ಗುರುವಾರ , ಜುಲೈ 7, 2022
20 °C
ವಿಚಾರ ಮಂಥನ, ಚಿಂತನೆಗೆ ಹೊಸ ಹೊಳಪು ನೀಡಿದ ಗೋಷ್ಠಿಗಳು

ಒಳನೋಟಗಳ ಅನಾವರಣ: ಹೊಸ ವಿಚಾರಗಳ ಬುತ್ತಿ ಕಟ್ಟಿಕೊಟ್ಟ ಸಾಹಿತ್ಯ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‌ಸಾಹಿತ್ಯ, ಸಿನಿಮಾ, ರಾಜಕೀಯ, ವಿಜ್ಞಾನ, ಭಾಷೆಗಳ ಒಳನೋಟದ ಹೂರಣಗಳ ಚರ್ಚೆಗೆ ವೇದಿಕೆಯಾದ ಬೆಂಗಳೂರು ಸಾಹಿತ್ಯ ಉತ್ಸವ ಭಾನುವಾರ ಸಂಪನ್ನವಾಯಿತು. ಈ ‘ಚಿಂತಕರ ಚಾವಡಿ’ಯಲ್ಲಿ ಹತ್ತು ಹಲವು ವಿಚಾರಗಳ ಕುರಿತ ಗಹನವಾದ ಚರ್ಚೆಗಳಲ್ಲಿ ಪಾಲ್ಗೊಂಡ ಸಾಹಿತ್ಯಾಸಕ್ತರು ತಮ್ಮ ಜ್ಞಾನದ ಹರವನ್ನು ವಿಸ್ತರಿಸಿಕೊಂಡರು. ಹೊಸ ಅನುಭವಗಳ ಬುತ್ತಿಯೊಂದಿಗೆ ನಿರ್ಗಮಿಸಿದರು.

ಈ ಉತ್ಸವದ 10ನೇ ಆವೃತ್ತಿಯು ಕನ್ನಡ ನೆಲದ ಹಲವು ಭಾಷೆಗಳ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿತು. ಭಾಷಾ ಸಿರಿವಂತಿಕೆ ಕುರಿತ ಗೋಷ್ಠಿಗಳು ಉತ್ಸವಕ್ಕೆ ಮೆರುಗು ನೀಡಿದವು. ಬಹು ಭಾಷೆಗಳ ಸಾಮರಸ್ಯ ಹೇಗೆ ಈ ನಾಡಿನಲ್ಲಿ ಬಹುತ್ವ ಸಂಸ್ಕೃತಿಗೆ ತಳಹದಿಯಾಗಿದೆ ಎಂಬುದನ್ನು ಸೊಗಸಾಗಿ ಕಟ್ಟಿಕೊಟ್ಟವು.

ವಾರಾಂತ್ಯದಲ್ಲಿ ನಡೆದ ಈ ಉತ್ಸವದಲ್ಲಿ ರಾಜಕೀಯ ಸ್ಥಿತ್ಯಂತರ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ತರುವ ವಿಷಯಗಳು, ಆರ್ಥಿಕತೆ, ಸಾಹಿತ್ಯ ಕ್ಷೇತ್ರಕ್ಕೂ ತಟ್ಟಿದ ಡಿಜಿಟಲ್‌ ಕ್ರಾಂತಿ, ಮಹಿಳೆಯರ ಸ್ಥಿತಿಗತಿ ಕುರಿತ ಚರ್ಚೆಗಳು ಗಮನಸೆಳೆದವು.

ಜಗತ್ತನ್ನೇ ಆತಂಕಕ್ಕೆ ತಳ್ಳಿದ ಕೊರೊನಾ ವೈರಸ್‌ ಹಿಂದಿನ ಮರ್ಮಗಳಿ, ವಿಜ್ಞಾನಿ ಜೆಬಿಎಸ್‌. ಹಲ್ದಾನೆ ಅವರ ಜೀವನ ಕುರಿತ ಚರ್ಚೆಗಳು ವಿಜ್ಞಾನದ ರೋಚಕ ಸಂಗತಿಗಳನ್ನು ತೆರೆದಿಟ್ಟವು. ಭಾರತಕ್ಕೆ ಭೇಟಿ ನೀಡಿದ್ದ ಹಲ್ದಾನೆ, ಇಲ್ಲಿನ ಸಂಸ್ಕೃತಿ ಮತ್ತು ಜನ ಜೀವನವನ್ನು ಬಹುವಾಗಿ ಮೆಚ್ಚಿಕೊಂಡಿದ್ದ ವಿಷಯವನ್ನು ಲೇಖಕ ಸಮಂತ ಸುಬ್ರಮಣಿಯನ್‌ ವಿವರಿಸಿದರು.

ದೇಶದ ವಿವಿಧೆಡೆಯ ವಿದ್ವಾಂಸರು, ಲೇಖಕರು ಹಂಚಿಕೊಂಡ ಚಿಂತನೆಗಳಿಂದ ಸಾಹಿತ್ಯ ಜಾತ್ರೆ ಕಳೆಗಟ್ಟಿತು. ನಾಲ್ಕು ವೇದಿಕೆಗಳಲ್ಲಿ ನಡೆದ ಗೋಷ್ಠಿಗಳಲ್ಲಿ ಸಭಿಕರ ಪ್ರಶ್ನೆಗಳು ವಿಚಾರ ಮಂಥನಕ್ಕೆ ಪುಟ್ಟವಿಟ್ಟಂತಿದ್ದವು. ಇನ್ನೊಂದೆಡೆ ಹೊಸ ಪುಸ್ತಕಗಳ ಖರೀದಿ ಭರಾಟೆಯೂ ಜೋರಾಗಿತ್ತು. 

‘ಮಾರುಕಟ್ಟೆ ಕಂಡುಕೊಳ್ಳುವುದು ಹೊಸ ಲೇಖಕರಿಗೆ ಸವಾಲು’
ಬೆಂಗಳೂರು:
‘ಹೊಸ ಲೇಖಕರು ಮಾರುಕಟ್ಟೆ ಕಂಡುಕೊಳ್ಳುವುದು ನಿಜಕ್ಕೂ ಸವಾಲು’ ಎಂದು ಲೇಖಕಿ ಗಾಯತ್ರಿ ಚಂದ್ರಶೇಖರನ್‌ ಅಭಿಪ್ರಾಯಪಟ್ಟರು.

ಅನಿಲ್‌ ಅಬ್ರಹಾಂ ಅವರು ನಡೆಸಿಕೊಟ್ಟ ಸಂವಾದದಲ್ಲಿ ಗಾಯತ್ರಿ ಅವರು ತಮ್ಮ ‘ಬ್ಯಾಂಗಲೂರ್ಡ್‌’ ಕಾದಂಬರಿಯ ಕುರಿತು ಭಾನುವಾರ ಅನಿಸಿಕೆ ಹಂಚಿಕೊಂಡರು.

‘ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಅಷ್ಟಾಗಿ ಸಕ್ರಿಯಳಾಗಿರಲಿಲ್ಲ. ನನ್ನ ಮೊದಲ ಕೃತಿ ಇದು. ಇದರ ಪ್ರಚಾರಕ್ಕೆ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ಗಳ ಮೊರೆ ಹೋಗಬೇಕಾಯಿತು’ ಎಂದರು.

‘ಜನರಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂಬುದನ್ನು ನಾನೂ ಒಪ್ಪುತ್ತೇನೆ. ನಾನು ಕೂಡ ಹೆಚ್ಚು ಓದುವುದಿಲ್ಲ. ನಮಗೆ ಸಂಬಂಧವೇ ಇಲ್ಲದ ವಿಚಾರಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ  ಚರ್ಚೆಯಲ್ಲಿ ಜನ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಮನರಂಜನೆಗೆ ಕೆಲವು ಸುಲಭ ಮಾರ್ಗಗಳಿವೆ. ಹಾಗಾಗಿ ಜನ ಪುಸ್ತಕಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ’ ಎಂದು ಅಭಿಪ‍್ರಾಯಪಟ್ಟರು. 

‘ಪ್ರತಿಯೊಬ್ಬರೂ ವಿಭಿನ್ನ ಚಿಂತನೆಗಳನ್ನು ಹೊಂದಿರುತ್ತಾರೆ. ಹಾಗಾಗಿ ಭಿನ್ನಾಭಿಪ್ರಾಯಗಳೂ ಸಹಜ. ಕೆಲವರು ಸಮಾಜ ಸುಧಾರಣೆಯ ದೃಷ್ಟಿಯಿಂದ ಆಲೋಚಿಸಿದರೆ, ಇನ್ನು ಕೆಲವರದು ಬೇರೆಯೇ ಹಾದಿ. ಜನರ ಮನಸುಗಳನ್ನು ಬದಲಾಯಿಸುವುದು ತೀರಾ ಕಷ್ಟದ ಕೆಲಸ. ಒಬ್ಬ ಸಾಹಿತಿಯು ಕೃತಿಯಲ್ಲಿ ಸಂದೇಶಗಳನ್ನು ನೀಡುವ ಮೂಲಕ ಪರೋಕ್ಷವಾಗಿ ಈ ಪ್ರಯತ್ನ ಮಾಡಬಹುದು ಅಷ್ಟೇ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು