ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ತಾಣದಲ್ಲಿ ಕಿರಿಯರಿಗೆ ಅವಕಾಶ: ಎಂ. ಪ್ರಕಾಶಮೂರ್ತಿ

ಹೊಸ ಸವಾಲುಗಳ ಮೆಟ್ಟಿ ಕನ್ನಡ ಕಟ್ಟುತ್ತೇವೆ: ಕಸಾಪ ನಗರ ಜಿಲ್ಲಾಧ್ಯಕ್ಷ ಎಂ. ಪ್ರಕಾಶಮೂರ್ತಿ ಭರವಸೆ
Last Updated 21 ನವೆಂಬರ್ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ ಹೊಸ ಸವಾಲುಗಳೊಂದಿಗೆ ಕನ್ನಡ ಕಟ್ಟಬೇಕಿದೆ. ಹೊಸ ತಲೆಮಾರನ್ನೂ ಮುಟ್ಟಬೇಕಿದೆ. ಹೀಗಾಗಿ, ಬಹುತೇಕ ಹಿರಿಯರ ತಾಣವಾಗಿರುವಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಿರಿಯರನ್ನೂ ತೊಡಗಿಸಿಕೊಂಡು ಕನ್ನಡದ ಕಾಯಕ ಮಾಡುವೆ.’

ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ. ಪ್ರಕಾಶಮೂರ್ತಿ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಇಷ್ಟು. ಮೂರನೇ ಪ್ರಯತ್ನದಲ್ಲಿ ಗೆಲುವು ಸಾಧಿಸಿರುವ ಅವರು, ಈ ಹಿಂದೆ ಎರಡು ಬಾರಿ ಅಲ್ಪ ಅಂತರದಲ್ಲಿ ನಿರಾಸೆ ಅನುಭವಿಸಿದ್ದರು. ಅವರ ಅಭಿಪ್ರಾಯಗಳು ಇಂತಿವೆ.

l ಆಡಳಿತದ ಕೇಂದ್ರ ಸ್ಥಾನವಿರುವಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವಿರಿ. ನಿಮ್ಮ ಆದ್ಯತೆಗಳೇನು?

ರಾಜಧಾನಿಯಲ್ಲಿ ಕನ್ನಡ ಉಳಿದರೆ ಇಡೀ ರಾಜ್ಯದಲ್ಲಿ ಕನ್ನಡ ಉಳಿಯುತ್ತದೆ. ಹಾಗಾಗಿ, ನಗರದಲ್ಲಿ ಕನ್ನಡದ ವಾತಾವರಣ ಇರುವಂತೆ ನೋಡಿಕೊಳ್ಳುವುದು ನನ್ನ ಆದ್ಯತೆ. ಕನ್ನಡ ಪರ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳುತ್ತೇನೆ.

l ಬೆಂಗಳೂರು ಹಾಗೂ ಇಲ್ಲಿನ ಕನ್ನಡಿಗರಿಗೆ ಸಂಬಂಧಿಸಿದಂತೆ ಏನೆಲ್ಲ ಕಾರ್ಯಯೋಜನೆ ಹೊಂದಿರುವಿರಿ?

ಚುನಾವಣೆಗೂ ಮುನ್ನ ದತ್ತಿ ಪ್ರಶಸ್ತಿಗಳ ಸ್ಥಾಪನೆ ಒಳಗೊಂಡಂತೆ 20 ಅಂಶಗಳ ನನ್ನ ಆಶಯಗಳನ್ನು ಮತದಾರರಿಗೆ ತಿಳಿಸಿದ್ದೆ. ಅವುಗಳನ್ನು ಸಾಕಾರಗೊಳಿಸಲು ಪ್ರಯತ್ನ ಪಡುತ್ತೇನೆ.

l ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಪ್ರಬಲವಾಗುತ್ತಿದ್ದು, ಯುವಜನರನ್ನು ಸೆಳೆದುಕೊಳ್ಳುತ್ತಿವೆ. ಈ ವೇದಿಕೆಗಳಲ್ಲಿ ಸಾಂಸ್ಕೃತಿಕವಾಗಿ ಕನ್ನಡ ಕಟ್ಟಲು ಕಾರ್ಯತಂತ್ರವೇನು?

‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಮಾತಿನಂತೆ ಯುವಜನರನ್ನೂ ಕರೆತಂದು, ಕನ್ನಡಪರ ಕಾರ್ಯಕ್ರಮ ಮಾಡಬೇಕಿದೆ. 5 ವರ್ಷಗಳಿಂದ ನಗರ ಜಿಲ್ಲೆಯ ಪದಾಧಿಕಾರಿಗಳ ಬಗ್ಗೆ ಸಿನಿಕತನದ ಮಾತುಗಳು ಹೊರ ಹೊಮ್ಮುತ್ತಿದ್ದವು. ನನ್ನ ಅವಧಿಯಲ್ಲಿಸುಸಂಸ್ಕೃತರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು, ಮುನ್ನಡೆಯುವೆ.

l ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗುತ್ತಿಲ್ಲ, ಕನ್ನಡ ಕಡೆಗಣಿಸಲಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಏನು ಹೇಳಲು ಬಯಸುವಿರಿ

ಉದ್ಯೋಗ ಸೇರಿದಂತೆ ವಿವಿಧೆಡೆ ಕನ್ನಡಿಗರಿಗೆ ಅವಕಾಶಗಳು ಸಿಗಬೇಕು. ಇದು ಸಾಕಾರವಾಗಲು ಸರ್ಕಾರಗಳಿಗೂ ಇಚ್ಛಾಶಕ್ತಿ ಇರಬೇಕು.ಉದ್ಯೋಗದಲ್ಲಿ ಕನ್ನಡಿಗರಿಗೆ ಹಾಗೂ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ಆದ್ಯತೆ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಸೇರಿದಂತೆ ನಾಡು–ನುಡಿ ಹಾಗೂ ಕನ್ನಡಿಗರಿಗೆ ಸಂಬಂಧಿಸಿದ ವಿವಿಧ ಸಂಗತಿಗಳ ಬಗ್ಗೆ ಸರ್ಕಾರದ ಬೆಂಬಲ ಪಡೆಯಲು ಮುಂದಾಗುತ್ತೇವೆ. ಒಂದು ವೇಳೆ ಬೆಂಬಲ ನೀಡದಿದ್ದಲ್ಲಿ ಹೊಸ ಕಾರ್ಯಕಾರಿ ಸಮಿತಿಯ ಮನವೊಲಿಸಿ, ಸರ್ಕಾರದ ವಿರುದ್ಧ ಚಳವಳಿಯನ್ನು ನಡೆಸುತ್ತೇವೆ.

l ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದಿ ಭಾಷೆಯ ಹೇರಿಕೆ ಬಗ್ಗೆ ಏನನ್ನುತ್ತೀರಿ?

ಶಿಕ್ಷಣ ಸೇರಿದಂತೆ ವಿವಿಧೆಡೆ ಒತ್ತಾಯ ಪೂರ್ವಕಹಿಂದಿ ಭಾಷೆಯ ಹೇರಿಕೆ ಸಲ್ಲದು. ಅದರ ಬಗ್ಗೆ ವಿರೋಧವಿದೆ.

l ಕೇಂದ್ರ ಸರ್ಕಾರ ಸ್ವಾಮ್ಯದ ಬ್ಯಾಂಕ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕನ್ನಡವು ಸ್ಥಾನ ಕಳೆದುಕೊಳ್ಳುತ್ತಿದೆ. ಇದನ್ನು ಹೇಗೆ ತಡೆಯುವಿರಿ...

ವಾಣಿಜ್ಯ ಮಳಿಗೆ, ಬ್ಯಾಂಕ್‌ಗಳಲ್ಲಿ ಕನ್ನಡ ಬಳಕೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದ್ದೇವೆ. ಕನ್ನಡ ಬಳಸದಿದ್ದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಕನ್ನಡಕ್ಕೆ ಧಕ್ಕೆಯಾದಾಗ ನಮ್ಮ ಸಂಘಟನೆಗಳ ಮೂಲಕ ಖಂಡಿಸಿದ್ದೇವೆ.ಮುಂದಿನ ದಿನಗಳಲ್ಲಿ ಈ ಬಗ್ಗೆ ಬಹಿರಂಗವಾಗಿ ಶಕ್ತಿಯುತ ಹೋರಾಟ, ಚಳವಳಿ ನಡೆಸಲಾಗುವುದು.

l ಈ ಗೆಲುವಿನ ಬಗ್ಗೆ ಏನು ಹೇಳಲು ಬಯಸುವಿರಿ?

ಹಿಂದಿನ ಚುನಾವಣೆಗಳಲ್ಲಿ ಅತ್ಯಲ್ಪ ಮತಗಳಲ್ಲಿ ಸೋತಿದ್ದೆ. ಆಗ ಧೃತಿಗೆಡದೆಯೇ ಕನ್ನಡ ಪರ ಕೆಲಸಗಳನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಅದನ್ನು ಗುರುತಿಸಿರುವ ಕನ್ನಡಿಗರು, ಬಹುಮತದಿಂದ ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ನಾನು ಋಣಿ. ಬೆಂಗಳೂರಿನ ಜನರಿಗೆ ಧನ್ಯವಾದಗಳು.

ಹೊಸ ಅಧ್ಯಕ್ಷರ ಪರಿಚಯ

ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಎಂ. ಪ್ರಕಾಶಮೂರ್ತಿ ಅವರು, ಪ್ರಕಾಶಕ–ಸಂಪಾದಕರಾಗಿಯೂ ಸಾಂಸ್ಕೃತಿಕ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ವಿವಿಧ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ ಅನುಭವ ಹೊಂದಿದ್ದಾರೆ. ಎ.ಬಿ. ಮಾರೇಗೌಡ ಹಾಗೂ ಎಚ್‌.ಆರ್. ಲಕ್ಷ್ಮಮ್ಮ ದಂಪತಿ ಪುತ್ರರಾದ ಇವರು, ಬಿ.ಎ ಹಾಗೂ ಡಿ.ಎಂ.ಇ ವಿದ್ಯಾರ್ಹತೆ ಹೊಂದಿದ್ದಾರೆ. ಇವರ ತಂದೆ ಶಿಕ್ಷಕರಾಗಿದ್ದರು. ಬಾಲ್ಯದಿಂದಲೇ ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT