ಬೆಂಗಳೂರು: ತಾವರೆಕೆರೆ ಹೋಬಳಿಯ ಸೂಲಿವಾರ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅಧಿಕೃತ ಗಣಿಗಾರಿಕೆಯಾಗಿದ್ದರೆ, ಜನರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮಗಳನ್ನು ವಹಿಸಲು ಸೂಚಿಸಲಾಗುವುದು, ಅನಧಿಕೃತವಾಗಿದ್ದರೆ ಮುಚ್ಚಿಸಲಾಗುವುದು...

ಭೂ ಒತ್ತುವರಿ, ಪೋಡಿ, ಪೌತಿ ಖಾತೆ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ನೀಡಿದ ಭರವಸೆ ಇದು. ಸುಮಾರು ಒಂದೂವರೆ ತಾಸು ಎಡೆಬಿಡದೆ ಕರೆಗಳು ಬಂದವು. ‘ಸೂಲಿವಾರ ಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆ’ಗಳ ಬಗ್ಗೆಯೇ ಹೆಚ್ಚು ಮಂದಿ ಕರೆ ಮಾಡಿದರು.

ಸೂಲಿವಾರದ ಸರ್ವೆ ನಂಬರ್ 60ರಲ್ಲಿ 5 ಎಕರೆ ಆಟದ ಮೈದಾನ, 2 ಎಕರೆ ಸ್ಮಶಾನ, 10 ಎಕರೆ ಬಿಎಂಟಿಸಿಗೆ ಮಂಜೂರಾದ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ದೂಳಿನಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ. 10ಕ್ಕೂ ಹೆಚ್ಚು ಮಂದಿ ಉಸಿರಾಟದ ಕಾರಣದಿಂದ ಮೃತಪಟ್ಟಿದ್ದು, ಅದಕ್ಕೆ ಕಲ್ಲು ಗಣಿಗಾರಿಕೆಯೇ ಕಾರಣ. ದೂಳು ಸೇವಿಸಿ ಕುರಿ, ಮೇಕೆ, ಹಸುಗಳೂ ಮೃತಪಟ್ಟಿವೆ. ಬೆಳೆ ಹಾನಿಗೆ ಪರಿಹಾರ ನೀಡಿಲ್ಲ ಎಂದು ಸ್ಥಳೀಯರಾದ ಭರತ್, ಕೃಷ್ಣೇಗೌಡ, ಮಾರಪ್ಪ, ರಾಜು, ಅರುಣ್ ಕುಮಾರ್, ಯೋಗೀಶ್ ಸಹಿತ ಅನೇಕರು ಸಮಸ್ಯೆ ಮುಂದಿಟ್ಟರು. ‘ರೈತರು ಬೇಕಾ ಬಂಡೆ ಬೇಕಾ’ ಎಂದು ಪ್ರಶ್ನಿಸಿದರು.

‘ರೈತರೂ ಬೇಕು. ಬಂಡೆಯೂ ಬೇಕು. ರೈತರಿಲ್ಲದೇ ಕೃಷಿ ಇಲ್ಲ. ಅದೇ ರೀತಿ ಕಲ್ಲು, ಜಲ್ಲಿ ಇಲ್ಲದೇ ರಸ್ತೆ ಆಗಲ್ಲ, ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕಾನೂನುಬದ್ಧವಾಗಿ ಗಣಿಗಾರಿಕೆ ಮಾಡಬೇಕಾಗುತ್ತದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರೊಂದಿಗೆ ಮಾತನಾಡುತ್ತೇನೆ. ಮಂಗಳವಾರವೇ ಪರಿಶೀಲನೆ ಮಾಡಲು ಹೇಳುತ್ತೇನೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅದೇ ವಿಷಯಕ್ಕೆ ಬೇರೆ ಬೇರೆ ಕರೆಗಳು ಬರತೊಡಗಿದಾಗ, ‘ನಾನೇ ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು.

ಅಂಗವಿಕಲರ ಜಮೀನು ಸಮಸ್ಯೆ: ‘ರಾಮೋಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಎಕರೆ ಜಮೀನನ್ನು ಸರ್ಕಾರವು 230 ಅಂಗವಿಕಲರಿಗೆ ಹಂಚಿಕೆ ಮಾಡಿತ್ತು. ಈಗ ಬಿಡಿಎಗೆ ಮಂಜೂರಾಗಿದೆ ಎಂದು ಬಿಡಿಎ ತಕರಾರು ತೆಗೆದಿದೆ. ಈ ಬಗ್ಗೆ ನಿಮಗೆ ದೂರು ನೀಡಿದಾಗ ಪರಿಶೀಲಿಸಲು ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚನೆ ನೀಡಿದ್ದೀರಿ. ಆ ನಂತರ ಯಾವುದೇ ಕಾರ್ಯವಾಗಿಲ್ಲ. ನ್ಯಾಯಾಲಯದಿಂದ ನಾವು ತಡೆಯಾಜ್ಞೆಯನ್ನು ತಂದಿದ್ದೇವೆ. ಅಂಗವಿಕಲರಿಗೆ ನ್ಯಾಯ ಕೊಡಿಸಿ’ ಎಂದು ಪ್ರಭುಶಂಕರ ಗೌಡ ಕೆಂಗೇರಿ, ಗಂಗಾಧರ ಎಂ. ಸುಂಕದಕಟ್ಟೆ, ಗಂಗಾಧರ ಚಲ್ಲಘಟ್ಟ ಇನ್ನಿತರರು ತಿಳಿಸಿದರು.

‘ದಾಖಲೆಗಳನ್ನು ತೆಗೆದುಕೊಂಡು ಬನ್ನಿ. ನಿಮಗೆ ಮೊದಲೇ ಮಂಜೂರಾಗಿದ್ದರೆ, ಆ ಜಮೀನನ್ನು ಬೇರೆ ವ್ಯಕ್ತಿ ಅಥವಾ ಇಲಾಖೆ, ಪ್ರಾಧಿಕಾರಗಳಿಗೆ ನೀಡಲು ಸಾಧ್ಯವಿಲ್ಲ. ಬಿಡಿಎ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ನ್ಯಾಯಾಲಯದಲ್ಲಿ ಇರುವ ಪ್ರಕರಣ ಏನು ಎಂಬುದನ್ನೂ ನೋಡುತ್ತೇನೆ’ ಎಂದು ಜಗದೀಶ್ ಉತ್ತರಿಸಿದರು.

ಕೆರೆ ಅತಿಕ್ರಮಣ, ಸರ್ಕಾರಿ ಭೂಮಿ ಒತ್ತುವರಿ, ಸ್ಮಶಾನ ಭೂಮಿ ಒತ್ತುವರಿ, ರಾಜಕಾಲುವೆ ಒತ್ತುವರಿ, ಪೌತಿ ಆಗದೇ ಇರುವುದು, 94ಸಿಸಿ ಹಕ್ಕುಪತ್ರ ಸಿಗದಿರುವುದು, ಇನಾಂ ಭೂಮಿಯ ಪಹಣಿಯಲ್ಲಿ ಮೂಲ ಖಾತೆ ದಾಖಲಾಗಿರುವುದು, ಇ–ಖಾತೆ ಆಗದಿರುವುದು, ಪೋಡಿ ತಪ್ಪಾಗಿರುವುದು, ಪಿಂಚಣಿ ಬಾರದೇ ಇರುವುದು, ಅಧಿಕಾರಿಗಳೇ ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿರುವುದು, ಬೇರೆಡೆಗೆ ಸ್ಥಳಾಂತರಗೊಂಡಾಗ ಮತದಾನದ ಚೀಟಿಯಲ್ಲಿ ಬದಲಾವಣೆ ಆಗದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ಸಲಹೆ, ಪರಿಹಾರೋಪಾಯಗಳನ್ನು ಪಡೆದರು.

ಎಷ್ಟೇ ಪ್ರಭಾವಿಯಾದರೂ ಹೆದರುವ ಪ್ರಶ್ನೆಯೇ ಇಲ್ಲ

‘ಜಿಲ್ಲಾಧಿಕಾರಿಯಾಗಿ ಬಂದಮೇಲೆ ಸರ್ಕಾರಿ ಜಮೀನನ್ನು ಉಳಿಸುವುದು ಕರ್ತವ್ಯ. ಶಂಕರ್ ಅವರಂಥ ಜಿಲ್ಲಾಧಿಕಾರಿಗಳು ಹಿಂದೆಯೇ ಆ ಕೆಲಸ ಮಾಡಿದ್ದರು. ಕೆಲವು ಜಿಲ್ಲಾಧಿಕಾರಿಗಳು ಅಪಾಯ ಮೈಮೇಲೆ ಎಳೆದುಕೊಳ್ಳುವುದು ಯಾಕೆ ಎಂದು ಹಿಂದೇಟು ಹಾಕಿರಬಹುದು. ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ಒತ್ತುವರಿ ಮಾಡಿಕೊಂಡವರು ಎಷ್ಟೇ ಪ್ರಭಾವಿಗಳಾದರೂ ಹೆದರುವ ಪ್ರಶ್ನೆಯೇ ಇಲ್ಲ’ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಖಡಕ್ ಉತ್ತರ ನೀಡಿದರು.

‘ಒಂದೂವರೆ ವರ್ಷಗಳ ಹಿಂದೆ ಒತ್ತುವರಿ ತೆರವು ಕಾರ್ಯ ಆರಂಭಿಸಿದಾಗ ಪ್ರಭಾವಿಗಳಿಂದ ಒತ್ತಡ ಬೆದರಿಕೆಗಳು ಬಂದವು. ಯಾವುದಕ್ಕೂ ಜಗ್ಗದೇ ಕೆಲಸ ಮುಂದುವರಿಸಿದ್ದರಿಂದ ಈಗ ಯಾವ ಕರೆಗಳೂ ಬರುತ್ತಿಲ್ಲ. ಕರೆ ಮಾಡಿ ಪ್ರಯೋಜನವಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಒತ್ತುವರಿ ತೆರವು ಮಾಡದಂತೆ ಆರಂಭದಲ್ಲಿ ನನಗೆ ಒತ್ತಡದ ಕರೆಗಳು ಬರುವುದನ್ನು ನೋಡಿ ಇದೆಲ್ಲ ಬೇಡ ಎಂದು ನಮ್ಮ ಮನೆಯ ಸದಸ್ಯರೇ ಹೇಳುತ್ತಿದ್ದರು’ ಎಂದರು.

‘ಜಿಲ್ಲೆಯ ಎಲ್ಲ 782 ಕೆರೆಗಳನ್ನು ಸಮೀಕ್ಷೆ ಮಾಡಿಸಿದ್ದೇನೆ. ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕೆರೆ ಮಾತ್ರವಲ್ಲ ಎಲ್ಲ ಒತ್ತುವರಿಗಳ ತೆರವು ಮಾಡಲಾಗುತ್ತಿದೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನನ್ನು ಈಗಾಗಲೇ ಸರ್ಕಾರಕ್ಕೆ ವಾಪಸ್ ಪಡೆಯಲಾಗಿದೆ. ಅವುಗಳಿಗೆ ಬೇಲಿ ಹಾಕಿ ರಕ್ಷಿಸಲಾಗುತ್ತಿದೆ. ವಾಪಸ್ ಪಡೆಯಲು ಇನ್ನೂ ಬಹಳಷ್ಟು ಜಮೀನಿದೆ. ನಮ್ಮ ಇಲಾಖೆಯ ಅಧಿಕಾರಿಗಳು ಪ್ರತಿ ವಾರದ ಕೊನೇ ದಿನ ಕಾರ್ಯಾಚರಣೆ ಮಾಡುತ್ತಿದ್ದಾರೆ. ನಾನೂ ಭಾಗವಹಿಸುತ್ತಿದ್ದೇನೆ’ ಎಂದರು.

ಸ್ವಯಂ ಸೇವಾ ಪೋರ್ಟಲ್

ಭೂ ಸುರಕ್ಷಾ ಯೋಜನೆಯಡಿ ಸೇವೆಗಳನ್ನು ಪಡೆಯಲು ಸ್ವಯಂ ಸೇವಾ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದೆ. ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನ್ಲೈನ್ಗೆ ಅಪ್ಲೋಡ್ ಮಾಡಲಾಗಿದೆ. ಯಾರು ಬೇಕಾದರೂ ಕುಳಿತಲ್ಲಿಂದಲೇ ಪಡೆಯಬಹುದು ಎಂದು ಜಗದೀಶ್ ಮಾಹಿತಿ ನೀಡಿದರು.

https://recordroom.karnataka.gov.in/service4 ಪೋರ್ಟಲ್ನಲ್ಲಿ ನಿಮ್ಮ ಮೊಬೈಲ್ ನಂಬರ್ ನೀಡಿ ಲಾಗಿನ್ ಆಗಬೇಕು. ಆ ನಂತರ ಮೂಲ ಅರ್ಜಿದಾರರ ವಿವರ ಒದಗಿಸಬೇಕು. ದಾಖಲೆಗಳನ್ನು ಹುಡುಕಬೇಕು. ಅಗತ್ಯ ಇರುವ ದಾಖಲೆಗಳ ಪುಟಗಳನ್ನು ಆಯ್ಕೆ ಮಾಡಿ ಇಚ್ಚೆಪಟ್ಟಿಗೆ ಸೇರಿಸಬೇಕು. ಅದರ ವೆಚ್ಚವನ್ನು ಆನ್ಲೈನ್ನಲ್ಲಿಯೇ ಪಾವತಿ ಮಾಡಿ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ವಿವರಿಸಿದರು.

ಪ್ರಶ್ನೋತ್ತರ

ಪೌತಿ ಖಾತೆ ಮಾಡುವ ಬಗ್ಗೆ ಮಾಹಿತಿ ನೀಡಿ

-ನಾಗರಾಜ್, ಬೆಂಗಳೂರು ನಗರ ಎಂ.ಜಿ. ನಾರಾಯಣ, ಜಿಗಣಿ

ರಾಜ್ಯದಲ್ಲಿ ಪೌತಿ ಖಾತೆ ಆಂದೋಲನ ನಡೆಯುತ್ತಿದೆ. ನಿಮ್ಮ ಹಿರಿಯರ ಹೆಸರಿನಲ್ಲಿರುವ ಜಮೀನನ್ನು ನಿಮ್ಮ ಹೆಸರಿಗೆ ಮಾಡಿಕೊಳ್ಳಬೇಕಾದರೆ ತಹಶೀಲ್ದಾರ್ ಅಥವಾ ನಾಡ ಕಚೇರಿಯ ಮೂಲಕ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಆರ್ಟಿಸಿ ಸಂಖ್ಯೆ, ಮರಣ ಪ್ರಮಾಣಪತ್ರ, ವಂಶವೃಕ್ಷ ಪ್ರಮಾಣಪತ್ರಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತದೆ. ಯಾವುದೇ ತಕರಾರು ಅರ್ಜಿ ಬಾರದೇ ಇದ್ದರೆ 15 ದಿನಗಳಲ್ಲಿ ಪೌತಿ ಖಾತೆಯನ್ನು ಮಾಡಿಕೊಡಲಾಗುತ್ತದೆ.

ಮೇಡಹಳ್ಳಿಯ ಸರ್ವೇ ಸಂಖ್ಯೆ 89ರ ಸರ್ಕಾರಿ ಗೋಮಾಳ ಭೂಮಿಯ ಒತ್ತುವರಿ ತೆರವುಗೊಳಿಸಬೇಕು. ಈ ಬಗ್ಗೆ ತಹಶೀಲ್ದಾರಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ?

-ಕಿರಣ್ ಕುಮಾರ್, ಮೇಡಹಳ್ಳಿ,

ಸರ್ಕಾರಿ ಜಮೀನು ಉಳಿಸುವುದೇ ನಮ್ಮ ಕರ್ತವ್ಯ. ಮೇಡಹಳ್ಳಿಯ ಈ ಜಮೀನನ್ನು ತಹಶೀಲ್ದಾರ್ ಮೂಲಕ ಸಮೀಕ್ಷೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು.

ಪಹಣಿ ಪತ್ರದಲ್ಲಿ ಮೂಲ ಖಾತೆದಾರರ ಹೆಸರು ಬರುತ್ತಿದ್ದು, ಈ ಸಮಸ್ಯೆಗೆ ಪರಿಹಾರ ನೀಡಿ

-ನಾಗಣ್ಣ, ಬೆಂಗಳೂರು ನಗರ

ಇನಾಂ ಜಮೀನು ಆಗಿದ್ದರೆ ಪಹಣಿ ಪತ್ರದಲ್ಲಿ ಮೂಲ ಖಾತೆದಾರರ ಹೆಸರು ಬರುತ್ತದೆ. ಈ ಜಮೀನು ನಿಮಗೆ ಮರು ಮಂಜೂರು ಆದ ನಂತರ ಮೂಲ ಖಾತೆದಾರರ ಹೆಸರು ತೆಗೆಯಬೇಕು. ಅದಕ್ಕೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬೇಕು.

2014ರಲ್ಲಿ 94 ಸಿಸಿ ಹಕ್ಕುಪತ್ರ ನೀಡಿದರೂ ನೋಂದಣಿ ಆಗುತ್ತಿಲ್ಲ?

-ವಿಲಾಸ್ ಕುಮಾರ್, ಕೆಂಗೇರಿ

ಕೆಂಗೇರಿ ಹೋಬಳಿಯ 199 ಸರ್ವೇ ಸಂಖ್ಯೆಯಲ್ಲಿ 94 ಸಿಸಿ ಹಕ್ಕುಪತ್ರ ನೀಡಲಾಗಿರುವ ಎಲ್ಲರಿಗೂ ನೋಂದಣಿ ಮಾಡಿಕೊಡುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.

ಕಗ್ಗಲಿಪುರ ಸರ್ವೇ ನಂ. 46ರಲ್ಲಿ 1991–92ರಲ್ಲಿ ಮಂಜೂರು ಆಗಿದೆ. ಆದರೆ ಪೋಡಿ ಆಗುತ್ತಿಲ್ಲ?

-ರಾಮಕೃಷ್ಣಪ್ಪ, ಕಗ್ಗಲಿಪುರ ಬೆಂಗಳೂರು ದಕ್ಷಿಣ ಜಿಲ್ಲೆ

ಅನುಬಂಧಕ್ಕೆ ಸಹಿ ಮಾಡಿ, ಸಮೀಕ್ಷೆ ನಡೆಸಿ, ಪೋಡಿ ಮಾಡಲು ತಹಶೀಲ್ದಾರ್ಗೆ ಸೂಚಿಸುತ್ತೇನೆ.

ಬೆಂಗಳೂರು ನಗರದಲ್ಲಿ ಬಲಾಢ್ಯರು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಅಂತಹವರನ್ನು ಎದುರು ಹಾಕಿಕೊಂಡು ಒತ್ತುವರಿ ತೆರವು ಹೇಗೆ ಮಾಡುತ್ತೀದ್ದೀರಿ?

-ಶ್ರುತಿ, ಬೆಂಗಳೂರು ನಗರ

ಒತ್ತುವರಿ ಆಗಿರುವ ಸರ್ಕಾರಿ ಜಮೀನು ತೆರವುಗೊಳಿಸುವುದು ನಮ್ಮೆಲ್ಲರ ಕರ್ತವ್ಯ. ಕೆಲ ಜಿಲ್ಲಾಧಿಕಾರಿಗಳು ಸವಾಲು ಎದುರಿಸಿ ಕೆಲಸ ಮಾಡುತ್ತಾರೆ. ಕೆಲವರು ಮಾಡುವುದಿಲ್ಲ. ನಾನು ₹20 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯದ 850 ಎಕರೆಗೆ ಹೆಚ್ಚು ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದ್ದೇನೆ.

ನಮ್ಮ ತಂದೆ ಮೂರು ವರ್ಷದ ಹಿಂದೆ ಮರಣ ಹೊಂದಿದ್ದಾರೆ. ಅವರ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ದಾನ ಮಾಡಲಾಗಿದೆ. ಆದರೆ ಅವರ ಮರಣ ಪ್ರಮಾಣ ಪತ್ರವನ್ನು ಇದುವರೆಗೂ ನೀಡುತ್ತಿಲ್ಲ?

-ಶ್ಯಾಮಸುಂದರ್ ಆದಿ, ಬೆಂಗಳೂರು ನಗರ

ಮರಣ ಪ್ರಮಾಣಪತ್ರವನ್ನು ಒಂದು ವರ್ಷದೊಳಗೆ ಪಡೆದುಕೊಳ್ಳಬೇಕು. ಇಷ್ಟು ತಡ ಮಾಡುವುದಕ್ಕೆ ಏನು ಕಾರಣ ಎಂಬುದು ನನಗೆ ಗೊತ್ತಿಲ್ಲ. ಕೂಡಲೇ ನಿಮ್ಮ ತಂದೆಯವರ ಮರಣ ಪ್ರಮಾಣಪತ್ರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ.

ತಪ್ಪಾಗಿ ಪೋಡಿ ಮಾಡಿರುವುದನ್ನು ಸರಿಪಡಿಸಬೇಕು.

-ವಾಸುದೇವಮೂರ್ತಿ, ದಾಸನಪುರ ಹೋಬಳಿ

ತಪ್ಪಾಗಿ ಪೋಡಿ ಆಗಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಬಂದು ನನ್ನನ್ನು ಭೇಟಿಯಾಗಿ. ಸರಿಪಡಿಸುವಂತೆ ಭೂದಾಖಲೆಗಳ ಉಪನಿರ್ದೇಶಕರಿಗೆ (ಡಿಡಿಎಲ್ಆರ್) ಸೂಚಿಸುತ್ತೇನೆ.

92 ಸಿಸಿ ಅಡಿ ಅರ್ಜಿ ಹಾಕಿ ಬಹಳ ದಿನಗಳಾದರೂ ಇದುವರೆಗೂ ಅರ್ಜಿ ವಿಲೇವಾರಿ ಆಗಿಲ್ಲ.

-ನಾಗಪ್ಪ, ಕೆ.ಆರ್. ಪುರ

2016ಕ್ಕಿಂತ ಮೊದಲು ನೀವು ಆ ನಿವೇಶನದಲ್ಲಿ ವಾಸಿಸಬೇಕು. ಅಂದಾಗ ಮಾತ್ರ ನಿಮಗೆ ಹಕ್ಕುಪತ್ರ ನೀಡಲು ಬರುತ್ತದೆ. ಈ ಬಗ್ಗೆ ಪರಿಶೀಲಿಸಿ, ನಿಮ್ಮ ಸಮಸ್ಯೆಯನ್ನು ಸರಿಪಡಿಸುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.

ಹಿರಿಯ ನಾಗರಿಕರ ಪಿಂಚಣಿ ಸರಿಯಾದ ಸಮಯಕ್ಕೆ ಬರುತ್ತಿಲ್ಲ.

-ಪುಷ್ಪಾ ಎಸ್. ರಾವ್, ಗಿರಿನಗರ ವಾರ್ಡ್

ಈ ತಿಂಗಳ ಪಿಂಚಣಿ ಇನ್ನೇನು ಬಿಡುಗಡೆ ಆಗಬೇಕಿದೆ. 2025ರಲ್ಲಿ ಏಳು ತಿಂಗಳ ನಿಮ್ಮ ಪಿಂಚಣಿ ಬಾರದಿರುವುದಕ್ಕೆ ಏನು ಕಾರಣ ಎಂಬುದರ ಬಗ್ಗೆ ಪರಿಶೀಲಿಸುತ್ತೇನೆ. ಜಿಲ್ಲಾಧಿಕಾರಿ ಕಚೇರಿಗೆ ಬಂದು ಭೇಟಿಯಾಗಿ.

ನಮ್ಮ ಯಜಮಾನರು ತೀರಿಕೊಂಡು ಐದು ತಿಂಗಳಾಗಿದೆ. ಪೌತಿ ಖಾತೆಯಲ್ಲಿ ಅವರದೇ ಭಾವಚಿತ್ರ ಇದೆ. ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ.

-ಹೇಮಾವತಿ, ಥಣಿಸಂದ್ರ

ಮರಣ ಪ್ರಮಾಣಪತ್ರ, ಜಮೀನಿನ ದಾಖಲೆಗಳನ್ನು ತೆಗೆದುಕೊಂಡು ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಹಾಕಬೇಕು. ಕೂಡಲೇ ಪೌತಿ ಖಾತೆ ಮಾಡುವಂತೆ ತಹಶೀಲ್ದಾರ್ಗೆ ಸೂಚಿಸುತ್ತೇನೆ.

ಮೈಲಪ್ಪನಹಳ್ಳಿಯಲ್ಲಿ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು.

-ಕಿರಣ್, ಯಲಹಂಕ

ಜಿಲ್ಲಾ ಪಂಚಾಯಿತಿ ಸಿಇಒ ಜೊತೆಗೆ ಮಾತನಾಡಿ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ತಿಂಡ್ಲು ಸರ್ವೇ ಸಂಖ್ಯೆ 81 ಗುಂಡು ತೋಪಿನ 3 ಎಕರೆ 9 ಗುಂಟೆ ಜಮೀನನ್ನು ಕಬಳಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

-ಜಗದೀಶ್, ತಿಂಡ್ಲು, ವಿದ್ಯಾರಣ್ಯಪುರ

ಈ ಬಗ್ಗೆ ಸಮೀಕ್ಷೆ ನಡೆಸುವಂತೆ ತಹಶೀಲ್ದಾರ್ಗೆ ಆದೇಶ ನೀಡುತ್ತೇನೆ. ವೀರಭದ್ರಸ್ವಾಮಿ ದೇವಸ್ಥಾನದ ಜಾಗವನ್ನು ತೆರವುಗೊಳಿಸಲು ಸೂಚಿಸುತ್ತೇನೆ.

2025ರ ಜನವರಿಯಲ್ಲಿ ಖಾತೆ ಬದಲಾವಣೆಗೆ ಅರ್ಜಿ ಹಾಕಲಾಗಿದೆ. ಎಸಿ ಕಚೇರಿಯಲ್ಲಿ ಬಾಕಿ ಇದೆ.

-ರಾಮಯ್ಯ, ಬೆಟ್ಟದಾಸನಪುರ

ಕಂದಾಯ ಉಪ ವಿಭಾಗಾಧಿಕಾರಿಯವರಿಗೆ ಹೇಳಿ ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡಿಸಲಾಗುವುದು.

ರಾಮಕೃಷ್ಣಪುರ ಗ್ರಾಮದ ಕೆರೆ ಒತ್ತುವರಿಯಾಗಿದೆ. ಇದುವರೆಗೂ ಈ ಕೆರೆಯ ಸಮೀಕ್ಷೆ ಆಗಿಲ್ಲ.

-ವೇಣುಗೋಪಾಲ್, ಜಿಗಣಿ ಹೋಬಳಿ, ಆನೇಕಲ್

ಬೆಂಗಳೂರು ನಗರ ಜಿಲ್ಲೆಯ ಎಲ್ಲ 782 ಕೆರೆಗಳ ಸಮೀಕ್ಷೆ ಆಗಿದೆ. ಶೇ 80ರಷ್ಟು ಒತ್ತುವರಿ ತೆರವುಗೊಳಿಸಲಾಗಿದೆ. ರಾಮಕೃಷ್ಣಪುರ ಕೆರೆಯ ಒತ್ತುವರಿಯನ್ನು ತೆರವುಗೊಳಿಸಲು ತಹಶೀಲ್ದಾರ್ಗೆ ನಿರ್ದೇಶನ ನೀಡುತ್ತೇನೆ.

ಇನಾಂ ಜಮೀನು ಮರು ಮಂಜೂರಾಗಿದ್ದರೂ ನೋಂದಣಿ ಆಗಿಲ್ಲ. ತಹಶೀಲ್ದಾರ್ಗೆ ಅರ್ಜಿ ಹಾಕಿದರೂ ಸ್ಪಂದಿಸುತ್ತಿಲ್ಲ.

-ಕೃಷ್ಣಪ್ಪ, ದೇವ

ಇನಾಂ ಭೂಮಿಯ ದಾಖಲೆಗಳನ್ನು ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ನೀಡುತ್ತೇನೆ.

ಎಚ್ಬಿಆರ್ ಬಡಾವಣೆಯ ಸ್ಮಶಾನ ಜಾಗದ 1 ಎಕರೆ 15 ಗುಂಟೆ ಒತ್ತುವರಿ ತೆರವುಗೊಳಿಸಬೇಕು

-ದಾನೀಶ್, ಎಚ್ಬಿಆರ್ ಬಡಾವಣೆ

ಸರ್ವೇ ಸಂಖ್ಯೆ 229ರ ಸ್ಮಶಾನದ ಸಮೀಕ್ಷೆ ನಡೆಸಿ ಒತ್ತುವರಿ ಆಗಿದ್ದರೆ ತೆರವುಗೊಳಿಸಲು ತಹಶೀಲ್ದಾರ್ಗೆ ಸೂಚಿಸುತ್ತೇನೆ.

ಕೌಡೇನಹಳ್ಳಿ ಕೆರೆ 20 ಎಕರೆ ಜಮೀನು ಒತ್ತುವರಿ ತೆರವುಗೊಳಿಸಿ

-ನಾರಾಯಣಪ್ಪ, ರಾಮಮೂರ್ತಿನಗರ

ಕೌಡೇನಹಳ್ಳಿ ಕೆರೆ ಸಮೀಕ್ಷೆ ಆಗಿದೆ. ಆದರೆ ಒತ್ತುವರಿ ತೆರವುಗೊಂಡಿಲ್ಲ. ಈ ಬಗ್ಗೆ ತಹಶೀಲ್ದಾರ್ ಅವರೊಂದಿಗೆ ಮಾತನಾಡಿ, ಒತ್ತುವರಿ ತೆರವುಗೊಳಿಸಲು ಸೂಚಿಸುತ್ತೇನೆ.

ಬೆಳಗಾವಿ ಜಿಲ್ಲೆಯ ಗೋಕಾಕ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇದೆ. ಈಗ ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಇಲ್ಲಿಯ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ನೋಂದಣಿ ಹೇಗೆ ಮಾಡಿಕೊಳ್ಳಬೇಕು.

-ಜಿ.ವಿ. ಮಳಗಿ, ಬೆಂಗಳೂರು ನಗರ

8ಎ ಫಾರಂ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬೇಕು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮರ್ಪಕ ದಾಖಲೆಗಳನ್ನು ನೀಡಿ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.