ಬೆಂಗಳೂರು: ನಗರದ ವಿವಿಧೆಡೆ ಗುರುವಾರ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.
ನೈರುತ್ಯ ರೈಲ್ವೆ: ನೈರುತ್ಯ ರೈಲ್ವೆ ವಿಭಾಗದಿಂದ ಮಹಾತ್ಮ ಗಾಂಧಿ ರೈಲ್ವೆ ಕಾಲೊನಿಯ ರೈಲ್ವೆ ಇನ್‌ಸ್ಟಿಟ್ಯೂಟ್ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಮಾತನಾಡಿ, ‘ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ 6.47ರಷ್ಟು ಹೆಚ್ಚಳವಾಗಿದೆ. ಜುಲೈಯಲ್ಲಿ ಪ್ರಯಾಣಿಕರಿಂದ ₹ 286.3 ಕೋಟಿ ಆದಾಯ ಬಂದಿರುವುದು ಈ ವರ್ಷದಲ್ಲಿ ಬಂದ ಅತ್ಯುತ್ತಮ ಮಾಸಿಕ ಪ್ರಯಾಣಿಕ ಆದಾಯವಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್‌ಸೂರಿಯಾ, ಆಶುತೋಷ್ ಮಾಥುರ್, ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ವಿಭಾಗೀಯ ಭದ್ರತಾ ಆಯುಕ್ತ (ಆರ್.ಪಿ.ಎಫ್) ಶ್ರೇಯಾನ್ಸ್ ಚಿಂಚವಾಡೆ, ಮಹಿಳಾ ಕಲ್ಯಾಣ ಸಂಘಟನೆಯ ಬೆಂಗಳೂರು ವಿಭಾಗದ ಅಧ್ಯಕ್ಷೆ ಶಿಖಾ ಅಗರ್ವಾಲ್ ಉಪಸ್ಥಿತರಿದ್ದರು.
ಕೃಷಿ ವಿ.ವಿ.: ‘ಭಾರತದಲ್ಲಿ ಕೃಷಿಯು ಆಹಾರ ಮತ್ತು ಪೋಷಕಾಂಶದ ಭದ್ರತೆ ಜೊತೆಗೆ ಶೇ 50ರಷ್ಟು ಜನರಿಗೆ ಬದುಕುನೀಡಿದೆ’ ಎಂದು ಕೃಷಿ ವಿ.ವಿ ಕುಲಪತಿ ಎಸ್.ವಿ.ಸುರೇಶ್ ಅಭಿಪ್ರಾಯಪಟ್ಟರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನ್ಯಾಷನಲ್ ಕಾಲೇಜು: ‘ಯುವಜನರು ಎನ್‌ಸಿಸಿ, ಎನ್‌ಎಸ್‌ಎಸ್‌ನಂತಹ ಸೇವಾ ಸಂಸ್ಥೆಗಳಲ್ಲಿ ಭಾಗಿ ಆಗ ಬೇಕು’ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಸಲಹೆ ನೀಡಿದರು.
ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಎನ್‌ಇಎಸ್ ಕರ್ನಾಟಕ ಟ್ರಸ್ಟ್‌ನ ಅಧ್ಯಕ್ಷ ಎಚ್.ಎನ್. ಸುಬ್ರಮಣ್ಯ, ಕಾರ್ಯದರ್ಶಿ ವಿ. ವೆಂಕಟಶಿವಾ ರೆಡ್ಡಿ, ಬಿ.ಎಸ್. ಅರುಣ್‌ಕುಮಾರ್, ಜಂಟಿ ಕಾರ್ಯದರ್ಶಿ ಸುಧಾಕರ್ ಎಸ್ತೂರಿ, ಬಸವನಗುಡಿ ನ್ಯಾಷನಲ್ ಇಂಗ್ಲಿಷ್ ಶಾಲೆಯ ಅಧ್ಯಕ್ಷೆ ಪಾವನಾ ಉಪಸ್ಥಿತರಿದ್ದರು.
ಪಥಸಂಚಲನ: ಗಾಂಧಿ ಬಜಾರ್‌ನಲ್ಲಿ 250 ಅಡಿ ಉದ್ದದ ತ್ರಿವರ್ಣ ಧ್ವಜ ಜಾಥಾಗೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಗರುಡಾಚಾರ್, ವಿವೈಶ್ಯ ಸಂಸ್ಥಾಪಕ ಅನಿಲ್ ಗುಪ್ತ ಚಾಲನೆ ನೀಡಿದರು.
500 ಜನರಿಂದ ‘ಏಕತೆ ಮತ್ತು ಹೆಮ್ಮೆಯೊಂದಿಗೆ ನಮ್ಮ ಸ್ವಾತಂತ್ರ್ಯವನ್ನು ಆಚರಿಸೋಣ’ ಎಂಬ ಘೋಷಣೆಯೊಂದಿಗೆ ವಿವೈಶ್ಯ ಏಕತಾ ಧ್ವಜ ಜಾಥಾ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.