ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 3ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

Last Updated 15 ಫೆಬ್ರುವರಿ 2022, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಹು ನಿರೀಕ್ಷಿತ ಬೆಂಗಳೂರು 13ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾರ್ಚ್‌ 3ರಿಂದ 10ರವರೆಗೆ ನಡೆಯಲಿದೆ.

‘ಮಾರ್ಚ್‌ 3ರಂದು ಸಂಜೆ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜಿಕೆವಿಕೆ ಸಭಾಂಗಣದಲ್ಲಿ ನಡೆಯಲಿರುವ ಚಿತ್ರೋತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಕನ್ನಡ, ಹಿಂದಿ ಚಿತ್ರರಂಗದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಮಾರ್ಚ್‌ 10ರಂದು ಐಐಎಸ್‌ಸಿ ಆವರಣದಲ್ಲಿರುವ ಟಾಟಾ ಸಭಾಂಗಣದಲ್ಲಿ ಸಮಾರೋಪ ನಡೆಯಲಿದೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ಚಲನಚಿತ್ರೋತ್ಸವದಲ್ಲಿ 2020 ಮತ್ತು 2021ರಲ್ಲಿ ನಿರ್ಮಾಣವಾದ 55 ರಾಷ್ಟ್ರಗಳ 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮಾರ್ಚ್‌ 4ರಿಂದ ರಾಜಾಜಿನಗರದ ಒರಾಯನ್‌ ಮಾಲ್‌ನಲ್ಲಿರುವ ‘ಪಿವಿಆರ್‌ ಸಿನಿಮಾ’ದ 11 ಪರದೆಗಳಲ್ಲಿ, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಡಾ.ರಾಜ್‌ ಭವನ ಹಾಗೂ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಸಿನಿ ಅಕಾಡೆಮಿಯಲ್ಲಿ ಪ್ರದರ್ಶನಗಳು ನಡೆಯಲಿವೆ’ ಎಂದು ಅವರು ಹೇಳಿದರು.

ಚಿತ್ರೋತ್ಸವ ವಿಶೇಷ

‘ಈ ಚಲನಚಿತ್ರೋತ್ಸವಕ್ಕೆ ಇಂಟರ್‌ನ್ಯಾಷನಲ್‌ ಫೆಡರೇಷನ್‌ ಆಫ್‌ ಫಿಲ್ಮ್‌ ಪ್ರೊಡ್ಯೂಸರ್ಸ್‌ ಅಸೋಸಿಯೇಷನ್‌ (FIAPF) ಮಾನ್ಯತೆ ಸಿಕ್ಕಿದೆ. ಜಗತ್ತಿನಲ್ಲಿ ನಡೆಯುವ 5 ಸಾವಿರ ಚಿತ್ರೋತ್ಸವಗಳ ಪೈಕಿ ಇದುವರೆಗೆ 45 ಚಿತ್ರೋತ್ಸವಗಳಿಗೆ ಮಾತ್ರ ಈ ಮಾನ್ಯತೆ ಇತ್ತು. ಇದು ಆ ಗೌರವಕ್ಕೆ ಪಾತ್ರವಾಗಿರುವ 46ನೇ ಚಿತ್ರೋತ್ಸವ’ ಎಂದು ಪುರಾಣಿಕ್‌ ಸಂತಸ ಹಂಚಿಕೊಂಡರು.

ಸ್ಪರ್ಧಾ ವಿಭಾಗ: ಏಷ್ಯಾ ಚಲನಚಿತ್ರ ವಿಭಾಗ, ಭಾರತೀಯ ಚಲನಚಿತ್ರಗಳ ವಿಭಾಗ, ಕನ್ನಡ ಚಲನಚಿತ್ರಗಳ ವಿಭಾಗ, ಕನ್ನಡದ ಜನಪ್ರಿಯ ಮನೋರಂಜನಾ ಪ್ರಧಾನ ಚಿತ್ರಗಳ ವಿಭಾಗದಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

‘ಸಮಕಾಲೀನ ವಿಶ್ವ ಸಿನಿಮಾ, ವಿದೇಶವೊಂದರ ವಿಶೇಷ ನೋಟ (ಫ್ರಾನ್ಸ್‌ ಸಿನಿಮಾ ಕ್ಷೇತ್ರ), ಈಶಾನ್ಯ ರಾಜ್ಯಗಳ ವಿಶೇಷ ನೋಟ ಇರಲಿದೆ. ಆಸ್ಕರ್‌ ಪ್ರಶಸ್ತಿಗೆ ಅರ್ಹ ಸಿನಿಮಾಗಳ ಆಸ್ಕರ್‌ ವಿಭಾಗ ಇರಲಿದೆ. ಜೊತೆಗೆ ವಿಮರ್ಶಕರ ಸಪ್ತಾಹವೂ ಇದೆ’ ಎಂದು ಪುರಾಣಿಕ್‌ ಹೇಳಿದರು.

‘ಜರ್ಮನಿಯ ವೋಲ್ಕರ್‌ ಸ್ಕೋಂಡ್ರಫ್‌, ಪಂಚಭಾಷಾ ತಾರೆ ಭಾರತಿ ವಿಷ್ಣುವರ್ಧನ್ ಅವರ ಸಿನಿಬದುಕಿನ ಪುನರವಲೋಕನ ನಡೆಯಲಿದೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಸಂಬಂಧಿಸಿದ 5 ಚಿತ್ರಗಳ ವಿಶೇಷ ಪ್ರದರ್ಶನ ನಡೆಯಲಿದೆ. ತುಳು ಚಿತ್ರರಂಗದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ತುಳು ಚಿತ್ರರಂಗದ ಅವಲೋಕನ, ವಿಚಾರ ಸಂಕಿರಣ ನಡೆಯಲಿದೆ’ ಎಂದು ಅವರು ಹೇಳಿದರು.

‘ಚಿತ್ರೋತ್ಸವವು ಆಫ್‌ಲೈನ್‌ ಮತ್ತು ಆನ್‌ಲೈನ್‌ ಎರಡೂ ಮಾದರಿಗಳಲ್ಲಿ (ಹೈಬ್ರಿಡ್‌) ನಡೆಯಲಿದೆ’ ಎಂದರು.

‘ಪುನೀತ್‌ ರಾಜ್‌ಕುಮಾರ್‌, ಸಂಚಾರಿ ವಿಜಯ್‌ ಅವರ ಸ್ಮರಣೆಯೂ ನಡೆಯಲಿದೆ. ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಾಗಾರ, ಉಪನ್ಯಾಸ, ಸಂವಾದಗಳು ನಡೆಯಲಿವೆ’ ಎಂದು ಅವರು ಹೇಳಿದರು.

ಚಿತ್ರೋತ್ಸವದ ಮುಖ್ಯ ಸಂಯೋಜನಾಧಿಕಾರಿ ಪಿ. ಶೇಷಾದ್ರಿ, ಕಲಾತ್ಮಕ ನಿರ್ದೇಶಕ ಎಚ್‌.ಎನ್‌. ನರಹರಿರಾವ್‌, ರಿಜಿಸ್ಟ್ರಾರ್‌ ಹಿಮಂತ್‌ರಾಜು ಜಿ. ಪತ್ರಿಕಾಗೋಷ್ಠಿಯಲ್ಲಿ
ಇದ್ದರು.

ನೋಂದಣಿ ಸೌಲಭ್ಯ

l ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸುಚಿತ್ರಾ ಸಿನಿಮಾ ಅಕಾಡೆಮಿ ಬನಶಂಕರಿ

l ಪ್ರತಿನಿಧಿ ಶುಲ್ಕ: ಸಾರ್ವಜನಿಕರಿಗೆ– ₹ 800, ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರ ಸಮಾಜಗಳ ಸದಸ್ಯರಿಗೆ ₹ 400

l ಮಾಹಿತಿಗೆ ವೆಬ್‌ಸೈಟ್‌: www.biffes.in ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT