ಗುರುವಾರ , ಡಿಸೆಂಬರ್ 5, 2019
22 °C
ಮಲ್ಲಸಂದ್ರ ಗ್ರಾಮದ 35 ಎಕರೆ ಒತ್ತುವರಿ ಆರೋಪ

ಕಾಮಗಾರಿ ನಿರ್ಮಾಣಕ್ಕೆ ಮಧ್ಯಂತರ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಶವಂತಪುರ ಹೋಬಳಿ ಮಲ್ಲಸಂದ್ರ ಗ್ರಾಮದ ಸರ್ವೇ ನಂಬರ್ 33ರ 35 ಎಕರೆ 39 ಗುಂಟೆ ಜಮೀನಿನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಕುರಿತಂತೆ ಟಿ.ದಾಸರಹಳ್ಳಿಯ ‘ಶ್ರೀ ಮುತ್ತು ಮಾರಿಯಮ್ಮ ಪರೋಪಕಾರಿ ಟ್ರಸ್ಟ್‌’ನ ಅಧ್ಯಕ್ಷ ಎಸ್‌.ಎನ್‌.ಭಾಸ್ಕರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್‌ಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌ ಮಂಡಿಸಿದ ವಾದದ ಮುಖ್ಯಾಂಶಗಳು

* ಮಲ್ಲಸಂದ್ರ ಗ್ರಾಮವು 2014–15ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾಗಿದೆ. ಇಲ್ಲಿನ ನಾಗರಿಕ ಬಳಕೆಯ ನಿವೇಶನಗಳನ್ನು ಅತಿಕ್ರಮಿಸಲಾಗಿದೆ. ಆದರೆ, ಬಿಬಿಎಂಪಿ ತನ್ನ ಶಾಸನಬದ್ಧ ಅಧಿಕಾರ ಚಲಾಯಿಸಿ ಅತಿಕ್ರಮಣ ತಡೆಯುವ ಪ್ರಯತ್ನ ಮಾಡುತ್ತಿಲ್ಲ.

* ಗ್ರಾಮದ ಸರ್ವೇ ನಂಬರ್‌ 33ರಲ್ಲಿನ 35 ಎಕರೆ 39 ಗುಂಟೆ ಬಂಡೆ ಖರಾಬು, ಗೋಮಾಳ ಜಮೀನನ್ನು ರಾಜಕಾರಣಿಗಳು ಹಾಗೂ ರಿಯಲ್‌ ಎಸ್ಟೇಟ್‌ ಕುಳಗಳು ಅತಿಕ್ರಮಣ ಮಾಡಿದ್ದು, ರಾತ್ರೋರಾತ್ರಿ ಇಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಗಂಭೀರ ಕ್ರಮ ಕೈಗೊಂಡಿಲ್ಲ. 

* ಈ ಪ್ರದೇಶವು ಕೋಟ್ಯಂತರ ಮೌಲ್ಯ ಹೊಂದಿದೆ. ಆದ್ದರಿಂದ, ಅತಿಕ್ರಮಣ ಆರೋಪ  ಕುರಿತಂತೆ ಸಕ್ಷಮ ಪ್ರಾಧಿಕಾರದ ವಶದಲ್ಲಿರುವ ಎಲ್ಲ ದಾಖಲೆಗಳನ್ನೂ, ನ್ಯಾಯಾಲಯ ತರಿಸಿಕೊಂಡು ಪರಿಶೀಲಿಸಬೇಕು. ಅರ್ಜಿ ಇತ್ಯರ್ಥವಾಗುವ ತನಕ ಯಾರೇ ಆಗಲಿ ವಿವಾದಿತ ಸ್ಥಿರಾಸ್ತಿಯ ಸ್ವರೂಪವನ್ನು ಬದಲಾಯಿಸದಂತೆ ತಡೆ ಆದೇಶ ನೀಡಬೇಕು’ ಎಂಬುದು ಅರ್ಜಿದಾರರ ಮನವಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು