ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುನೀರಿನ ವಿಷಪ್ರಾಶನ; ಜಲಚರಗಳ ಆಪೋಷನ

ನಗರದಲ್ಲಿ ಈ ವರ್ಷ 14 ಪ್ರಕರಣಗಳಲ್ಲಿ ಇಲ್ಲವಾದವು ಸಾವಿರಾರು ಮೀನು
Last Updated 1 ನವೆಂಬರ್ 2022, 20:18 IST
ಅಕ್ಷರ ಗಾತ್ರ

ಬೆಂಗಳೂರು: ಮೀನುಗಳಿಗೆ ತಾಣವಾಗಬೇಕಿದ್ದ ಬಿಬಿಎಂಪಿ ವ್ಯಾಪ್ತಿಯ ಕೆರೆಗಳು ಒಳಚರಂಡಿಯ ಕಲುಷಿತ ಕಪ್ಪು ನೀರು ಜಲಚರಗಳಿಗೆ ವಿಷಪ್ರಾಶನ ಮಾಡುತ್ತಿದೆ. ಇದರಿಂದ ಐದು ವರ್ಷಗಳಲ್ಲಿ 40 ಪ್ರಕರಣಗಳಲ್ಲಿ ಹಲವು ಟನ್‌ಗಟ್ಟಲೆ ಮೀನುಗಳು ಸತ್ತಿವೆ. ಈ ವರ್ಷ 14 ಪ್ರಕರಣಗಳು ಆಗಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನೂರಾರು ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಆದರೆ ಈ ಅಭಿವೃದ್ಧಿ ಪಥದಲ್ಲಿ ಮೂಲ ಆಶಯವಾಗಿರುವ ಒಳಚರಂಡಿ ನೀರು ಹರಿಯುವುದನ್ನು ತಡೆಯುವಲ್ಲಿ ಯಶ ಸಾಧಿಸಿಲ್ಲ. ಬಿಡಬ್ಲ್ಯುಎಸ್‌ಎಸ್‌ಬಿಯವರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದೇ ಇಷ್ಟೆಲ್ಲ ಕಲ್ಮಶಕ್ಕೆ ಪ್ರಮುಖ ಕಾರಣ. ಇನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಈ ಕಲ್ಮಶವನ್ನು ಕಂಡೂ ಕಾಣದಂತಿದೆ. ಇಬ್ಲೂರು ಕೆರೆಯಲ್ಲಿ ಅ.31ರಂದು ಮೀನುಗಳು ಸತ್ತಿವೆ.

ನಗರದಲ್ಲಿ 2017ರಿಂದ ಈವರೆಗೆ 31 ಕೆರೆಗಳಲ್ಲಿ 40 ಪ್ರಕರಣಗಳಲ್ಲಿ ಸಾವಿರಾರು ಮೀನುಗಳು ಸತ್ತಿವೆ. ಈ ವರ್ಷ 14 ಸಂದರ್ಭದಲ್ಲಿ ಜಲಚರಗಳು ಮೃತಪಟ್ಟಿವೆ. ಈ ಪ್ರಕರಣಗಳ ಬಗ್ಗೆ ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಈ ವರ್ಷ ಹರಳೂರು ಕೆರೆಯಲ್ಲಿ ಮೂರು, ಕೊತ್ತನೂರು ಕೆರೆಯಲ್ಲಿ ಎರಡು ಬಾರಿ ಮೀನುಗಳು ಸತ್ತಿವೆ.

‘ಬೆಂಕಿ ಕೆರೆ’ ಎಂದೇ ಕ
ರೆಯಲಾಗುವ ಬೆಳ್ಳಂದೂರು ಕೆರೆ, ಮಡಿವಾಳ ಕೆರೆ, ಶೀಲವಂತನಕೆರೆ, ಜಕ್ಕೂರು ಕೆರೆ ಹಾಗೂಕೊಮ್ಮಘಟ್ಟ
ಕೆರೆಯಲ್ಲಿ ತಲಾ ಎರಡು ಬಾರಿ ಮೀನು ಸತ್ತ ಪ್ರಕರಣಗಳು ದಾಖಲಾಗಿವೆ. ಇವುಗಳ ಬಗ್ಗೆ ಸಾಕಷ್ಟು ವರದಿಯಾಗಿದ್ದರೂ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿವೆ.

ಕಾಳಜಿ ಇಲ್ಲ: ‘ಕಲುಷಿತ ನೀರಿನಿಂದ ಕೆರೆಗಳಲ್ಲಿ ಮೀನುಗಳು ಸತ್ತಿವೆ, ಸಾಯುತ್ತಿವೆ ಎಂಬುದನ್ನು ಚಿತ್ರ–ವಿಡಿಯೊ ದಾಖಲೆ ಸಹಿತ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರೂ ಅವರು ಅದನ್ನು ಪರಿಗಣಿಸುತ್ತಿಲ್ಲ. ಏಳು ಕೆರೆಗಳಲ್ಲಿ ಮೀನುಗಳು ಸತ್ತೇ ಇಲ್ಲ ಎಂದು ಮಾಹಿತಿ ಹಕ್ಕು ಕಾಯಿದೆಯಡಿ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ. ಜೀವವೈವಿಧ್ಯದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾಳಜಿಯೇ ಇಲ್ಲ’ ಎಂದು ಆ್ಯಕ್ಷನ್ಏಡ್‌ನ ಕಾರ್ಯಕ್ರಮ ವ್ಯವಸ್ಥಾಪಕ ರಾಘವೇಂದ್ರ ಬಿ. ಪಚ್ಚಾಪುರ್‌ ದೂರಿದರು.

‘ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇತರೆ ಇಲಾಖೆಗಳ ಸಹಯೋಗದೊಂದಿಗೆ ಕೆರೆಗಳು ಹಾಗೂ ರಾಜಕಾಲುವೆಗಳ ಮೇಲೆ ನಿಗಾವಹಿಸಬೇಕು. ಯಾವುದೇ ರೀತಿಯ ಕಲ್ಮಶ ಕೆರೆಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಕೆರೆಗಳ ಶುಚಿತ್ವಕ್ಕೆ ಒಂದು ಹಂತದಲ್ಲಿ ಕಾರಣವಾಗುವ ಮೀನುಗಳ ಮಾರಣಹೋಮ ತಪ್ಪಿಸಬೇಕು. ಎಲ್ಲ ಕೆರೆಗಳ ನೀರಿನ ಗುಣಮಟ್ಟದ ಬಗ್ಗೆ ಕಾಲಕಾಲಕ್ಕೆ ಆನ್‌ಲೈನ್‌ನಲ್ಲಿ ಮಾಹಿತಿಯನ್ನು ಪ್ರಕಟಿಸಬೇಕು’ ಎಂದು ರಾಘವೇಂದ್ರ ಆಗ್ರಹಿಸಿದರು.

ಎಸ್‌ಟಿಪಿ ವೈಫಲ್ಯ!

ಆ್ಯಕ್ಷನ್‌ ಏಡ್‌ ಸಮೀಕ್ಷೆ ಪ್ರಕಾರ, ಹರಳೂರು ಕೆರೆಯಲ್ಲಿ 2019 ಹಾಗೂ 2022ರಲ್ಲಿ ಮೀನಿನ ಸಾವಿಗೆ ಕಾರಣ ಒಳಚರಂಡಿ ನೀರು. 2017ರಲ್ಲಿ ಕೈಗಾರಿಕೆ ತ್ಯಾಜ್ಯ ಇದಕ್ಕೆ ಕಾರಣವಾಗಿತ್ತು. ಇನ್ನು ಮಡಿವಾಳ ಕೆರೆಯಲ್ಲಿ 2018, 2019ರಲ್ಲಿ ಮೀನು ಸಾವಿಗೆ ಕಾರಣ ಒಳಚರಂಡಿ ತ್ಯಾಜ್ಯ. ಕೊಮ್ಮಘಟ್ಟ ಕೆರೆಯಲ್ಲಿ ಮೀನು ಸಾವಿಗೆ ಕಾರಣವಾದ ಅಂಶಗಳೆಂದರೆ ಒಳಚರಂಡಿ ನೀರು, ವಿಷಕಾರಿ ಅಂಶ, ಕೈಗಾರಿಕೆ ತ್ಯಾಜ್ಯ. ಬೆಳ್ಳಂದೂರು ಕೆರೆಯಲ್ಲಿ ವಿಷಕಾರಿ ಅಂಶ, ಕೈಗಾರಿಕೆ ತ್ಯಾಜ್ಯದಿಂದ ಮೀನುಗಳು ಸತ್ತಿವೆ. ಇನ್ನುಳಿದ ಕೆರೆಗಳಲ್ಲಿ ಒಳಚರಂಡಿ ನೀರು ಕಲುಷಿತಕ್ಕೆ ಕಾರಣವಾಗಿದೆ. ಮಡಿವಾಳ, ಹೆನ್ನಾಗರ, ರಾಚೇನಹಳ್ಳಿ, ಹೊರಮಾವು ಅಗರ, ಭಟ್ಟರಹಳ್ಳಿ ಕೆರೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಗಳ (ಎಸ್‌ಟಿಪಿ) ವೈಫಲ್ಯವೂ ಕಾರಣ.

ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಲಕ್ಷ್ಯ

ಕೆರೆಗಳಿಗೆ ಮಾಲಿನ್ಯ ಹರಿಯುವುದನ್ನು ನಿಯಂತ್ರಿಸುವ, ಅದಕ್ಕೆ ಸಂಬಂಧಪಟ್ಟಂತೆ ಕಾನೂನು ಕ್ರಮ ಕೈಗೊಳ್ಳಬೇಕಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಕೆರೆ, ಕಾಲುವೆ ಮಲಿನವಾಗುತ್ತಿರುವ ಬಗ್ಗೆ ನಾಗರಿಕರು, ಸಂಘ–ಸಂಸ್ಥೆಗಳು ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ‘ಬೇಕಾಬಿಟ್ಟಿ ಪರಿಶೀಲನೆ’ ನಡೆಸಿ ಎಲ್ಲವೂ ಸರಿ ಇದೆ ಎಂಬ ಷರಾ ಬರೆದು ಮಂಡಳಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರಿಂದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಇನ್ನು ಮಂಡಳಿಯಲ್ಲಿರುವ ಪರಿಸರ ಎಂಜಿನಿಯರ್‌ಗಳು ಸೇರಿ ಅಧಿಕಾರಿಗಳು ‘ನಮಗೆ ಈ ಜವಾಬ್ದಾರಿ ಇಲ್ಲ’ ಎಂದು ಉತ್ತರಿಸಿದರು.

ಯಾವ ವರ್ಷದಲ್ಲಿ ಎಲ್ಲೆಲ್ಲಿ ಮೀನು ಸಾವು?

2017; ಹರಳೂರು ಕೆರೆ

;ದುಬಾಸಿಪಾಳ್ಯ ಕರೆ

;ಚಿನ್ನಪ್ಪನಹಳ್ಳಿ ಕೆರೆ

;ದೊಡ್ಡಕಲ್ಲಸಂದ್ರ ಕೆರೆ

;ಸುಬ್ರಮಣ್ಯಪುರ ಕೆರೆ

;ಕಲ್ಕೆರೆ ಕೆರೆ

2018;ಪುಟ್ಟೇನಹಳ್ಳಿ ಕೆರೆ

;ಹಲಸೂರು ಕೆರೆ

;ಮಡಿವಾಳ ಕೆರೆ

;ಬೆಳ್ಳಂದೂರು ಕೆರೆ

;ಕೊಮ್ಮಘಟ್ಟ ಕೆರೆ

;ಸೀಗೆಹಳ್ಳಿ ಕೆರೆ

2019; ಮಡಿವಾಳ ಕೆರೆ

;ಮುನ್ನೇಕೊಳಾಲು ಕೆರೆ

;ಹರಳೂರು ಕೆರೆ

;ಶೀಲವಂತನಕೆರೆ

2020; ಹಲಗೆವಡೇರಹಳ್ಳಿ ಕೆರೆ

;ಕೋನಸಂದ್ರ ಕೆರೆ

;ಕೊಮ್ಮಘಟ್ಟ ಕೆರೆ

;ಬೆಳ್ಳಂದೂರು ಕೆರೆ

;ವರ್ತೂರು ಕೆರೆ

2021 ;ಹೆನ್ನಾಗರ ಕೆರೆ

;ಕ್ಯಾಲಸನಹಳ್ಳಿ ಕೆರೆ

;ಮುತ್ತಾನಲ್ಲೂರು ಕೆರೆ

;ಜಕ್ಕೂರು ಕೆರೆ

;ರಾಚೇನಹಳ್ಳಿ ಕೆರೆ

2022; ಹೊರಮಾವು ಅಗರ ಕೆರೆ

;ಕೊತ್ತನೂರು ಕೆರೆ

;ಹರಳೂರು ಕೆರೆ

;ಮಹದೇವಪುರ ಕೆರೆ

;ಕುಪ್ಪಾರೆಡ್ಡಿ ಕೆರೆ

;ಯಲಚೇನಹಳ್ಳಿ ಕೆರೆ

;ಭಟ್ಟರಹಳ್ಳಿ ಕೆರೆ

;ತೂಬರಹಳ್ಳಿ ಕೆರೆ

;ಜಕ್ಕೂರು ಕೆರೆ

;ಹರಳೂರು ಕೆರೆ

;ಪಣತ್ತೂರು ಕೆರೆ

;ಕೊತ್ತನೂರು ಕೆರೆ

;ಶೀಲವಂತನ ಕೆರೆ

;ಇಬ್ಲೂರು ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT