ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಾಜಧಾನಿಯಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆ

ಮಲೆನಾಡಿನಂತೆ ಭಾಸವಾದ ‘ಸಿಲಿಕಾನ್‌ ಸಿಟಿ’ l ಸುತ್ತಮುತ್ತಲ ಜಿಲ್ಲೆಗಳಲ್ಲೂ ಭಾರಿ ಮಳೆ
Last Updated 6 ಆಗಸ್ಟ್ 2022, 21:11 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯಲ್ಲಿ ಒಂದು ವಾರದಿಂದ ಮಲೆನಾಡಿನ ವಾತಾವರಣ. ಬೆಳಿಗ್ಗೆ ಮೋಡ ಕವಿದ ವಾತಾವರಣ ಇದ್ದರೆ ಮಧ್ಯಾಹ್ನ ಹಾಗೂ ಸಂಜೆಯ ವೇಳೆಗೆ ಧೋ... ಎಂದು ಸುರಿಯುವ ಮಳೆ.

ರಾಜಧಾನಿಯಲ್ಲಿ ಒಮ್ಮೆಲೇ ಆರ್ಭಟಿಸುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ವರ್ಷ ವಾಡಿಕೆಗೂ ಅಧಿಕವಾಗಿ ಮಳೆ ಸುರಿದಿದೆ. ಜನವರಿ 1ರಿಂದ ಆಗಸ್ಟ್‌ 6ರ ತನಕ ಬೆಂಗಳೂರು ನಗರ ಜಿಲ್ಲೆಯಲ್ಲಿ ವಾಡಿಕೆ ಮಳೆಯ ಪ್ರಮಾಣ 34.4 ಸೆಂ.ಮೀ. ಸುರಿಯಬೇಕಿತ್ತು. ಆದರೆ, 76.1 ಸೆಂ.ಮೀನಷ್ಟು ಮಳೆಯಾಗಿದೆ.
ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮುಂಗಾರು ಪ್ರವೇಶಿಸುವುದು ಈ ವರ್ಷ ತಡವಾಗಿತ್ತು. ರಾಜಧಾನಿಯಲ್ಲೂ ಜೂನ್‌ ಆರಂಭದಲ್ಲಿ ಮಳೆ ಕೈಕೊಟ್ಟಿದ್ದರೂ ಜುಲೈ, ಆಗಸ್ಟ್‌ನಲ್ಲಿ ಅಧಿಕವಾಗಿ ಸುರಿಯಿತು.

ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಆಗಸ್ಟ್‌ 6ರ ವರೆಗೆ 18.8 ಸೆಂ.ಮೀ. ವಾಡಿಕೆಯ ಮಳೆ ಬೀಳಬೇಕಿತ್ತು. ಆದರೆ, 43.5 ಸೆಂ.ಮೀ ಮಳೆ ಬಿದ್ದಿದೆ. ಹೀಗಾಗಿ ವಾಡಿಕೆಗಿಂತ ಸರಾಸರಿ 24.7 ಸೆಂ.ಮೀನಷ್ಟು ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಕಳೆದ ಆರು ದಿನಗಳಲ್ಲಿ ಭಾರಿ ಮಳೆ ಸುರಿದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಏಕಾಏಕಿ ಸುರಿದ ಮಳೆಯಿಂದ ಶ್ರೀಸಾಯಿ ಲೇಔಟ್‌, ಕುಮಾರಸ್ವಾಮಿ ಲೇಔಟ್‌, ರಾಜೀವ್‌ಗಾಂಧಿ ನಗರ, ಕಾವೇರಿ ಬಡಾವಣೆ, ಫೈಯಜಾಬಾದ್‌ ನಗರ ‘ಜಲಮಯ’ಗೊಂಡಿದ್ದವು. ಈಗ ಅಲ್ಲಿ ನೀರು ಇಳಿದಿದ್ದರೂ ನಿವಾಸಿಗಳ ಕಣ್ಣೀರು ನಿಂತಿಲ್ಲ. ಆಗಸ್ಟ್‌ 1ರಿಂದ 6ರ ತನಕ ವಾಡಿಕೆ ಮಳೆ ಪ್ರಮಾಣ 2.3 ಸೆಂ.ಮೀನಷ್ಟು. ಆದರೆ, 13.7 ಸೆಂ.ಮೀ ಮಳೆ ಸುರಿದು ಪ್ರಮುಖ ಕೆರೆಗಳೆಲ್ಲವೂ ಭರ್ತಿಯಾಗಿವೆ. ಹಲವು ವರ್ಷಗಳಿಂದ ಕೋಡಿ ಬೀಳದಿದ್ದ ಕೆರೆಗಳಲ್ಲೂ ‘ಜಲರಾಶಿ’ ಕಾಣಿಸುತ್ತಿದೆ. ನಗರದ ಹಲವು ಕೆರೆಗಳು ದೊಡ್ಡ ಸಮುದ್ರದಂತೆ ಕಾಣಿಸುತ್ತಿವೆ.

ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲೂ ಮುಂಗಾರು ಅವಧಿಯಲ್ಲಿ (ಜೂನ್‌ 1ರಿಂದ ಇದುವರೆಗೆ) ವಾಡಿಕೆಗೂ ಅಧಿಕ ಮಳೆ ಸುರಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 30.7 ಸೆಂ.ಮೀ, ರಾಮನಗರ 27.8 ಸೆಂ.ಮೀ., ಕೋಲಾರ 23.7 ಸೆಂ.ಮೀ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರಾಸರಿ 22.3 ಸೆಂ.ಮೀ ಹೆಚ್ಚು ಮಳೆ ಸುರಿದು, ಬೆಳೆ ನಷ್ಟಕ್ಕೂ ಕಾರಣವಾಗಿದೆ.

ಪ್ರದೇಶವಾರು ಬಿದ್ದ ಮಳೆ ಪ್ರಮಾಣ (ಸೆಂ.ಮೀಗಳಲ್ಲಿ)–ಜನವರಿ 1ರಿಂದ ಆಗಸ್ಟ್‌ 6ರ ವರೆಗೆ
(ಕ್ರ.ಸಂ.;ಪ್ರದೇಶ; ವಾಡಿಕೆಯ ಮಳೆ; ಬಿದ್ದ ಮಳೆ ಪ್ರಮಾಣ)
1.;ಆನೇಕಲ್‌;36.7;72.5
‌2;ಬೆಂಗಳೂರು ಉತ್ತರ;41.9;74.7
3;ಬೆಂಗಳೂರು ದಕ್ಷಿಣ;35.1;81.5
4;ಬೆಂಗಳೂರು ಪೂರ್ವ;29.5;70.7
5;ಯಲಹಂಕ;31.3;79.8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT