ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಂದಹಾಸ ಮೂಡಿಸಿದ ಚಿತ್ರೋತ್ಸವ

Last Updated 6 ಮಾರ್ಚ್ 2022, 4:16 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಲ್ಲಿ ಮೂರು ನಾಲ್ಕು ಜನರ ಸಣ್ಣ ಸಣ್ಣ ಗುಂಪುಗಳು, ಸ್ನೇಹಿತರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದ ಸಿನಿಮಾ, ಧಾರಾವಾಹಿ ನಟ, ನಟಿಯರು... ಎರಡು ವರ್ಷಗಳ ನಂತರ ಪರಸ್ಪರ ಮುಖಾಮುಖಿಯಾದ ಖುಷಿಯು ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿಸಿತ್ತು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಈ ಅವಕಾಶವನ್ನು ಒದಗಿಸಿತ್ತು.

ಒರಾಯನ್‌ ಮಾಲ್‌ನಲ್ಲಿ ಚಲನಚಿತ್ರೋತ್ಸದ ಎರಡನೇ ದಿನವಾದ ಶನಿವಾರ, ಹಿರಿಯ, ಕಿರಿಯ ನಿರ್ದೇಶಕರು, ನಟ, ನಟಿಯರು ಹುರುಪಿನಿಂದ ತಮ್ಮ ತಮ್ಮ ಸ್ನೇಹಿತರೊಂದಿಗೆ ಸಿನಿಮಾಗಳನ್ನು ಆಸ್ವಾದಿಸಿದರು. ‘ಕೊರೊನಾ ಕಾರಣದಿಂದ ನಾವು ಭೇಟಿಯೇ ಆಗಿರಲಿಲ್ಲ. ಒಟ್ಟಿಗೆ ಕೂತು ಸಿನಿಮಾ ನೋಡಿ, ಅದರ ಬಗ್ಗೆ ತುಸು ಚರ್ಚಿಸಿ ಮತ್ತೊಂದು ತೆರೆಗೆ ಸಿನಿಮಾ ನೋಡಲು ಓಡುವುದು... ಈ ಎಲ್ಲವನ್ನೂ ಮರಳಿ ಅನುಭವಿಸುವಂತಾಗಿದೆ’ ಎಂದು ನಿರ್ಮಾಪಕಿ ವಸುಂಧರಾ ಅನುಭವ ಹಂಚಿಕೊಂಡರು.

‘ಮನೆಯಲ್ಲಿ ಒಬ್ಬರೇ ಕೂತು ಟಿ.ವಿಯಲ್ಲಿ ಸಿನಿಮಾ ನೋಡುವುದಕ್ಕೂ, ಸಿನಿಮೋತ್ಸವದಲ್ಲಿ ನೋಡುವುದಕ್ಕೂ ವ್ಯತ್ಯಾಸ ಇದೆ. ಇಲ್ಲಿಗೆ ಹಿರಿಯ ನಿರ್ದೇಶಕರು, ವಿಮರ್ಶಕರು, ತಂತ್ರಜ್ಞರು ಬಂದಿರುತ್ತಾರೆ. ಸಿನಿಮಾ ಅಧ್ಯಯನಕ್ಕೆ ಇದೊಂದು ಉತ್ತಮ ವೇದಿಕೆ. ಹಿರಿ–ಕಿರಿಯರ ವಿಚಾರ ವಿನಿಮಯಕ್ಕೂ ಇಲ್ಲಿ ಅವಕಾಶ ಇದೆ’ ಎಂದರು.

ದೊಡ್ಡ ಪರದೆಯ ಮಜವೇ ಬೇರೆ: ‘ಮನೆಯಲ್ಲೇ ಕೂತು ಜಗತ್ತಿನ ಸಿನಿಮಾ ಲೋಕಕ್ಕೆ ತೆರೆದುಕೊಳ್ಳುವ ಅವಕಾಶವನ್ನು ಒಟಿಟಿ ವೇದಿಕೆ ನಮಗೆ ನೀಡಿದೆ. ಒಟಿಟಿ ಎಂದರೆ ಹೆಚ್ಚಾಗಿ ಎಲ್ಲರೂ ಮೊಬೈಲ್‌ನಲ್ಲೇ ಸಿನಿಮಾ ನೋಡುತ್ತಾರೆ. ಆದರೆ, ದೊಡ್ಡ ಪರದೆಯಲ್ಲಿ ಸಿನಿಮಾ ನೋಡುವ ಮಜವೇ ಬೇರೆ’ ಎಂದು ನಿರ್ದೇಶಕ ಅಭಿ ಕನಸಿನ ಕವನ ಅವರು ತಮ್ಮ ಅನುಭವ ಹಂಚಿಕೊಂಡರು.

‘ನಾನು ಈ ಚಲನಚಿತ್ರೋತ್ಸವದಲ್ಲಿ ಮೂರು ನಾಲ್ಕು ಬಾರಿ ಭಾಗವಹಿಸಿದ್ದೇನೆ. ಜನರಲ್ಲಿ ಈ ಬಾರಿ ಅಷ್ಟೊಂದು ಉತ್ಸಾಹ ಕಾಣಿಸುತ್ತಿಲ್ಲ. ಈಗ ಆನ್‌ಲೈನ್‌ನಲ್ಲೂ ಸಿನಿಮಾ ನೋಡಬಹುದು. ಹಾಗಾಗಿ ಪ್ರೇಕ್ಷಕರು ಕಮ್ಮಿ ಆಗಿದ್ದಾರೆ’ ಎಂದರು.

*

ದೊಡ್ಡಮಟ್ಟದ ಚಿತ್ರೋತ್ಸವ ಹೊಸತನದೊಂದಿಗೆ ಬಂದಿದೆ. ಗೋವಾ, ಬರ್ಲಿನ್‌ ಚಲನ ಚಿತ್ರೋತ್ಸವಗಳಲ್ಲಿ ನೋಡಬಹುದಾದ ಚಿತ್ರಗಳನ್ನು ಇಲ್ಲಿಯೂ ನೋಡಬಹುದು. ಹಾಗೆ ನೋಡಿದರೆ ಪ್ರಾದೇಶಿಕ ಭಾಷೆಗಳ ಚಿತ್ರಗಳು ಇಂಥ ಉತ್ಸವದ ಮೂಲಕ ಜಗತ್ತಿನೆಡೆಗೆ ಪ್ರಯಾಣಿಸುತ್ತವೆ.
-ಸೋಮೇಂದ್ರ ಹರ್ಷ,ಸಂಸ್ಥಾಪಕ ಜೈಪುರ ಚಲನಚಿತ್ರೋತ್ಸವ, ರಾಜಸ್ಥಾನ

*

ಗೋವಾ ಚಲನ ಚಿತ್ರೋತ್ಸವದಲ್ಲಿಯೂ ಇತ್ತೀಚೆಗೆ ಕನ್ನಡ ಚಿತ್ರಗಳಿಗೆ ತುಂಬಾ ಮಾನ್ಯತೆ ಸಿಕ್ಕಿದೆ. ಇದು ಇಡೀ ಉದ್ಯಮಕ್ಕೊಂದು ಪ್ಲಸ್‌ ಪಾಯಿಂಟ್‌.
-ನವೀನ್‌ ದ್ವಾರಕಾನಾಥ್‌,ಚಿತ್ರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT