ಗುರುವಾರ , ಜುಲೈ 29, 2021
25 °C

ಬೆಂಗಳೂರು ದಕ್ಷಿಣ: ಕೆರೆ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ದಕ್ಷಿಣತಾಲ್ಲೂಕಿನಲ್ಲಿ ಉದ್ಯಮಿಯೊಬ್ಬರು ಕೆರೆಯ ಪ್ರದೇಶದಲ್ಲಿ ಮಾಡಿಕೊಂಡಿದ್ದ ಒತ್ತುವರಿಯನ್ನು ಜಿಲ್ಲಾಧಿಕಾರಿ ಜೆ.‌ಮಂಜುನಾಥ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ತಾಲ್ಲೂಕಿನ ಕೋಳೂರು ಗುರುರಾಯನಪುರ ಗ್ರಾಮದ ಕೆರೆಯನ್ನು ಉದ್ಯಮಿಯೊಬ್ಬರು ಒತ್ತುವರಿ ಮಾಡಿಕೊಂಡಿದ್ದರು.‌

ಶ್ರೀ ಭಾಗ್ಯಲಕ್ಷ್ಮಿ ಫಾರ್ಮ್ಸ್ ಹೆಸರಿನಲ್ಲಿ ಸ್ವಂತ ಹಿಡುವಳಿಯ ನೂರಾರು ಎಕರೆಯಲ್ಲಿ ಫಾರ್ಮ ಹೌಸ್, ನರ್ಸರಿ, ಜೈವಿಕ ಗೊಬ್ಬರ ತಯಾರಿಕಾ ಉದ್ಯಮ, ಪಾರ್ಕ್ ಮುಂತಾದವುಗಳನ್ನು ಉದ್ಯಮಿಯೊಬ್ಬರು ಕೆರೆ ಪ್ರದೇಶ ಒತ್ತುವರಿ ಮಾಡಿಕೊಂಡು, ತಮ್ಮ ಫಾರ್ಮ್ ಹೌಸ್ ಹಾಗೂ ತೋಟಕ್ಕೆ ರಸ್ತೆ ಮಾಡಿಕೊಂಡಿದ್ದಲ್ಲದೆ, ಕೆರೆ ಅಂಗಳದಲ್ಲಿ ಕಾಫಿ ಗಿಡ, ಹೂದೋಟ ಮಾಡಿಕೊಂಡಿರುವುದರ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಉದ್ಯಮಿ ಕುಟುಂಬದವರು ತೋಟದೊಳಗೆ ಅನೇಕ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಿಕೊಂಡು ಕಾಲುವೆಗೆ ಚೆಕ್ ಡ್ಯಾಮ್ ಗಳನ್ನು ನಿರ್ಮಾಣ ಮಾಡಿ ನೀರಿನ ಹರಿವನ್ನು ತಮ್ಮ ಖಾಸಗಿ ಕೆರೆಗಳತ್ತ ತಿರುಗಿಸಿಕೊಂಡಿದ್ದರು. ಇದರಿಂದಾಗಿ ಕಾಲುವೆಯಲ್ಲಿ ನೀರು ಹರಿದು ಕೆರೆಗೆ ಸೇರದೆ ಸರ್ಕಾರಿ ಕೆರೆಯು ಬೇಸಿಗೆಯಲ್ಲಿ ಬತ್ತಿಹೋಗುತ್ತಿತ್ತು ಎಂದು ಸ್ಥಳೀಯರು ದೂರಿದರು.

ಉಪವಿಭಾಗಾಧಿಕಾರಿ ಡಾ ಎಂ. ಜಿ. ಶಿವಣ್ಣ, 'ಕೆರೆಯ ವ್ಯಾಪ್ತಿಯ ಬಗ್ಗೆ ವಾರದೊಳಗೆ ಸರ್ವೇ ಮಾಡಿಸಿ ವರದಿ ಸಲ್ಲಿಸಬೇಕು ಎಂದು ತಹಶೀಲ್ದಾರ್ ಗೆ ಸೂಚಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುವುದಾಗಿಯೂ ಹೇಳಿದರು.

ಭೂಮಿ ವಶಕ್ಕೆ: ಯಲಚಗುಪ್ಪೆಯ ಸರ್ವೇ ನಂಬರ್ 132 ಸರ್ಕಾರಿ ಕೆರೆ ಅಂಗಳದಲ್ಲಿನ 12 ಗುಂಟೆ ಜಮೀನನ್ನು ಡೆವಲಪರ್ ಒಬ್ಬರು ನಿವೇಶನ ವಿಂಗಡಿಸಿ ಬಡಾವಣೆ ಅಭಿವೃದ್ಧಿ ಪಡಿಸಿರುವುದನ್ನು ಅಧಿಕಾರಿಗಳು ಪತ್ತೆ ಹಚ್ಚಿದರು. ಜೆಸಿಬಿ ಯಂತ್ರ ಬಳಸಿ ಚರಂಡಿ, ರಸ್ತೆ ನಾಶ ಮಾಡಿ ಭೂಮಿ ಸಮತಟ್ಟು ಮಾಡಿ ವಶಕ್ಕೆ ಪಡೆಯಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.