ಬೆಂಗಳೂರು: ಬಿಬಿಎಂಪಿ ಶಾಲೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳ ಪ್ರವೇಶದಲ್ಲಿ ಏರಿಕೆ ಕಂಡುಬಂದಿತ್ತು. ಆದರೆ, ಈ ವರ್ಷ ಶೇ 23ರಷ್ಟು ಕುಸಿತಗೊಂಡಿದೆ.
2022–23ನೇ ಶೈಕ್ಷಣಿಕ ವರ್ಷದಲ್ಲಿ ಬಿಬಿಎಂಪಿ ಶಾಲಾ– ಕಾಲೇಜುಗಳಲ್ಲಿ 26 ಸಾವಿರ ವಿದ್ಯಾರ್ಥಿಗಳಿದ್ದರು. ಈ ವರ್ಷ ಈ ಸಂಖ್ಯೆ 20 ಸಾವಿರಕ್ಕೆ ಇಳಿದಿದೆ.
‘ಬಿಬಿಎಂಪಿ ಶಾಲೆ–ಕಾಲೇಜುಗಳಿಗೆ ಪ್ರವೇಶ ಪಡೆಯಲು ಜುಲೈ 30ರವರೆಗೆ ಸಮಯವಿದೆ. ಹೀಗಾಗಿ, ಪ್ರವೇಶ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಉಪ ಆಯುಕ್ತ ವೆಂಕಟರಾಜು ತಿಳಿಸಿದರು.
ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಮತ್ತು ಶಿಕ್ಷಕರಿಲ್ಲದಿರುವುದು ಹೊಸ ವಿದ್ಯಾರ್ಥಿಗಳ ಪ್ರವೇಶದಲ್ಲಿ ಕುಸಿತವಾಗುತ್ತಿದೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.
‘ಹೊಸ ಪೀಠೋಪಕರಣಗಳನ್ನು ಖರೀದಿಸಬೇಕು ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ. ಕೆಲವು ಶಾಲೆಗಳಲ್ಲಿ ಹೊಸ ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇಷ್ಟಾದರೂ ಪ್ರವೇಶದಲ್ಲಿ ಹೆಚ್ಚಳ ಕಾಣುತ್ತಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.
ಶಿಕ್ಷಕರ ಕೊರತೆ ಮತ್ತೊಂದು ಸಮಸ್ಯೆಯಾಗಿದ್ದು, ಸುಮಾರು 800 ಶಿಕ್ಷಕರಿದ್ದು, ಇದರಲ್ಲಿ 640 ಶಿಕ್ಷಕರು ಹೊರಗುತ್ತಿಗೆಯಲ್ಲಿದ್ದಾರೆ. ಕಾಯಂ ಶಿಕ್ಷಕರ ನೇಮಕಕ್ಕೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕಾಯಂ ಶಿಕ್ಷಕರ ನೇಮಕ 25 ವರ್ಷದ ಹಿಂದೆ ಆಗಿತ್ತು. ಅವರಲ್ಲಿ ಬಹುತೇಕರು ನಿವೃತ್ತಿ ಅಂಚಿನಲ್ಲಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಪೋಷಕರು ಆರ್ಥಿಕ ಸಮಸ್ಯೆಯಲ್ಲಿದ್ದುದ್ದರಿಂದ ಪಾಲಿಕೆ ಶಾಲೆಗಳಿಗೆ ಮಕ್ಕಳನ್ನು ಸೇರಿಸಿದ್ದರು. ಇದೀಗ ಕೆಲವರು ಖಾಸಗಿ ಶಾಲೆಗೆ ಸೇರಿಸಿರುವುದೂ ಮಕ್ಕಳ ಒಟ್ಟಾರೆ ಸಂಖ್ಯೆ ಇಳಿಕೆಗೆ ಕಾರಣವಾಗಿದೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹೇಳಿದರು.
‘ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಟೆಂಡರ್ ಕರೆಯಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಹೀಗಾಗಿ ಪ್ರಸ್ತುತವಿರುವ ಸಿಬ್ಬಂದಿಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಕೆಲವು ಶಿಕ್ಷಕರು ಹುದ್ದೆಗೆ ಸೂಕ್ತವಾಗಿಲ್ಲ ಎಂಬುದು ಕಂಡುಬಂದಿರುವುದರಿಂದ, ಅವರನ್ನು ಬದಲಾಯಿಸಲು ಏಜೆನ್ಸಿಗೆ ತಿಳಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.