ನಿಧಾನಗತಿಯಲ್ಲಿ ಸಾಗಿದ ಮೆಟ್ರೊ
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಕೆ.ಆರ್. ಮಾರುಕಟ್ಟೆ–ನ್ಯಾಷನಲ್ ಕಾಲೇಜು ನಿಲ್ದಾಣಗಳ ನಡುವೆ ನಾಲ್ಕೈದು ದಿನಗಳಿಂದ ಮೆಟ್ರೊ ವಿಪರೀತ ನಿಧಾನವಾಗಿ ಸಾಗುತ್ತಿದೆ. ಹಳಿ ನಿರ್ವಹಣೆ ನಡೆಯುತ್ತಿದ್ದರಿಂದ ಹೀಗಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಆರ್. ಮಾರುಕಟ್ಟೆ ಮೆಟ್ರೊ ನಿಲ್ದಾಣದಿಂದ ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣಕ್ಕೆ ನಡೆದುಕೊಂಡು ಹೋದರೂ ಇದಕ್ಕಿಂತ ವೇಗವಾಗಿ ತಲುಪಬಹುದು. ಬೆಳಿಗ್ಗೆ ಕೆಲಸಕ್ಕೆ ತೆರಳುವವರಿಗೆ ಬಹಳ ತೊಂದರೆಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಳಿ ನಿರ್ವಹಣೆ ಕೆಲಸ ಭಾನುವಾರ ಮುಗಿದಿದೆ. ಸೋಮವಾರದಿಂದ ಯಾವುದೇ ತಡೆಯಿಲ್ಲದೇ ಮೆಟ್ರೊ ಸಂಚರಿಸಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.