ಶುಕ್ರವಾರ, ಮಾರ್ಚ್ 5, 2021
29 °C

ಸಂಘಟನೆ ಹೆಸರಲ್ಲಿ ಸುಲಿಗೆಗೆ ಯತ್ನ: ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ₹ 50 ಸಾವಿರ ಕೊಡದಿದ್ದರೆ ಕಾರ್ಖಾನೆಗೆ ಬೆಂಕಿ ಹಚ್ಚುವುದಾಗಿ ಕಾರ್ಖಾನೆ ಮಾಲೀಕನಿಗೆ ಬೆದರಿಕೆ ಹಾಕಿದ್ದ ಆರೋಪದಡಿ ‘ಕರ್ನಾಟಕ ಪ್ರಜಾ ಶಕ್ತಿ ಸಮಿತಿ’ಯ ಮೂವರು ಕಾರ್ಯಕರ್ತರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ನಾಗಮಂಗಲದ ಎಸ್.ಎಚ್‌.ಚಂದನ್, ಗಗನ್‌ಗೌಡ ಹಾಗೂ ಮದ್ದೂರಿನ ಬಸವರಾಜ್ ಎಂಬುವರನ್ನು ಬಂಧಿಸಲಾಗಿದೆ. ಕೆಂಪರಾಜು, ವಿಕ್ರಮ್, ಗೋಪಿ ಹಾಗೂ ರಂಗರಾಜು ಎಂಬುವರು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಇವರ ವಿರುದ್ಧ ಉಮೇಶ್‌ಕುಮಾರ್ ಅಗರ್‌ವಾಲ್ ಎಂಬುವರು ದೂರು ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪ್ಲಾಸ್ಟಿಕ್ ನಿಷೇಧದ ನೆಪ: ‘ಕಾಮಾಕ್ಷಿಪಾಳ್ಯದ ಪೇಟೆಚನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ಐದು ವರ್ಷಗಳಿಂದ ‘ಭಾರತ್ ಮೋನೊ ಫಿಲೋಮೆಂಟ್ ಟೆಕ್ಸ್‌ಟೈಲ್ಸ್‌’ ಹಾಗೂ ‘ಶುಭ ಇಂಟರ್‌ನ್ಯಾಷನಲ್ಸ್‌’ ಹೆಸರಿನ ಕಾರ್ಖಾನೆಗಳನ್ನು ನಡೆಸುತ್ತಿದ್ದೇನೆ. ಅಲ್ಲಿ ಮೊಸರಿನ ಕಪ್‌ ತಯಾರಿಕೆ ಹಾಗೂ ಸಸಿ ಬೆಳೆಸುವ ಪ್ಲಾಸ್ಟಿಕ್‌ ಕುಂಡಗಳನ್ನು ತಯಾರಿಸುತ್ತೇವೆ’ ಎಂದು ಅಗರ್‌ವಾಲ್ ಹೇಳಿದರು.

‘ಆ.28ರಂದು ಕಾರ್ಖಾನೆ ಬಳಿ ಬಂದಿದ್ದ ಏಳು ಮಂದಿ ಅಪರಿಚಿತರು, ‘‘ನಾವು ಕರ್ನಾಟಕ ಪ್ರಜಾಶಕ್ತಿ ಸಮಿತಿಯವರು. ಪ್ಲಾಸ್ಟಿಕ್ ಉತ್ಪನ್ನ ತಯಾರಿಸಲು ನಿನ್ನ ಬಳಿ ಪರವಾನಗಿ ಇದೆಯೇ? ಎರಡು ದಿನ ಬಿಟ್ಟು ಬರುತ್ತೇವೆ. ಸೆಟ್ಲಮೆಂಟ್ ಮಾಡಿಕೊಂಡು ಬಿಡು. ಇಲ್ಲದಿದ್ದರೆ ಒಂದು ಗತಿ ಕಾಣಿಸುತ್ತೇವೆ’’ ಎಂದು ಬೆದರಿಸಿ ಹೋಗಿದ್ದರು. ಆ.30ರ ಸಂಜೆ 5 ಗಂಟೆ ಸುಮಾರಿಗೆ ಎಸ್‌ಯುವಿಯಲ್ಲಿ ಪುನಃ ಬಂದ ಅವರು, ಕಾರ್ಖಾನೆಗೆ ನುಗ್ಗಿ ದಾಂದಲೆ ಶುರು ಮಾಡಿದರು. ₹ 50 ಸಾವಿರ ಕೊಡದಿದ್ದರೆ ಕಾರ್ಖಾನೆಗಳನ್ನು ಮುಚ್ಚಿಸಿ ಬೆಂಕಿ ಹಚ್ಚುವುದಾಗಿ ಬೆದರಿಸಿದರು. ಆ ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದೆ. ತಕ್ಷಣ ಸ್ಥಳಕ್ಕೆ ಬಂದ ಇನ್‌ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡ ಮೂವರನ್ನೂ ಬಂಧಿಸಿತು. ಅವರನ್ನು ನೋಡುತ್ತಿದ್ದಂತೆಯೇ ನಾಲ್ವರು ಓಡಿ ಹೋದರು’ ಎಂದು ಅಗರ್‌ವಾಲ್ ಮಾಹಿತಿ ನೀಡಿದರು. 

ಅದೇ ದಿನ ಕೊಲೆ ನಡೆದಿತ್ತು: ಪೇಟೆಚೆನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿ ಅದೇ ದಿನ ಯುವಕನ ಹತ್ಯೆ ನಡೆದಿತ್ತು. ಯಾರೋ ಆತನನ್ನು ಕೊಂದು, ಶವ ಸುಟ್ಟು ಹಾಕಿದ್ದರು. ಆ ಸ್ಥಳದಿಂದ 300 ಮೀಟರ್ ದೂರದಲ್ಲೇ ಅಗರ್‌ವಾಲ್ ಅವರ ಕಾರ್ಖಾನೆಗಳಿವೆ.

ಪೊಲೀಸರು ಸಂಜೆ ಕೊಲೆ ಪ್ರಕರಣದ ತನಿಖೆಗಾಗಿ ಆ ಸ್ಥಳಕ್ಕೆ ತೆರಳಿದ್ದರು. ಅದೇ ವೇಳೆ ಸುಲಿಗೆಕೋರರು ಕಾರ್ಖಾನೆಗೆ ನುಗ್ಗಿರುವುದಾಗಿ ಅವರಿಗೆ ಕರೆ ಬಂದಿತ್ತು. ಹೀಗಾಗಿ, ಎರಡೇ ನಿಮಿಷಗಳಲ್ಲಿ ಕಾರ್ಖಾನೆ ಬಳಿ ತೆರಳಿ ಮೂವರನ್ನು ಹಿಡಿದುಕೊಂಡರು.  
**
‘ಠಾಣೆಗೆ ದೂರು ಕೊಡಬೇಕಿತ್ತು’
‘ಅಗರ್‌ವಾಲ್ ಅವರು ಕಾನೂನುಬಾಹಿರವಾಗಿ ಕಾರ್ಖಾನೆಗಳನ್ನು ನಡೆಸುತ್ತಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಸಂಘಟನೆ ವಿರುದ್ಧ ಸುಳ್ಳು ದೂರು ಕೊಟ್ಟಿದ್ದಾರೆ’ ಎಂದು ಬಂಧಿತರು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಅವರು ಮಾಲೀಕರಿಂದ ಹಣ ಕೇಳಿರುವುದಕ್ಕೆ ಸಾಕ್ಷ್ಯ ದೊರೆತಿದೆ. ಅಕ್ರಮ ನಡೆಯುತ್ತಿದ್ದರೆ ಬಿಬಿಎಂಪಿಗೆ ಅಥವಾ ಪೊಲೀಸ್ ಠಾಣೆಗೆ ದೂರು ಕೊಡಬಹುದಿತ್ತು. ಖುದ್ದು ಕಾರ್ಯಾಚರಣೆ ನಡೆಸಲು ಯಾವ ಸಂಘಟನೆಗೂ ಅಧಿಕಾರವಿಲ್ಲ ಎಂದು ಪೊಲೀಸರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.