ಲಂಚಕೊಟ್ಟರೆ ಬೆಳಕಿನ ವೇಗದಲ್ಲಿ ಕೆಲಸ!

7
ನಗರ ಜಿಲ್ಲಾಧಿಕಾರಿ ಕಾರ್ಯವೈಖರಿಗೆ ಹೈಕೋರ್ಟ್ ಆಸಮಾಧಾನ

ಲಂಚಕೊಟ್ಟರೆ ಬೆಳಕಿನ ವೇಗದಲ್ಲಿ ಕೆಲಸ!

Published:
Updated:

ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ಲಕ್ಷಗಟ್ಟಲೆ ಲಂಚ ಕೊಟ್ಟರೆ ಬೆಳಕಿನ ವೇಗವನ್ನೂ ಮೀರಿ ಕೆಲಸ ಮಾಡುತ್ತಾರೆ. ಇಲ್ಲದೇ ಹೋದರೆ ಅವರಿಗೆ ಕೆಲಸ ಮಾಡಬೇಕು ಎನಿಸುವುದೇ ಇಲ್ಲ...!

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರನ್ನು ಹೈಕೋರ್ಟ್ ಸೋಮವಾರ ತರಾಟೆಗೆ ತೆಗೆದುಕೊಂಡ ಪರಿಯಿದು.

‘ಸ್ಮಶಾನಕ್ಕೆ ವಶಪಡಿಸಿಕೊಂಡ ಜಮೀನಿಗೆ ಪರ್ಯಾಯ ಜಮೀನು ಕೊಡುವಂತೆ ಹೈಕೋರ್ಟ್‌ ಆದೇಶ ಪಾಲನೆ ಮಾಡಿಲ್ಲ’ ಎಂಬ ಆರೋಪದಡಿ ನ್ಯಾಯಾಂಗ ನಿಂದನೆ ಮೊಕದ್ದಮೆ
ಯಲ್ಲಿ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ದಯಾನಂದ ಅವರನ್ನು ನ್ಯಾಯಮೂರ್ತಿ ಆರ್.ಎಸ್.ಚೌಹಾಣ್ ಮತ್ತು ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿತು.

‘ಒಂದು ವರ್ಷ ಕಳೆದರೂ ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದರೆ ಏನರ್ಥ’ ಎಂದು ದಯಾನಂದ ಅವರನ್ನು ಖಾರವಾಗಿ ಪ್ರಶ್ನಿಸಿದ ನ್ಯಾಯಮೂರ್ತಿ ಚೌಹಾಣ್‌, ‘ಮಂಗಳವಾರ (ಜೂ.26) ಅರ್ಜಿದಾರರ ಜೊತೆ ಖುದ್ದು ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಿ’ ಎಂದು ಸೂಚಿಸಿದರು.

‘ಕೋರ್ಟ್‌ ಆದೇಶ ಪಾಲಿಸಲು ಸಾಧ್ಯವಾಗಿಲ್ಲ ಎಂದು ಏನಾದರೂ ಸಬೂಬು ಹೇಳಿದರೆ ಕೋರ್ಟ್‌ ಕೇಳುವುದಿಲ್ಲ. ನೀವು ಏನು ಮಾಡುತ್ತೀರೊ ಗೊತ್ತಿಲ್ಲ. ಆದರೆ, ಕೋರ್ಟ್ ಆದೇಶಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ’ ಎಂದು ಎಚ್ಚರಿಕೆ ನೀಡಿದರು.

ಸಿಂಪಲ್ ಇಂಗ್ಲಿಷ್‌ ಬರೋದಿಲ್ವೇ?: ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾನಂದ ಸಲ್ಲಿಸಿದ ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಮೂರ್ತಿಗಳು, ‘ಏನ್ರೀ, ನಿಮಗೆ ಸಿಂಪಲ್ ಇಂಗ್ಲಿಷ್‌ ಕೂಡಾ ಬರೋದಿಲ್ವೇ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಷ್ಟು ವರ್ಷಗಳಿಂದ ಸರ್ಕಾರಿ ಕೆಲಸ ಮಾಡುತ್ತಿದ್ದೀರಿ, ಯಾವ ಬ್ಯಾಚ್‌ನವರು ನೀವು, ಇದರಲ್ಲಿ ನೀಡಿರುವ ಮಾಹಿತಿ ಅಪೂರ್ಣವಾಗಿದೆ’ ಎಂದು ಅತೃಪ್ತಿ ಹೊರ ಹಾಕಿದರು.

‘ಚುನಾವಣೆಯ ಕಾರಣ ಆದೇಶ ಪಾಲನೆಯಲ್ಲಿ ವಿಳಂಬವಾಗಿದೆ’ ಎಂಬ ದಯಾನಂದ ಉತ್ತರಕ್ಕೆ ಇನ್ನಷ್ಟು ವ್ಯಗ್ರರಾದ ನ್ಯಾಯಮೂರ್ತಿಗಳು, ’ಒಂದು ವೇಳೆ ಬೆಂಗಳೂರಿಗೆ ಉಗ್ರರು ದಾಳಿ ಇಟ್ಟರೆ ಕೈಕಟ್ಟಿ ಕುಳಿತು
ಕೊಳ್ಳುತ್ತೀರಾ’ ಎಂದು ಪ್ರಶ್ನಿಸಿದರು.

‘ಚುನಾವಣೆ ಇದೆ ಎಂದು ಊಟ ತಿಂಡಿ ಮಾಡುವುದಿಲ್ಲವೇ, ಮುಖ್ಯಮಂತ್ರಿ ಆದೇಶ ಪಾಲನೆ ಮಾಡುವುದಿಲ್ಲವೇ, ಜನರು ನಿಮ್ಮ ಬಳಿ ಬಂದು ಬೇಡಿಕೊಳ್ಳಬೇಕೆ’ ಎಂದು
ಕಿಡಿ ಕಾರಿದರು.

ಬರಹ ಇಷ್ಟವಾಯಿತೆ?

 • 32

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !