ಉಂಟಾಗಿತ್ತು.

ಪುರಭವನ, ಸುಮನಹಳ್ಳಿ‌ ವೃತ್ತ, ಕೆ.ಆರ್.ಪುರ, ಕನಕಪುರ ರಸ್ತೆ, ಅತ್ತಿಬೆಲೆ ಗಡಿಯಲ್ಲಿ ಕಾರ್ಮಿಕರು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಅಲ್ಲಿಯೂ ಕೆಲ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.

‘ಬಲವಂತದಿಂದ ಬಂಧನ’

‘ಪ್ರತಿಭಟನೆ ಮಾಡುತ್ತಿದ್ದ ನಮ್ಮನ್ನು ಪೊಲೀಸರು ಬಲವಂತದಿಂದ ವಶಕ್ಕೆ ಪಡೆದು ಆಡುಗೋಡಿ ಮೈದಾನಕ್ಕೆ ಕರೆದೊಯ್ದಿದ್ದರು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

‘ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಲಿಲ್ಲ. ಏಕಾಏಕಿ ಸ್ಥಳಕ್ಕೆ ಬಂದು ವಾಗ್ವಾದ ನಡೆಸಿದರು. ನಮ್ಮ ಮಾತು ಕೇಳದೇ ದಿಢೀರ್ ಎಲ್ಲರನ್ನೂ ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ದಿದ್ದರು. ಇದು ಪೊಲೀಸರ ಸರ್ವಾಧಿಕಾರಿ ಧೋರಣೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದೂ ತಿಳಿಸಿದರು.

ಡಿಸಿಪಿ ಕಾಲ ಮೇಲೆ ಹರಿದ ಕಾರು

ಬೆಂಗಳೂರು: ಗೊರಗುಂಟೆಪಾಳ್ಯ ಬಳಿ ಭದ್ರತೆ ಕರ್ತವ್ಯದಲ್ಲಿದ್ದ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ ಮೀನಾ ಅವರ ಕಾಲಿನ ಮೇಲೆ ರೈತ ಮುಖಂಡನ ಕಾರಿನ ಚಕ್ರ ಹರಿದ ಘಟನೆ ಸೋಮವಾರ ನಡೆಯಿತು.

ತುಮಕೂರು ರಸ್ತೆ ಕಡೆಯಿಂದ ಬೆಂಗಳೂರು ಪ್ರವೇಶಿಸುವ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಗೊರಗುಂಟೆಪಾಳ್ಯ ಬಳಿ ಸೇರಿದ್ದರು. ಭದ್ರತೆ ಉಸ್ತುವಾರಿಯನ್ನು ಡಿಸಿಪಿ ನೋಡಿಕೊಳ್ಳುತ್ತಿದ್ದರು.

‘ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ’ ಎಂಬ ಫಲಕವಿದ್ದ ಎಸ್‌ಯುವಿ ಕಾರು (ಕೆಎ 19 ಎಂಕೆ 1565) ಸ್ಥಳಕ್ಕೆ ಬಂದಿತ್ತು. ಡಿಸಿಪಿ ಹಾಗೂ ಸಿಬ್ಬಂದಿ ಅದನ್ನು ತಡೆಯಲು ಮುಂದಾಗಿದ್ದರು. ಆದರೆ, ಚಾಲಕ ಕಾರು ನಿಲ್ಲಿಸಲಿಲ್ಲ.

ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ಅವರ ಮೇಲೆಯೇ ಕಾರು ಹರಿಸಲು ಚಾಲಕ ಯತ್ನಿಸಿದ್ದ. ಡಿಸಿಪಿ ಪಕ್ಕಕ್ಕೆ ಸರಿಯುತ್ತಿದ್ದಂತೆ, ಅವರ ಎಡಗಾಲಿನ ಪಾದದ ಮೇಲೆಯೇ ಕಾರಿನ ಮುಂದಿನ ಚಕ್ರ ಹರಿದು ಹೋಯಿತು. ಗಾಯಗೊಂಡ ಡಿಸಿಪಿ ಸ್ಥಳದಲ್ಲೇ ಕುಳಿತು ಚೇತರಿಸಿಕೊಂಡರು. ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡರು. ನಂತರ, ಕುಂಟುತ್ತಲೇ ಯಥಾಪ್ರಕಾರ ಕರ್ತವ್ಯ ಮುಂದುವರಿಸಿದರು.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಚಾಲಕನ್ನು ವಶಕ್ಕೆ ಪಡೆದಿದ್ದಾರೆ. ಕಾರು ಜಪ್ತಿ ಮಾಡಿದ್ದಾರೆ.

‘ಪ್ರತಿಭಟನೆಗೆ ಪೊಲೀಸರಿಂದ ಅಡ್ಡಿ’

‘ಭಾರತ್ ಬಂದ್ ಬೆಂಬಲಿಸಿ ನಗರದಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ಪೊಲೀಸರು ಅಡ್ಡಿಪಡಿಸಿದರು. ಅಷ್ಟಾದರೂ ಪ್ರತಿಭಟನಾ ಮೆರವಣಿಗೆ ಯಶಸ್ವಿಯಾಗಿದೆ. ಜನರಿಂದಲೂ ಬೆಂಬಲ ಸಿಕ್ಕಿದೆ. ಇದನ್ನೆಲ್ಲ ನೋಡಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು’ ಎಂದು ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT