ಬೆಂಗಳೂರು: ನಗರದ ಮಲ್ಲೇಶ್ವರದ ಪೈಪ್‌ಲೈನ್‌ನ ಕೆ.ವಿ.ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಮಹಿಳೆಯೊಬ್ಬರನ್ನು 30ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ, ಅವರ ಮೃತದೇಹವನ್ನು ಫ್ರಿಡ್ಜ್‌ನಲ್ಲಿ ಬಚ್ಚಿಟ್ಟಿದ್ದ ಪ್ರಕರಣ ತಡವಾಗಿ ಪತ್ತೆಯಾಗಿದೆ.
ಮಹಾಲಕ್ಷ್ಮಿ(29) ಕೊಲೆಯಾದವರು. ಪ್ರಕರಣ ದಾಖಲಿಸಿಕೊಂಡಿರುವ ವೈಯಾಲಿಕಾವಲ್ ಠಾಣೆ ಪೊಲೀಸರು, ಪರಾರಿಯಾಗಿರುವ ಆರೋಪಿ ಪತ್ತೆಗೆ ಶೋಧ ಆರಂಭಿಸಿದ್ದಾರೆ.
ಕೃತ್ಯದ ನಡೆದ ಸ್ಥಳಕ್ಕೆ ಬೆರಳಚ್ಚು, ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು, ಶ್ವಾನದಳ ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ದೆಹಲಿಯಲ್ಲಿ ನಡೆದಿದ್ದ ಶ್ರದ್ದಾ ವಾಕರ್ ಕೊಲೆ ಪ್ರಕರಣದ ಮಾದರಿಯಲ್ಲೇ ಈ ಕೊಲೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೊಲೆಯಿಂದ ಅಕ್ಕಪಕ್ಕದ ನಿವಾಸಿಗಳು ಆತಂಕಗೊಂಡಿದ್ದಾರೆ.
‘ಕೃತ್ಯ ನಡೆದ ಅಕ್ಕಪಕ್ಕದ ರಸ್ತೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗಿದೆ. ಕೊಲೆಯಾದ ಮಹಿಳೆಯ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಆಕೆ ಯಾರಿಗೆಲ್ಲ ಕರೆ ಮಾಡಿದ್ದರು ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಸುಳಿವು ಸಿಕ್ಕಿದ್ದು ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದರು.
ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.3ರಂದೇ ಮೊಬೈಲ್ ಸ್ವಿಚ್ಡ್ ಆಫ್: ಮಹಾಲಕ್ಷ್ಮಿ ಅವರ ಮೊಬೈಲ್ ಸೆ.3ರಂದೇ ಸ್ವಿಚ್ಡ್ ಆಫ್ ಆಗಿತ್ತು. ಅಂದೇ ಕೊಲೆ ಮಾಡಿ ಆರೋಪಿ ಪರಾರಿ ಆಗಿರುವ ಶಂಕೆ ವ್ಯಕ್ತವಾಗಿದೆ.
‘ಮಹಾಲಕ್ಷ್ಮಿ ಅವರ ಪೋಷಕರು ನೇಪಾಳದವರು. 30 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ವಾಸಿಸುತ್ತಿದ್ದರು. ಮಹಾಲಕ್ಷ್ಮಿ ಅವರು ಪಶ್ಚಿಮ ಬಂಗಾಳದ ಹೇಮಂತ್‌ದಾಸ್ ಅವರನ್ನು ಐದು ವರ್ಷದ ಹಿಂದೆ ಮದುವೆ ಆಗಿದ್ದರು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದೆ. ದಂಪತಿ ಮಧ್ಯೆ ಇತ್ತೀಚೆಗೆ ವೈಮನಸ್ಸು ಉಂಟಾಗಿತ್ತು. ಮಹಾಲಕ್ಷ್ಮಿ ಅವರು ಪತಿಯಿಂದ ಪ್ರತ್ಯೇಕವಾಗಿ ಆರು ತಿಂಗಳಿಂದ ಪೈಪ್‌ಲೈನ್ ಕೆ.ವಿ. ರಸ್ತೆಯ ನಾಲ್ಕು ಅಂತಸ್ತಿನ ಕಟ್ಟಡದ ಒಂದನೇ ಮಹಡಿಯ ಬಾಡಿಗೆ ಮನೆಯಲ್ಲಿ ಒಬ್ಬರೇ ಇದ್ದರು. ಬಾಡಿಗೆ ಮನೆಯನ್ನು ಸ್ನೇಹಿತೆಯರು ಕೊಡಿಸಿದ್ದರು. ಮಗು ಅಜ್ಜಿಯ ಜತೆಗಿತ್ತು. ದಂಪತಿ ವಿಚ್ಛೇದನ ಪಡೆದುಕೊಂಡಿರಲಿಲ್ಲ’ ಎಂದು ಪೊಲೀಸರು ಹೇಳಿದರು.
‘ಮಹಾಲಕ್ಷ್ಮಿ ಅವರು ಪ್ರತಿನಿತ್ಯ ಕೆಲಸಕ್ಕೆ ಹೋಗಿಬರುತ್ತಿದ್ದನ್ನು ಅಕ್ಕಪಕ್ಕದ ನಿವಾಸಿಗಳು ಗಮನಿಸಿದ್ದರು. 20 ದಿನಗಳಿಂದ ಅವರ ಸುಳಿವು ಇರಲಿಲ್ಲ. ಅನುಮಾನಗೊಂಡು ಅಕ್ಕಪಕ್ಕದ ಮನೆಯವರು ಸ್ನೇಹಿತೆಯರಿಂದ ಫೋನ್ ಸಂಖ್ಯೆ ಪಡೆದು ಮಹಾಲಕ್ಷ್ಮಿ ಅವರ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅವರು ಬಂದು ಬೀಗ ಒಡೆದು ಶನಿವಾರ ಸಂಜೆ ಮನೆ ಪರಿಶೀಲಿಸಿದರು. ಬಾಗಿಲು ತೆರೆಯುತ್ತಿದ್ದಂತೆಯೇ ದುರ್ವಾಸನೆ ಬರಲು ಆರಂಭಿಸಿತ್ತು. ರಕ್ತದ ಕಲೆಗಳು ಮನೆಯಲ್ಲಿ ಪತ್ತೆಯಾದವು. ಮನೆಯಲ್ಲಿದ್ದ ಫ್ರಿಡ್ಜ್‌ನ ಬಾಗಿಲು ತೆರೆದು ಪರಿಶೀಲಿಸಿದಾಗ ಕೊಲೆ ನಡೆದಿರುವುದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು’ ಎಂದು ಮೂಲಗಳು ತಿಳಿಸಿವೆ.
ಪತಿಯ ವಿಚಾರಣೆ: ‘ಹೇಮಂತ್‌ದಾಸ್ ಅವರು ನೆಲಮಂಗಲದಲ್ಲಿ ಮೊಬೈಲ್ ಬಿಡಿಭಾಗ ಮಾರಾಟ ಮಾಡುತ್ತಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರತ್ಯೇಕವಾಗಿ ವಾಸಿಸಲು ಕಾರಣ ಏನು ಎಂಬ ಮಾಹಿತಿ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಾಯಿ ನೋಡಿಕೊಳ್ಳುವ ವಿಚಾರವಾಗಿ ಮಹಾಲಕ್ಷ್ಮಿ ಅವರು ನಮ್ಮೊಂದಿಗೆ ಮಾತನಾಡುತ್ತಿದ್ದರು. ಹೆಚ್ಚು ಮಾತನಾಡುತ್ತಿರಲಿಲ್ಲ. ಮನೆಯಲ್ಲಿ ಒಂಟಿಯಾಗಿ ಇರುತ್ತಿದ್ದರು. ಕೆಲವು ದಿನಗಳ ಕಾಲ ಅವರ ಅಣ್ಣ ಮನೆಗೆ ಬಂದಿದ್ದರು. ಅವರು ಹೋದ ಬಳಿಕ ಈಕೆ ಒಬ್ಬಳೇ ಮನೆಯಲ್ಲಿ ಇರುತ್ತಿದ್ದಳು’ ಎಂದು ಸ್ಥಳೀಯರೊಬ್ಬರು ಹೇಳಿದರು.
ಬೈಕ್‌ನಲ್ಲಿ ಬಂದು ಹೋಗುತ್ತಿದ್ದ ಯುವಕ
‘ಮಹಾಲಕ್ಷ್ಮಿ ಅವರು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆ ಬಳಿಗೆ ಪ್ರತಿನಿತ್ಯ ಯುವಕನೊಬ್ಬ ಬಂದು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ. ಸಂಜೆ ಬಂದು ಬಿಟ್ಟು ಹೋಗುತ್ತಿದ್ದ. ಆತನೇ ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಯುವಕನ ಮೊಬೈಲ್ ಸಂಖ್ಯೆ ಪತ್ತೆಯಾಗಿದ್ದು ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಆರೋಪಿ ಪತ್ತೆಗೆ ವೈಯಾಲಿಕಾವಲ್ ಶೇಷಾದ್ರಿಪುರ ಹಾಗೂ ಹೈಗ್ರೌಂಡ್ಸ್ ಪೊಲೀಸರು ತನಿಖೆ ಆರಂಭಿಸಿದ್ದು ಒಟ್ಟು ಎಂಟು ತಂಡ ರಚಿಸಿದ್ದಾರೆ. ಅನುಮಾನಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು ಕುಟುಂಬಸ್ಥರ ಬಳಿಯೂ ಮಾಹಿತಿ ಕಲೆ ಹಾಕಿದ್ದಾರೆ. ಮಹಾಲಕ್ಷ್ಮಿ ಜತೆಗೆ ಸಂಪರ್ಕದಲ್ಲಿದ್ದ ಎಲ್ಲ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ಫ್ರಿಡ್ಜ್ ಆನ್ ಮಾಡಿಟ್ಟಿದ್ದ ಆರೋಪಿ
‘ಮೃತದೇಹವನ್ನು ಪ್ರತ್ಯೇಕವಾಗಿಸಿ ಫ್ರಿಡ್ಜ್‌ನಲ್ಲಿ ತುಂಬಿದ್ದ ಆರೋಪಿ ಫ್ರಿಡ್ಜ್ ಆನ್ ಮಾಡಿದ್ದ. ಫ್ರಿಡ್ಜ್‌ನಲ್ಲಿ ಮೃತದೇಹ ಇಟ್ಟುಹೋದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಈ ರೀತಿ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸರು ಹೇಳಿದರು.
ಕೊಲೆ ನಡೆದು ಕೆಲವು ದಿನಗಳೇ ಆಗಿರಬಹುದು. ಆರೋಪಿಯ ಶೋಧ ಕಾರ್ಯಾಚರಣೆಗೆ ಚುರುಕು ನೀಡಲಾಗಿದೆ.–ಸತೀಶ್ ಕುಮಾರ್, ಹೆಚ್ಚುವರಿ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.