ಬೆಂಗಳೂರು: ರಾಜಾಜಿನಗರದ ಮಿಲ್ಕ್ ಕಾಲೊನಿಯ ಸ್ವಸ್ತಿಕ್ ಯುವಕರ ಸಂಘ ಸೋಮವಾರ ಪ್ರತಿಷ್ಠಾಪಿಸಲಿರುವ ಐಶ್ಚರ್ಯ ಗಣೇಶ ಬೆಂಗಳೂರಿನ ಅತ್ಯಂತ ದುಬಾರಿ ಹಾಗೂ ಸಿರಿವಂತ ಗಣಪ ಎಂಬ ಹೆಗ್ಗಳಿಕೆ ಹೊಂದಿದ್ದಾನೆ.
ಒಂದು ವಾರ ನಡೆಯುವ ಮಿಲ್ಕ್ ಕಾಲೊನಿ ಗಣೇಶ ಉತ್ಸವ ಅದ್ದೂರಿ ಮತ್ತು ಹೊಸತನಕ್ಕೆ ಹೆಸರುವಾಸಿಯಾಗಿದೆ. ₹16 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಚಾಮರಾಜನಗರ ಜಿಲ್ಲೆಯ ಯಳಂದೂರು ಬಳೆಮಂಟಪ ಪ್ರತಿಕೃತಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ.
ಸಾವಿರಾರು ಅಮೆರಿಕನ್ ಡೈಮಂಡ್, ನವರತ್ನಗಳಿಂದ ಕಂಗೊಳಿಸುತ್ತಿರುವ 5.7 ಅಡಿ ಎತ್ತರದ ಐಶ್ಚರ್ಯ ಗಣೇಶ ಮೂರ್ತಿಯ ಮೌಲ್ಯ ₹12 ಲಕ್ಷ. ಮುಂಬೈ ಮತ್ತು ಹುಬ್ಬಳ್ಳಿಯಲ್ಲಿ ಈ ಮೂರ್ತಿ ತಯಾರಿಸಲಾಗಿದೆ.
ಸೆ.18ರಿಂದ 24ರವರೆಗೆ ಒಂದು ವಾರ ಕಲೆ, ಸಂಸ್ಕೃತಿ, ಸದಭಿರುಚಿಯ ಸಂಗೀತ ಸಂಜೆ, ಆಹಾರ ಮೇಳ, ಸಿಡಿಮದ್ದು ಸುಡುವುದು ಸೇರಿದಂತೆ ವೈವಿಧ್ಯಮ ಕಾರ್ಯಕ್ರಮಗಳಿಂದ ಜಾತ್ರೆಯ ವಾತಾವರಣ ನಿರ್ಮಾಣವಾಗಲಿದೆ. ಚಿತ್ರನಟರಾದ ಶಿವರಾಜಕುಮಾರ್, ರಾಜ್ ಶೆಟ್ಟಿ, ನಿರ್ಮಾಪಕ ಡಿ. ಸುರೇಶಗೌಡ, ಶಾಸಕ ಅಶ್ವತ್ಥನಾರಾಯಣ, ಪಾಲಿಕೆ ಮಾಜಿ ಸದಸ್ಯರಾದ ಜಿ. ಮಂಜುನಾಥ, ಎಚ್.ಮಂಜುನಾಥ್ ಭಾಗವಹಿಸಲಿದ್ದಾರೆ.
ಕೇರಳದ ತ್ರಿಶ್ಶೂರ್, ಕೊಲ್ಲಂನ ಸಿಂಗಾರಿ ಮೇಳ, ಪಾಲಕ್ಕಾಡಿನ ಕಾಂತಾರ ನೃತ್ಯ, ವೆಲ್ಲೂರಿನ ಮಹಾಕಾಳಿ ನೃತ್ಯ ವೈಭವ, ಮೂಕಾಂಬಿಕಾ ಚಂಡೆ, ಅಹಮದಾಬಾದನ ಮಂಕಿಮ್ಯಾನ್ ಷೊ, ಕಿರುತೆರೆ ಕಲಾವಿದರಿಂದ ಹಾಸ್ಯ ರಸಮಂಜರಿ, ಅರ್ಜುನ್ ಜನ್ಯ ಅವರ ಸಂಗೀತ ಸಂಜೆ, ಮಳವಳ್ಳಿ ಮಹಾದೇವಸ್ವಾಮಿ ಅವರಿಂದ ಜನಪದ ಗಾಯನ ನಡೆಯಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.