ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ತಾಸು ಫುಟ್‌ಪಾತ್‌ನಲ್ಲೇ ಕಳೆದ ಕೋವಿಡ್ ರೋಗಿ

ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಮಲ್ಯ ಆಸ್ಪತ್ರೆ
Last Updated 14 ಏಪ್ರಿಲ್ 2021, 21:17 IST
ಅಕ್ಷರ ಗಾತ್ರ

ಬೆಂಗಳೂರು: ಡಯಾಲಿಸಿಸ್‌ಗೆ ಬಂದ‌‌ ಮಹಿಳೆಗೆ ಕೊರೊನಾ ಸೋಂಕು ತಗುಲಿದ ಕಾರಣ ನಗರದ ಮಲ್ಯ ಆಸ್ಪತ್ರೆ ಚಿಕಿತ್ಸೆ ನೀಡಲು ನಿರಾಕರಿಸಿದೆ. ನಡೆಯಲು ಆಗದ ಮಹಿಳೆ ಸುಮಾರು ಎಂಟು ತಾಸು ಫುಟ್‌ಪಾತ್‌ನಲ್ಲೇ ಸಮಯ ಕಳೆದಿದ್ದಾರೆ.

ಬಸವನಗುಡಿ ನಿವಾಸಿಯಾಗಿರುವ 58 ವರ್ಷದ ಮಹಿಳೆ ಸೋಮವಾರ ಮಧ್ಯಾಹ್ನ ಮಲ್ಯ ಆಸ್ಪತ್ರೆಗೆ ಡಯಾಲಿಸಿಸ್‌ಗೆ ಬಂದಿದ್ದಾರೆ. ವಾರಕ್ಕೆ ಒಮ್ಮೆ ಅವರು ಇದೇ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಅವರಿಗೆ ಕೋವಿಡ್ ಪರೀಕ್ಷೆ ಮಾಡಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ನಮ್ಮದು ಕೋವಿಡ್‌ಗೆ ಮೀಸಲಾಗಿರುವ ಆಸ್ಪತ್ರೆಯ ಅಲ್ಲ. ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು‌ ಮಲ್ಯ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

ಕಾಲಿಗೆ ಏಟಾಗಿ ನಡೆಯಲು ಸಾಧ್ಯವಾಗದ ಕಾರಣ ಮಹಿಳೆ ಆಸ್ಪತ್ರೆಯ ಆವರಣದಲ್ಲಿಯೇ ಮಲಗಿದ್ದಾರೆ. ಈ‌ ಮಹಿಳೆ ಮಾಜಿ ಶಾಸಕ ಮತ್ತು ಮಾಜಿ ಮೇಯರ್ ಕೆ.ಚಂದ್ರಶೇಖರ್ ಅವರ ತಂಗಿ.

‘ನನ್ನ ತಂಗಿ ಒಬ್ಬರೇ ಆಸ್ಪತ್ರೆಗೆ ಹೋಗಿದ್ದರು. ಅವರಿಗೆ ಕೋವಿಡ್ ಇರುವುದು ಗೊತ್ತಿರಲಿಲ್ಲ. ತಿಳಿದ ನಂತರ ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿದರೂ ಸಕಾಲಕ್ಕೆ ಸ್ಪಂದಿಸಿಲ್ಲ. 108ಗೆ ಸೋಮವಾರ ಕರೆ ಮಾಡಿದರೆ ಮಂಗಳವಾರ ಬೆಳಿಗ್ಗೆ ಆಂಬುಲೆನ್ಸ್ ಬಂದಿದೆ' ಎಂದು ಚಂದ್ರಶೇಖರ್‌ ಅಸಮಾಧಾನ ವ್ಯಕ್ತಪಡಿಸಿದರು.

ಮಲ್ಯ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿಯೇ ಸೋಮವಾರ ರಾತ್ರಿ ರಂಗಾದೊರೈ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿಕೊಳ್ಳಲಾಗಿದೆ. ಈಗ ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರವೂ ಅವರ ಸ್ಥಿತಿ ಗಂಭೀರವಾಗಿತ್ತು.

‘ನನಗೂ ವಯಸ್ಸಾಗಿದೆ. ತಂಗಿಯ ಜೊತೆಗೆ ಹೋಗಲು ಸಾಧ್ಯವಾಗಲಿಲ್ಲ.‌ ಆದರೆ, ಸಕಾಲಕ್ಕೆ ಚಿಕಿತ್ಸೆ ನೀಡದೆ ಮಲ್ಯ ಆಸ್ಪತ್ರೆಯ ವೈದ್ಯರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ’ ಎಂದು ಚಂದ್ರಶೇಖರ್ ದೂರಿದರು.

‘ಯಾವುದೇ ಆಸ್ಪತ್ರೆ ಆದರೂ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ. ರೋಗಿಗಳನ್ನು ಮೊದಲು ದಾಖಲಿಸಿಕೊಳ್ಳಬೇಕು. ಸಹಾಯವಾಣಿ, ಆಂಬುಲೆನ್ಸ್ ಸಿಬ್ಬಂದಿಯೂ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಬೇಕು. ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT