ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಂಪಿ ಆಗದಿರಲಿ ರಿಯಲ್‌ ಎಸ್ಟೇಟ್‌ ಯೋಜನೆ: ತಜ್ಞರು ಅಭಿಪ್ರಾಯ

Last Updated 21 ಡಿಸೆಂಬರ್ 2021, 20:54 IST
ಅಕ್ಷರ ಗಾತ್ರ

ಬೆಂಗಳೂರು: ಈ ಹಿಂದೆ 2031ರವರೆಗಿನ ಪರಿಷ್ಕೃತ ನಗರ ಮಹಾ ಯೋಜನೆ (ಆರ್‌ಎಂಪಿ) ಸಿದ್ಧಪಡಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಈಗ ಅದರ ಅವಧಿಯನ್ನು 2041ರ ವರೆಗೆ ವಿಸ್ತರಿಸಿ ಹೊಸತಾಗಿ ಈ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆಸಿದೆ.

ನಗರದ ಬೆಳವಣಿಗೆ ಯಾವ ದಿಸೆಯಲ್ಲಿ ಸಾಗಬೇಕು ಎಂಬ ರೂಪುರೇಷೆಗಳನ್ನು ನಿರ್ಧರಿಸಲು ಆರ್‌ಎಂಪಿ ಸಿದ್ಧಪಡಿಸುವ ಸಲಹಾ ಸಂಸ್ಥೆಯ ಆಯ್ಕೆಗೆ ಬಿಡಿಎ ಟೆಂಡರ್‌ ಆಹ್ವಾನಿಸಿದೆ.

ಪರಿಷ್ಕೃತ ಯೋಜನೆ ಎಂದರೆ ಕೇವಲ ನಗರದ ಹೊರ ವಲಯದ ಭೂಮಿಯನ್ನು ನಗರಕ್ಕೆ ಸೆಳೆದುಕೊಳ್ಳುವ ಪ್ರಯತ್ನ ಅಷ್ಟೇ ಆಗಬಾರದು. ಸಂಚಾರ, ಸಾರಿಗೆ, ಪರಿಸರ, ಅಂತರ್ಜಲ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳೂ ಸೇರಿ ಎಲ್ಲ ರೀತಿಯ ಆಯಾಮಗಳನ್ನು ಒಳಗೊಳ್ಳಬೇಕು ಎಂಬುದು ತಜ್ಞರ ಅನಿಸಿಕೆ. ಈ ಕುರಿತು ತಜ್ಞರು ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡರು.

**

‘ಸಮಗ್ರ ಯೋಜನೆ ರೂಪುಗೊಳ್ಳಲಿ’
ಹೊಸದಾಗಿ ಆರ್‌ಎಂಪಿ ಸಿದ್ಧಪಡಿಸುವ ಬದಲು ಈಗಾಗಲೇ ಸಿದ್ಧವಾಗಿದ್ದ ಯೋಜನೆಗೆ ಸಮಗ್ರ ಸಂಚಾರ ಯೋಜನೆಯನ್ನು (ಸಿಎಂಪಿ) ಸೇರ್ಪಡೆ ಮಾಡಿದ್ದರೆ ಸಾಕಿತ್ತು. ಹೊಸದಾಗಿ ಸಿದ್ಧಪಡಿಸುತ್ತಿರುವ ಆರ್‌ಎಂಪಿಯಲ್ಲಿ ನಗರ ಹೇಗೆ ಬೆಳೆಯಬೇಕು ಎಂಬ ಸಮಗ್ರ ನಕ್ಷೆಯಾಗಿರಬೇಕು. ಅದರ ಬದಲು ಕೇವಲ ನಕ್ಷೆಗೆ ಬಣ್ಣ ಬಳಿಯುವ ಕೆಲಸವಾದರೆ ಯಾವ ಪ್ರಯೋಜನವೂ ಇಲ್ಲ. ನಗರದಲ್ಲಿ ಮೆಟ್ರೊ ರೈಲು ಮಾರ್ಗ, ಉಪನಗರ ರೈಲು ಯೋಜನೆ, ವಿಮಾನ ನಿಲ್ದಾಣ, ಕೈಗಾರಿಕೆ ಎಲ್ಲವೂ ಬೆಳೆಯುತ್ತಿವೆ. ಮುಂದಿನ 20 ವರ್ಷಗಳಲ್ಲಿ ನಗರ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದರ ಕೈಪಿಡಿಯಂತೆ ಆರ್‌ಎಂಪಿ ಇರಬೇಕಾಗುತ್ತದೆ. ನಗರ ಕಟ್ಟಲು ಯೋಜನೆ ರೂಪಿಸಬೇಕಾದ ಬಿಡಿಎ, ತನ್ನ ಕೆಲಸ ಬಿಟ್ಟು ರಸ್ತೆ ಅಭಿವೃದ್ಧಿಪಡಿಸುವ ಮತ್ತು ರಿಯಲ್ ಎಸ್ಟೇಟ್ ಏಜೆಂಟ್‌ ರೀತಿಯ ಕೆಲಸಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ಬೆಂಗಳೂರು ಬೆಳೆಯುತ್ತಿದೆ ಎಂದು ಹೇಳುತ್ತಿದ್ದರೂ, 30 ವರ್ಷಗಳಿಂದ ಕೊಳಗೇರಿಗಳ ಪರಿಸ್ಥಿತಿ ಬದಲಾಗಿಲ್ಲ.

-ಶ್ರೀನಿವಾಸ್ ಅಲವಿಲ್ಲಿ, ಜನಾಗ್ರಹ ಸಂಸ್ಥೆ

**

‘‌ಭೂಮಿ ಕಬಳಿಸುವ ಯೋಜನೆ ಆಗದಿರಲಿ’
ನಗರದ ಸುತ್ತಮುತ್ತಲ ಪ್ರದೇಶ ಕಬಳಿಸುವ ಉದ್ದೇಶ ಮಾತ್ರ ಯೋಜನೆಯಲ್ಲಿ ಇರಬಾರದು. ಆರೋಗ್ಯಕರವಾಗಿ ನಗರವನ್ನು ಹೇಗೆ ಕಟ್ಟಬೇಕು ಎಂಬ ಉದ್ದೇಶದೊಂದಿಗೆ ಮಹಾ ಯೋಜನೆ ರೂಪುಗೊಳ್ಳಬೇಕು. 20 ವರ್ಷದ ನಂತರವೂ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗದಂತೆ ವಿಶಾಲವಾದ ರಸ್ತೆಗಳಿರಬೇಕು. ಆ ರಸ್ತೆಗಳಲ್ಲಿ ನೀರು ಹರಿಯದಂತೆ ಚರಂಡಿ ಹೇಗೆ ನಿರ್ಮಿಸಬೇಕು.

ಸಮಗ್ರ ಯೋಜನೆ ರೂಪುಗೊಳ್ಳದಿದ್ದರೆ ಹಲವು ತೊಂದರೆಗಳನ್ನು ಮುಂದಿನ ಪೀಳಿಗೆ ಎದುರಿಸಬೇಕಾಗುತ್ತದೆ. ಈ ರೀತಿಯ ಯೋಜನೆ ಇಲ್ಲದೆ ನಗರ ಕಟ್ಟಿದ ಕಾರಣಕ್ಕೆ ಜಯದೇವ ಆಸ್ಪತ್ರೆ ಜಂಕ್ಷನ್‌ನಲ್ಲಿದಶಕದ ಹಿಂದಷ್ಟೇ ನಿರ್ಮಿಸಲಾದ ಮೇಲ್ಸೇತುವೆಯನ್ನು ಒಡೆದು ಹಾಕಲಾಗಿದೆ. ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ‍ಪೀಣ್ಯ ಕೈಗಾರಿಕಾ ಪ್ರದೇಶದ ಕಡೆಯಿಂದ ಬರುವ ಕೆಳಸೇತುವೆ ಕಾಮಗಾರಿ ಅರ್ಧಕ್ಕೆ ನಿಂತು 10 ವರ್ಷಗಳೇ ಕಳೆದಿವೆ. ಇದೇ ರಸ್ತೆಗೆ ಹಾಕಿದ್ದ ಡಾಂಬರ್ ಒಂದೇ ವರ್ಷದಲ್ಲಿ ಕಿತ್ತು ಹಾಕಿ, ವೈಟ್‌ ಟಾಪಿಂಗ್ ರಸ್ತೆಯಾಗಿ ಪರಿವರ್ತಿಸಲಾಯಿತು. ನಗರದ ಯಾವ ರಸ್ತೆಗೆ ಹೋದರೂ ಸಂಚಾರ ದಟ್ಟಣೆ, ಗುಂಡಿಗಳಿಂದ ತುಂಬಿರುವ ರಸ್ತೆಗಳು. ನಗರದ ತುಂಬೆಲ್ಲಾ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳಿವೆ. ಮಹಾ ಯೋಜನೆ ರೂಪಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಬೇಕು. ಯೋಜನೆ ರೂಪಿಸಲು ತಜ್ಞರನ್ನು ಒಳಗೊಳ್ಳಬೇಕು.
-ಶ್ರೀಕಾಂತ್ ಚನ್ನಾಳ್, ಅಧ್ಯಕ್ಷರು, ಅಸೋಷಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌, ಬೆಂಗಳೂರು ಕೇಂದ್ರ

**

‘ರಿಯಲ್ ಎಸ್ಟೇಟ್ ಯೋಜನೆ ಆಗದಿರಲಿ’
ವಿಭಿನ್ನವಾಗಿ ಬೆಳೆಯುತ್ತಿರುವ ನಗರ ಆಗಿರುವುದರಿಂದ ಪ್ರತ್ಯೇಕ ಬಿಬಿಎಂಪಿ ಕಾಯ್ದೆಯನ್ನೇ ರೂಪಿಸಿಕೊಳ್ಳಲಾಗಿದೆ. ಇದಕ್ಕೆ ಅರ್ಥ ಬರಬೇಕೆಂದರೆ ನಗರವನ್ನು ಸಮಗ್ರವಾಗಿ ಕಟ್ಟಬೇಕು. ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ (ಬಿಎಂಎಲ್‌ಟಿಎ) ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಸೇರಿ ಎಲ್ಲಾ ಸಂಸ್ಥೆಗಳನ್ನು ಸೇರಿಸಿಕೊಳ್ಳಬೇಕು. ನಗರ ಮಹಾ ಯೋಜನೆ ಎಂದರೆ ರಿಯಲ್ ಎಸ್ಟೇಟ್‌ ವಿಸ್ತರಣೆಯ ಯೋಜನೆ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ರಸ್ತೆ, ಚರಂಡಿ, ಸಾರಿಗೆ, ವಿಮಾನ ನಿಲ್ದಾಣ ಮಾರ್ಗ, ಕೈಗಾರಿಕೆಗಳ ಬೆಳವಣಿಗೆ ಹೇಗಿರಬೇಕು ಎಂಬುದರ ನೀಲನಕ್ಷೆಯಂತೆ ಮಹಾ ಯೋಜನೆ ಇರಬೇಕು. ಈ ಹಿಂದೆ ಇದೆಲ್ಲವನ್ನೂ ಪರಿಗಣಿಸದ ಕಾರಣಕ್ಕೆ ಕೆರೆ ದಂಡೆ ಜಾಗಗಳೆಲ್ಲವನ್ನು ರಿಯಲ್ ಎಸ್ಟೇಟ್‌ಗೆ ಮಾರಾಟ ಮಾಡಲಾಗಿದೆ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕು. ಪರಿಸರದ ಮೇಲೆ ಆಗಲಿರುವ ಪರಿಣಾಮವನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಯೋಜನೆ ರೂಪಿಸಬೇಕು.
-ರವೀಂದ್ರನಾಥ್ ಗುರು, ಸಿಎಎಫ್ ವ್ಯವಸ್ಥಾಪನಾ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT