ಬೆಂಗಳೂರು: ನಗರದ ಹಲವು ಶುದ್ಧ ನೀರಿನ ಘಟಕಗಳಲ್ಲಿ ನೀರಿನ ಬೆಲೆಯನ್ನು ₹ 5ರಿಂದ ₹ 10ಕ್ಕೆ ಏರಿಕೆ ಮಾಡಲಾಗಿದೆ. ಶುದ್ಧ ನೀರು ಖರೀದಿಸುವವರು ದುಪ್ಪಟ್ಟು ದರ ನೀಡಬೇಕಾಗಿದೆ.
ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿರುವ ಹಲವು ಶುದ್ಧ ನೀರಿನ ಘಟಕಗಳಲ್ಲಿ ಜುಲೈನಲ್ಲಿಯೇ ಏರಿಸಲಾಗಿತ್ತು. ಇದೀಗ ಆರ್‌ಟಿ ನಗರ, ಹೆಬ್ಬಾಳ ಸುತ್ತಮುತ್ತ ಖಾಸಗಿ ಏಜೆನ್ಸಿ ಘಟಕಗಳಲ್ಲಿ ಬೆಲೆ ದುಪ್ಪಟ್ಟಾಗಿದೆ.
‘ವಿದ್ಯುತ್ ದರ ಏರಿಕೆಯಾಗಿದ್ದು ಘಟಕಗಳ ನಿರ್ವಹಣೆಗೆ ಹೆಚ್ಚಿನ ಹೊರೆ ಬಿದ್ದಿದೆ. ಅಲ್ಲದೇ ಫಿಲ್ಟರ್, ಕೆಮಿಕಲ್ ಸಹ ದುಬಾರಿ ಆಗಿರುವ ಕಾರಣಕ್ಕೆ 20 ಲೀಟರ್ ನೀರಿನ ಬೆಲೆಯನ್ನು ₹ 10ಕ್ಕೆ ಏರಿಕೆ ಮಾಡಲಾಗಿದೆ. ಆರ್‌ಟಿ ನಗರ ವ್ಯಾಪ್ತಿಯ ಘಟಕಗಳಲ್ಲಿ ಸೆ.1ರಿಂದ ಹೊಸ ದರ ಜಾರಿಗೆ ಬರಲಿದೆ’ ಎಂಬ ಫಲಕವನ್ನು ಘಟಕಗಳ ಎದುರು ಅಳವಡಿಸಲಾಗಿದೆ.
ಕುಡಿಯುವ ನೀರಿಗಾಗಿ ಘಟಕಗಳನ್ನು ಅವಲಂಬಿಸಿರುವ ಜನರು ನಿತ್ಯವೂ ₹ 5 ನಾಣ್ಯ ಬಳಸಿ 20 ಲೀಟರ್ ನೀರು ಪಡೆಯುತ್ತಿದ್ದರು. ಇದೀಗ ₹ 5 ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಮಧ್ಯಮ ವರ್ಗದ ಜನರು, ಹೋಟೆಲ್ ಸಿಬ್ಬಂದಿ ಇದೇ ನೀರನ್ನು ಕೊಂಡೊಯ್ಯುತ್ತಿದ್ದರು. ಇದೀಗ ಅವರೂ ದುಪ್ಪಟ್ಟು ಹಣ ಪಾವತಿಸಬೇಕಾದ ಸ್ಥಿತಿ ಬಂದಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡರು. ಮೊದಲಿದಷ್ಟೇ ದರ ನಿಗದಿ ಪಡಿಸಬೇಕು ಎಂದು ಕೋರಿದ್ದಾರೆ.
ಪರಿಶೀಲನೆ: ‘ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವನ್ನು ಸಂಘ–ಸಂಸ್ಥೆಗಳು ಅಳವಡಿಸಿವೆ. ಅವು ಬೆಲೆ ಹೆಚ್ಚಿಸಿರಬಹುದು. ಬಿಬಿಎಂಪಿಯಿಂದ ನಿರ್ವಹಣೆ ಮಾಡುವ ಘಟಕಗಳಲ್ಲಿ ನೀರಿನ ಬೆಲೆ ಹೆಚ್ಚಳವಾಗಿಲ್ಲ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.