ಸೋಮವಾರ, ಮಾರ್ಚ್ 8, 2021
24 °C

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಅಟ್ಟಹಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರಿದಿದ್ದು, ಶನಿವಾರ ಮೂರು ತಾಸುಗಳ ಅಂತರದಲ್ಲೇ ನಾಲ್ಕು ಕಡೆ ಚಿನ್ನದ ಸರಗಳನ್ನು ದೋಚಿದ್ದಾರೆ. ಇನ್ನಿಬ್ಬರು ಮಹಿಳೆಯರು ತಮ್ಮ ಸಮಯಪ್ರಜ್ಞೆಯಿಂದ ಸರ ಉಳಿಸಿಕೊಂಡಿದ್ದಾರೆ.‌

ಸರಣಿ ಕೃತ್ಯದ ನಂತರ ಎಚ್ಚೆತ್ತುಕೊಂಡ ಪೊಲೀಸರು, ನಗರದೆಲ್ಲೆಡೆ ನಾಕಾಬಂದಿ ಹಾಕಿಕೊಂಡು ಸರಗಳ್ಳರ ಪತ್ತೆಗೆ ಕಾರ್ಯಾಚರಣೆ ಶುರು ಮಾಡಿದ್ದಾರೆ.

ಮತ್ತೊಂದೆಡೆ ಸರಗಳ್ಳರ ಬಗೆಗಿನ ಜನ ಜಾಗೃತಿ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ನಿರ್ಧರಿಸಿರುವ ಅಧಿಕಾರಿಗಳು, ಮನೆ ಬಾಗಿಲಿಗೆ ಹೋಗಿ ಮಹಿಳೆಯರಿಗೆ ಅರಿವು ಮೂಡಿಸಲು ಸಿಬ್ಬಂದಿಗೆ ಸೂಚಿಸಿದ್ದಾರೆ.

ಬೆಳಿಗ್ಗೆ 10.30: ರಾಮಮೂರ್ತಿನಗರದ ಕಸ್ತೂರಿನಗರ ನಿವಾಸಿ ಮಹಾಲಕ್ಷ್ಮಿ (44) ಮನೆ ಸಮೀಪದ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಕಪ್ಪು ಬಣ್ಣದ ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು, 40 ಗ್ರಾಂನ ಸರ ಕಿತ್ತುಕೊಂಡು ಹೋಗಿದ್ದಾರೆ.

11.58: ವಿಳಾಸ ಕೇಳುವ ನೆಪದಲ್ಲಿ ರುಕ್ಮಿಣಿ (40) ಎಂಬುವರ ಬಳಿ ತೆರಳಿದ ಇಬ್ಬರು ಕಿಡಿಗೇಡಿಗಳು, 8 ಗ್ರಾಂನ ಸರ ಕೀಳಲು ಯತ್ನಿಸಿದ್ದಾರೆ. ಸದಾಶಿವನಗರ ಠಾಣೆ ವ್ಯಾಪ್ತಿಯ ಅಶ್ವತ್ಥನಗರದಲ್ಲಿ ಈ ಘಟನೆ ನಡೆದಿದೆ.

ಮನೆಗೆಲಸಕ್ಕೆಂದು ಅಶ್ವತ್ಥನಗರಕ್ಕೆ ಬಂದಿದ್ದ ರುಕ್ಮಿಣಿ, ಕೆಲಸ ಮುಗಿಸಿಕೊಂಡು ಸಮೀಪದ ಬಸ್ ನಿಲ್ದಾಣಕ್ಕೆ ನಡೆದು ಹೋಗುತ್ತಿದ್ದರು. ಅಪರಿಚಿತರು ತಮ್ಮ ಬಳಿ ಬರುತ್ತಿದ್ದಂತೆಯೇ ಎಚ್ಚೆತ್ತ ಅವರು, ಸರವನ್ನು ಬಿಗಿಯಾಗಿ ಹಿಡಿದುಕೊಂಡೇ ಮಾತು ಮುಂದುವರಿಸಿದ್ದರು. ಕಿಡಿಗೇಡಿಗಳು ಸರಕ್ಕೆ ಕೈಹಾಕಲು ಮುಂದಾದಾಗ ರುಕ್ಮಿಣಿ ಚೀರಿಕೊಂಡಿದ್ದು, ಸ್ಥಳೀಯರು ರಕ್ಷಣೆಗೆ ಧಾವಿಸುತ್ತಿದ್ದಂತೆಯೇ ಅವರು ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದಾರೆ.

12.32: ಸಂಜಯ್‌ನಗರದ ಆರ್‌ಎಂವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದ ತನುಜಾ (70) ಎಂಬುವರ 15 ಗ್ರಾಂನ ಸರ ದೋಚಿದ್ದಾರೆ. ತನುಜಾ ಪೋಸ್ಟಲ್ ಕಾಲೊನಿ ನಿವಾಸಿ. ಮನೆ ಸಮೀಪವೇ ಈ ಕೃತ್ಯ ನಡೆದಿದೆ.

12.33: ತನುಜಾ ಅವರ ಸರ ಕಿತ್ತುಕೊಂಡು ಬೈಕ್‌ನಲ್ಲಿ ರಸ್ತೆ ಕೊನೆಗೆ ಬಂದ ಕಿಡಿಗೇಡಿಗಳು, ಅಲ್ಲಿ ಎದುರಾದ ನಂದಿನಿ (70) ಎಂಬುವರ ಸರಕ್ಕೂ ಕೈಹಾಕಿದ್ದಾರೆ. ಆದರೆ, ಅವರು ಬಿಗಿಯಾಗಿ ಹಿಡಿದುಕೊಂಡಿದ್ದ ಸರ ತುಂಡಾಗಿ ಕೆಳಗೆ ಬಿದ್ದಿದೆ. ಎರಡೂ ಕೃತ್ಯಗಳು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ಸುಳಿವು ಆಧರಿಸಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

12.45: ಆರ್‌.ಟಿ.ನಗರದ ತರಳಬಾಳು ಮುಖ್ಯರಸ್ತೆಯಲ್ಲಿ ಪ್ರಿಯಾ (45) ಎಂಬುವರ 40 ಗ್ರಾಂನ ಸರ ಕಳವಾಗಿದೆ.

ಹೆಬ್ಬಾಳದ ಚೋಳನಗರ‌ದ ಪ್ರಿಯಾ, ಆರ್‌.ಟಿ.ನಗರದ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಊಟ ಪಾರ್ಸಲ್ ತರಲು ಆಸ್ಪತ್ರೆಯಿಂದ ಹೋಟೆಲ್‌ಗೆ ಹೋಗುತ್ತಿದ್ದಾಗ ಈ ಕೃತ್ಯ ನಡೆದಿದೆ.

1.15: ತರಕಾರಿ ತರಲು ಬಾಣಸವಾಡಿ ಮುಖ್ಯರಸ್ತೆಯ ಮಾರ್ಕೆಟ್‌ಗೆ ಹೋಗುತ್ತಿದ್ದ ಪ್ರಿಯಂವದಾ ಅವರನ್ನು ವಿಳಾಸ ಕೇಳುವ ಸೋಗಿನಲ್ಲಿ ಅಡ್ಡಗಟ್ಟಿದ ಸರಗಳ್ಳರು, 46 ಗ್ರಾಂನ ಸರ ಕಿತ್ತುಕೊಂಡು ಹೋಗಿದ್ದಾರೆ. 
**
ಎರಡು ತಂಡಗಳಾಗಿ ಕೃತ್ಯ

‘ಆರ್‌.ಟಿ.ನಗರ ಹಾಗೂ ಸಂಜಯ್‌ನಗರದಲ್ಲಿ ನಡೆದ ಪ್ರಕರಣದಲ್ಲಿ ದುಷ್ಕರ್ಮಿಗಳು ಸ್ಕೂಟರ್‌ನಲ್ಲಿ ಬಂದಿದ್ದಾರೆ. ಉಳಿದ ಮೂರು ಕಡೆ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ ಬಳಕೆಯಾಗಿದೆ. ಒಂದೇ ಗ್ಯಾಂಗ್‌ನ ಸದಸ್ಯರು ಎರಡು ಕಡೆ ಕಾರ್ಯಾಚರಣೆ ನಡೆಸಿರುವ ಸಾಧ್ಯತೆ ಇದೆ. ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  
**
2018ರಲ್ಲಿ ವರದಿಯಾದ ಸರಗಳವು ಪ್ರಕರಣ

ತಿಂಗಳು- ಪ್ರಕರಣ

ಜನವರಿ‌‌;  24

ಫೆಬ್ರುವರಿ;  18

ಮಾರ್ಚ್‌;  22

ಏಪ್ರಿಲ್;   36

ಮೇ;       28

ಜೂನ್;    38

ಜುಲೈ;    22

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು