ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸಿಎಲ್‌ ಜಮೀನು ಪರಭಾರೆ: ಆರೋಪ ಪಟ್ಟಿ

Last Updated 23 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಬೆಂಗಳೂರು: ಪಿಎಸಿಎಲ್ (ಪರ್ಲ್ ಅಗ್ರೊ ಕಾರ್ಪೋರೇಶನ್ ಸಂಸ್ಥೆ) ಜಮೀನು ಪರಭಾರೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಬೆಂಗಳೂರು ಗ್ರಾಮಾಂತರ ಪೊಲೀಸರು, ಎರಡು ಕಂಪನಿ ಹಾಗೂ ಒಂಬತ್ತು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

‘1996ರಲ್ಲಿ ಆರಂಭವಾಗಿದ್ದ ಪಿಎಸಿಎಲ್‌ ಕಂಪನಿ, ಲಾಭದ ಆಮಿಷವೊಡ್ಡಿ ದೇಶದ ಹಲವು ರಾಜ್ಯಗಳಲ್ಲಿ ಸುಮಾರು ₹ 5 ಕೋಟಿ ಜನರಿಂದ ಹಣ ಪಾವತಿಸಿಕೊಂಡು ವಂಚಿಸಿತ್ತು. ಇದೇ ಹಣದಲ್ಲಿ ದೇಶದ ಹಲವೆಡೆ ಜಮೀನು ಖರೀದಿ ಮಾಡಿತ್ತು. ವಂಚನೆ ಸಂಬಂಧ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿ, ಕಂಪನಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಿತ್ತು. ಆದರೆ, ಸುಪ್ರೀಂಕೋರ್ಟ್ ಆದೇಶವಿದ್ದರೂ ಕೆಲವರು ಆಸ್ತಿಯನ್ನು ಪರಭಾರೆ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಗ್ರಾಮಾಂತರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆಸ್ತಿ ಪರಭಾರೆ ಮಾಡಿದ್ದ ಆರೋಪಿಗಳಾದ ಮಂಜುನಾಥ್, ಆಯಷ್ ತಾಪ, ಚಂದ್ರಮೋಹನ್, ಶ್ರೀನಿವಾಸ್, ಅನಿಲ್ ಕುಮಾರ್, ಪ್ರವೀಣ್ ಕುಮಾರ್, ಪೃಥ್ವಿ ಸೇರಿ ಒಂಬತ್ತು ಆರೋಪಿಗಳನ್ನು ಬಂಧಿಸ ಲಾಗಿತ್ತು. ಇದೀಗ, ಇವರೆಲ್ಲರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.‘

‘ಪ್ರಕರಣದಲ್ಲಿ ಎಂ.ಎಸ್. ವುಡ್ಸ್ ವಿಲ್ಲಾ ಪ್ರಾಜೆಕ್ಟ್ ಕಂಪನಿ ಮತ್ತು ಎಂ.ಎಸ್.ಮೆಗಾಸ್ಟ್ರಕ್ಚರ್ಸ್ ಇನ್ಪ್ರಾಕಾನ್ ಕಂಪನಿ ಪಾತ್ರವಿರುವುದು ಪುರಾವೆಗಳಿಂದ ಗೊತ್ತಾಗಿದೆ. ಎರಡೂ ಕಂಪನಿಗಳನ್ನು ಆರೋಪಿಗಳನ್ನಾಗಿ ಮಾಡಿ, ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು
ತಿಳಿಸಿವೆ.

₹15 ಕೋಟಿ ಮೌಲ್ಯದ ಆಸ್ತಿ: ‘ಜನರನ್ನು ವಂಚಿಸಿ ಗಳಿಸಿದ್ದ ಹಣದಲ್ಲಿ ಪಿಎಸಿಎಲ್‌ ಕಂಪನಿಯು ಆನೇಕಲ್ ಹಾಗೂ ಹೆಬ್ಬಗೋಡಿ ಬಳಿ ₹ 15 ಕೋಟಿ ಮೌಲ್ಯದ ಜಮೀನು ಖರೀದಿಸಿತ್ತು. ಇದೇ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದರ ನಡುವೆಯೇ ಆರೋಪಿಗಳು, ಜಮೀನು ಪರಭಾರೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.

ಅಮಾನತಾಗಿದ್ದ ಇನ್‌ಸ್ಪೆಕ್ಟರ್: ‘ಆಂತರಿಕ ಭದ್ರತಾ ವಿಭಾಗದ ಇನ್‌ಸ್ಪೆಕ್ಟರ್‌ ಬಿ.ಕೆ.ಕಿಶೋರ್‌ ಕುಮಾರ್‌ ಅವರ ಸಹೋದರ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿತ್ತು. ಸಹೋದರನಿಗೆ ಸಹಕರಿಸಿದ್ದ ಆರೋಪದಡಿ ಕಿಶೋರ್ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗೋವಾದಿಂದ ಡ್ರಗ್ಸ್ ತಂದು ಮಾರಾಟ

ಬೆಂಗಳೂರು: ಗೋವಾದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರುತ್ತಿದ್ದ ಆರೋಪಿ ಅಗ್ಬು ಚಿಕೆ ಅಂಥೋನಿ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ನೈಜೀರಿಯಾದ ಅಗ್ಬು, ವ್ಯಾಪಾರ ವೀಸಾದಡಿ ನಗರಕ್ಕೆ ಬಂದು ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ. ಈತನಿಂದ ₹ 25 ಲಕ್ಷ ಮೌಲ್ಯದ ಎಂಡಿಎಂಎ, ಮೊಬೈಲ್ ಹಾಗೂ ತೂಕದ ಯಂತ್ರ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುತ್ತಾಡುತ್ತಿದ್ದ ಆರೋಪಿ, ಗ್ರಾಹಕರಿಗೆ ಡ್ರಗ್ಸ್ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು’ ಎಂದರು.

‘ಗೋವಾದಲ್ಲಿ ನೆಲೆಸಿರುವ ಆಫ್ರಿಕಾ ಪೆಡ್ಲರ್‌ ಜೊತೆ ಒಡನಾಟ ಹೊಂದಿದ್ದ ಅಗ್ಬು, ಆತನಿಂದ ಡ್ರಗ್ಸ್ ಖರೀದಿಸುತ್ತಿದ್ದ. ಅದನ್ನು ಪಾರ್ಸೆಲ್ ಮೂಲಕ ನಗರಕ್ಕೆ ತರಿಸುತ್ತಿದ್ದ. ನಂತರ, ಚಿಕ್ಕ ಪೊಟ್ಟಣಗಳಲ್ಲಿ ಡ್ರಗ್ಸ್ ತುಂಬಿ ಮಾರುತ್ತಿದ್ದ. ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಕಂಪನಿ ಉದ್ಯೋಗಿಗಳು ಹಾಗೂ ಇತರರು, ಆರೋಪಿ ಬಳಿ ಡ್ರಗ್ಸ್ ಖರೀದಿಸುತ್ತಿದ್ದರು.’

‘ಆರೋಪಿ ಅಗ್ಬು ವಿರುದ್ಧ ಕೆ.ಜಿ.ಹಳ್ಳಿ ಠಾಣೆಯಲ್ಲಿ ಇದೇ ನವೆಂಬರ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ನಂತರವೂ ಆರೋಪಿ ಡ್ರಗ್ಸ್ ಮಾರಾಟ ಮುಂದುವರಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT