ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಪಾರ್ಕ್‌ ಮತ್ಸ್ಯಾಲಯಕ್ಕೆ ಆಧುನಿಕ ಸ್ಪರ್ಶ

ಅಂತರರಾಷ್ಟ್ರೀಯ ಮಟ್ಟದ ಟನೆಲ್‌ ಅಕ್ವೇರಿಯಂ ನಿರ್ಮಾಣಕ್ಕೆ ಯೋಜನೆ
Last Updated 6 ಜುಲೈ 2022, 4:43 IST
ಅಕ್ಷರ ಗಾತ್ರ

ಬೆಂಗಳೂರು: ವಾಯುವಿಹಾರಿಗಳ ಹಾಗೂ ವೀಕ್ಷಕರ ಸ್ವರ್ಗದಂತಿರುವ ಕಬ್ಬನ್‌ ಪಾರ್ಕ್‌ನಲ್ಲಿರುವ ಮತ್ಸ್ಯಾಲಯಕ್ಕೆ ಮೀನುಗಾರಿಕೆ ಇಲಾಖೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿದೆ.

ಇಲಾಖೆಗೆ ಸೇರಿದ್ದ ಮತ್ಸ್ಯಾಲಯವಿದ್ದರೂ ಹೊಸತನ ಇಲ್ಲದಿದ್ದರಿಂದ ಅದು ವೀಕ್ಷಕರ ಕೊರತೆ ಎದುರಿಸುತ್ತಿತ್ತು. ಮತ್ಸ್ಯಾಲಯಕ್ಕೆ ಮತ್ತೆ ಜೀವಕಳೆ ತರಲು ಇಲಾಖೆ ಯೋಜನೆ ರೂಪಿಸಿದೆ.

ವಿಭಿನ್ನ ಹಾಗೂ ವಿಶೇಷ ತಳಿಯ ಮೀನುಗಳು ಮತ್ಸ್ಯಾಲಯದಲ್ಲಿ ಇರಲಿಲ್ಲ. ಮತ್ಸ್ಯಾಲಯಕ್ಕೆ ಆಧುನಿಕ ಸ್ಪರ್ಶ ನೀಡಿ ಕರಾವಳಿ ಹಾಗೂ ಒಳನಾಡಿನಲ್ಲಿ ಸಿಗುವ ಆಲಂಕಾರಿಕ ಮೀನುಗಳನ್ನು ಅಕ್ವೇರಿಯಂನಲ್ಲಿ ಇಟ್ಟು ಪ್ರವಾಸಿಗರು, ಮಕ್ಕಳನ್ನು ತನ್ನತ್ತ ಸೆಳೆಯುವ ಯೋಜನೆ ಇದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಹಳೇ ಕಟ್ಟಡವನ್ನೇ ಉಳಿಸಿಕೊಂಡು ಸಾರ್ವಜನಿಕ ಸಹಭಾಗಿತ್ವದಲ್ಲಿ ಆಧುನೀಕರಣಕ್ಕೆ ಚಾಲನೆ ನೀಡಲಾಗಿದೆ. 1983ರಲ್ಲಿ ಈ ಮತ್ಸ್ಯಾಲಯ ಆರಂಭವಾಗಿತ್ತು. ಸ್ಥಳೀಯ ಹಾಗೂ ವಿದೇಶದ 70 ಜಾತಿಯ ಆಲಂಕಾರಿಕ ಮೀನುಗಳನ್ನಷ್ಟೆ ಪ್ರದರ್ಶಿಸಲಾಗುತ್ತಿತ್ತು. ಆಧುನಿಕ ಅಕ್ವೇರಿಯಂನಲ್ಲಿ ಹೆಚ್ಚಿನ ತಳಿಗಳ ಪ್ರದರ್ಶನಕ್ಕೆಅವಕಾಶ ಲಭಿಸಲಿದೆ.

ಮೀನಿಗೂ ತನ್ನದೇ ಸೌಂದರ್ಯವಿದೆ. ಬರೀ ಆದಾಯ ಗಳಿಕೆ ಮಾತ್ರವಲ್ಲದೆ ಮಕ್ಕಳು ಹಾಗೂ ಸಾರ್ವಜನಿಕರಿಗೆ ಆಲಂಕಾರಿಕ ಮೀನುಗಳ ಮಾಹಿತಿ ತಿಳಿಸುವ ಉದ್ದೇಶವೂ ಈ ಯೋಜನೆಗೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಕಾಮಗಾರಿ ಪೂರ್ಣಗೊಂಡರೆ ರಾಜ್ಯದಲ್ಲಿ ಮೊದಲ ಅಂತರರಾಷ್ಟ್ರೀಯ ಮಟ್ಟದ ಟನೆಲ್‌ ಅಕ್ವೇರಿಯಂ ಇದಾಗಲಿದೆ. 1 ಲಕ್ಷ ಲೀಟರ್‌ ಸಾಮರ್ಥ್ಯದ ಜಪಾನ್ ಕೋಯಿ ಫಿಶ್‌ಗಳ ಕೊಳ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ಸುರಂಗ ಅಕ್ವೇರಿಯಂ, ಕ್ವಾರಂಟೈನ್‌ ಘಟಕ, ಕೆಫೆ ಹಾಗೂ ಅಕ್ವೇರಿಯಂ ಮೀನು ಮಳಿಗೆ ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಹೊಸ ಕಟ್ಟಡದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಸಹ ಇರಲಿದೆ. ಎಲ್ಲವೂ ಆಧುನಿಕ ವ್ಯವಸ್ಥೆಯಿಂದ ಕೂಡಿರಲಿದೆ ಎಂಬುದು ಅಧಿಕಾರಿಗಳ ಮಾಹಿತಿ.

ಭಾರತೀಯರು ಹೆಚ್ಚಾಗಿ ಸಿಂಗಾಪುರ, ತೈವಾನ್‌, ಮಲೇಷ್ಯಾ ಸೇರಿದಂತೆ ವಿವಿಧ ದೇಶಗಳಿಗೆ ಅಕ್ವೇರಿಯಂ ವೀಕ್ಷಣೆಗೆ ತೆರಳುತ್ತಾರೆ. ಮುಂದಿನ ದಿನಗಳಲ್ಲಿ ಅಂತಹದ್ದೇ ವಾತಾವರಣವನ್ನು ಬೆಂಗಳೂರಿನಲ್ಲಿಯೇ ನೋಡಲು ಸಾಧ್ಯವಾಗಲಿದೆ. ಆಲಂಕಾರಿಕ ಮೀನುಗಳ ಕೆಲವು ತಳಿಗಳು ಕಣ್ಮರೆಯಾಗುತ್ತಿದ್ದು, ಅವುಗಳ ರಕ್ಷಣೆಗೂ ಇಲಾಖೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT